ಶುಕ್ರವಾರ, ಡಿಸೆಂಬರ್ 4, 2020
21 °C
ಹಸಿರು ಪಟಾಕಿ ಪರಿಣಾಮ; ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ

ದೀಪಾವಳಿ: ಶಬ್ದ, ವಾಯು ಮಾಲಿನ್ಯ ಕುಂಠಿತ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಈ ಬಾರಿಯ ದೀಪಾವಳಿಯಲ್ಲಿ ಹಸಿರು ಪಟಾಕಿಯನ್ನು ಮಾತ್ರ ಬಳಸಬೇಕು ಎಂಬ ಸರ್ಕಾರದ ನಿಯಮದಿಂದಾಗಿ ಜಿಲ್ಲಾ ಕೇಂದ್ರದಲ್ಲೂ ಶಬ್ದ ಮಾಲಿನ್ಯ ಹಾಗೂ ವಾಯುಮಾಲಿನ್ಯ ಪ್ರಮಾಣ ಕುಂಠಿತವಾಗಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಅಂಕಿ ಅಂಶಗಳ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶಬ್ದ ಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಇಳಿದಿದೆ. ವಾಯು ಮಾಲಿನ್ಯ ಕೂಡ ಕಡಿಮೆಯಾಗಿದ್ದು, ಗಾಳಿಯ ಗುಣಮಟ್ಟಕ್ಕೆ ಧಕ್ಕೆಯಾಗಿಲ್ಲ. ಗುಣಮಟ್ಟದ ಸೂಚಿಯು (ಎಕ್ಯುಐ) 50ರ ಒಳಗಡೆಯೇ ಇದೆ.

ಪ್ರತಿ ವರ್ಷ ಪಟಾಕಿಗಳ ಬಳಕೆ ಹೆಚ್ಚು ಇರುತ್ತಿತ್ತು. ಈ ಬಾರಿ ಕೋವಿಡ್‌ ಕಾರಣದಿಂದ ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ, ಹೆಚ್ಚು ಮಾಲಿನ್ಯಕಾರಕಗಳನ್ನು ಸೂಸದ ಪರಿಸರ ಸ್ನೇಹಿ ಪಟಾಕಿಗಳನ್ನು ಮಾರಾಟ ಮಾಡಲು ಮಾತ್ರ ರಾಜ್ಯ ಸರ್ಕಾರ ಅನುಮತಿ ನೀಡಿತ್ತು.

ಮಾಲಿನ್ಯ ನಿಯಂತ್ರಣ ಮಂಡಳಿಯ ನಗರದ ಪ್ರಾದೇಶಿಕ ಕಚೇರಿಯು ದೀಪಾವಳಿ ಆಚರಣೆ ನಡೆದಿದ್ದ ನವೆಂಬರ್‌ 14, 15 ಮತ್ತು 16ರಂದು ನಗರದಲ್ಲಿ ಉಂಟಾಗಿರುವ ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯ ಪ್ರಮಾಣವನ್ನು ಅಳೆದಿದೆ. ಈ ಬಾರಿಯ ಅಂಕಿ ಅಂಶಗಳನ್ನು ಕಳೆದ ಬಾರಿಯ (ಅಕ್ಟೋಬರ್‌ 27, 28 ಮತ್ತು 29) ದತ್ತಾಂಶಗಳೊಂದಿಗೆ ಹೋಲಿಕೆ ಮಾಡಿ ವರದಿ ಸಿದ್ಧಪಡಿಸಿದ್ದು, ಶಬ್ದ ಮಾಲಿನ್ಯ ಹೋದ ವರ್ಷಕ್ಕಿಂತ ಕಡಿಮೆಯಾಗಿರುವುದನ್ನು ಉಲ್ಲೇಖಿಸಿದೆ. ಅಲ್ಲದೇ ಮೂರೂ ದಿನಗಳಲ್ಲಿ ನಗರದಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿತ್ತು ಎಂದು ಹೇಳಿದೆ.

ಕಳೆದ ವರ್ಷ ದೀಪಾವಳಿಯ ಮೊದಲ ದಿನ ನಗರದಲ್ಲಿ ಶಬ್ದ ಮಾಲಿನ್ಯದ ಪ್ರಮಾಣ 61.23 ಡೆಸಿಬಲ್‌ಗಳಿದ್ದರೆ, ಈ ವರ್ಷ ಮೊದಲ ದಿನ 56.21 ಡೆಸಿಬಲ್‌ಗಳಷ್ಟಿತ್ತು. ಎರಡನೇ ದಿನ ಕ್ರಮವಾಗಿ 64.53 ಡೆಸಿಬಲ್‌ ಹಾಗೂ 56.2 ಡೆಸಿಬಲ್‌ ಇತ್ತು. ಹಬ್ಬದ ಮೂರನೇ ಹಾಗೂ ಹಬ್ಬದ ಕೊನೆಯ 2019ರಲ್ಲಿ 62.3 ಡೆಸಿಬಲ್‌ ಪ್ರಮಾಣದಲ್ಲಿ ಶಬ್ದ ಉಂಟಾಗಿದ್ದರೆ, ಈ ವರ್ಷ 54.27ರಷ್ಟು ಡೆಸಿಬಲ್‌ನಷ್ಟಿತ್ತು.

‘ಜಿಲ್ಲಾ ಕೇಂದ್ರದಲ್ಲಿ ಮಾತ್ರ ಶಬ್ದ ಮಾಲಿನ್ಯ ಪ್ರಮಾಣವನ್ನು ಅಳೆದಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶಬ್ದ ಮಾಲಿನ್ಯದ ಪ್ರಮಾಣ ಕಡಿಮೆಯಾಗಿದೆ. ಹಸಿರು ಪಟಾಕಿ ಮಾತ್ರ ಬಳಸಬೇಕು ಎಂಬ ಆದೇಶ ಇದ್ದುದರಿಂದ, ಜನರು ಹೆಚ್ಚು ಶಬ್ದ ಉಂಟು ಮಾಡುವ ಪಟಾಕಿಗಳನ್ನು ಬಳಸದೆ ಪರಿಸರ ಸ್ನೇಹಿ ದೀಪಾವಳಿ ಆಚರಿಸಿದ್ದಾರೆ’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಎಂ.ಜಿ.ರಘುರಾಮ್‌‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಗಾಳಿಯ ಗುಣಮಟ್ಟ ಉತ್ತಮ

ಹಬ್ಬದ ಸಂದರ್ಭದಲ್ಲಿ ಗಾಳಿಯ ಗುಣಮಟ್ಟವನ್ನು ಎರಡು ಕೇಂದ್ರಗಳ ಮೂಲಕ ಅಳೆಯಲಾಗಿದೆ. ಗಾಳಿ ಗುಣಮಟ್ಟ ಸೂಚಿಯು (ಎಕ್ಯುಐ) 0–50ರ ಒಳಗಿದ್ದರೆ ಉತ್ತಮ, 51–100ರವರೆಗಿದ್ದರೆ ತೃಪ್ತಿದಾಯಕ, 101–200ರ ವರೆಗಿದ್ದರೆ ಮಧ್ಯಮ, 201–300ವರೆಗೆ ಇದ್ದರೆ ಕಳಪೆ. ಅದಕ್ಕಿಂತಲೂ ಹೆಚ್ಚಿದ್ದರೆ ಅಪಾಯಕಾರಿ ಎಂದು ಗುರುತಿಸಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಒಂದು ಕೇಂದ್ರದಲ್ಲಿ ದಾಖಲಾಗಿರುವ ಮಾಹಿತಿಯಲ್ಲಿ ಒಂದು ದಿನ ಮಾತ್ರ ಗಾಳಿಯ ಗುಣಮಟ್ಟ ಸೂಚಿ ತೃಪ್ತಿದಾಯಕ (51–100) ಮಟ್ಟದಲ್ಲಿದೆ. ಹೋದ ವರ್ಷ ಮೂರು ದಿನಗಳಲ್ಲಿಯೂ ಇದು ತೃಪ್ತಿದಾಯಕ ಮಟ್ಟದಲ್ಲಿತ್ತು. ಉಳಿದ ದಿನಗಳಲ್ಲಿ ಎರಡೂ ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ಸೂಚಿ 50ರ ಒಳಗೆಯೇ ಇದೆ.

‘ಈ ಬಾರಿ ಮೂರೂ ದಿನಗಳ ಕಾಲ ವಾಯು ಮಾಲಿನ್ಯ ಹೆಚ್ಚಾಗಿಲ್ಲ. ಗಾಳಿಯ ಗುಣಮಟ್ಟದ ಸೂಚಿ ಉತ್ತಮ ವಲಯದಲ್ಲೇ (0–50) ಇದೆ. ಪಟಾಕಿ ಬಳಕೆ ಕಡಿಮೆಯಾಗಿದ್ದರಿಂದ ಇದು ಸಾಧ್ಯವಾಗಿದೆ’ ಎಂದು ರಘುರಾಮ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು