ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಹೊರ ಜಿಲ್ಲೆಯ 240 ವಿದ್ಯಾರ್ಥಿಗಳಿಗೆ ಇಲ್ಲಿ ಪರೀಕ್ಷೆ

ದ್ವಿತೀಯ ಪಿಯುಸಿ: ಜೂನ್ 18‌ರಂದು ಇಂಗ್ಲಿಷ್‌ ಪರೀಕ್ಷೆ, 6,535 ವಿದ್ಯಾರ್ಥಿಗಳ ನೋಂದಣಿ
Last Updated 11 ಜೂನ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಲಾಕ್‌ಡೌನ್‌ ಕಾರಣಕ್ಕೆ ಮಾರ್ಚ್‌ ತಿಂಗಳಲ್ಲಿ ಬಾಕಿ ಯಾಗಿದ್ದ 2019–20ನೇ ಸಾಲಿನ ದ್ವಿತೀಯ ಪಿಯುಸಿಯ ಇಂಗ್ಲಿಷ್‌ ವಿಷಯದ ಪರೀಕ್ಷೆ ಇದೇ 18ರಂದು ನಡೆಯಲಿದ್ದು, ಪಿಯು ಇಲಾಖೆ ಸಿದ್ಧತೆಯಲ್ಲಿ ತೊಡಗಿದೆ.

ಕೋವಿಡ್‌ ‌19 ಕಾರಣದಿಂದ ಹೊರ ಜಿಲ್ಲೆಯ ಪಿಯು ಕಾಲೇಜುಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ ತಮ್ಮ ಊರಿನ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿದ್ದು, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈ ಹಿಂದೆ ಪರೀಕ್ಷೆ ಬರೆದಿದ್ದ 240 ವಿದ್ಯಾರ್ಥಿಗಳು ಜಿಲ್ಲೆಯ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜಿಲ್ಲೆಯ 13 ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.

ಹೊರ ಜಿಲ್ಲೆಯವರೂ ಸೇರಿದಂತೆ 6,535 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. 16 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಸುರಕ್ಷಿತ ಅಂತರ ಕಾಪಾಡುವ ಉದ್ದೇಶದಿಂದ ಪರೀಕ್ಷಾ ಕೊಠಡಿಗಳಲ್ಲಿ ಕಡಿಮೆ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕಾಗಿರುವುದರಿಂದ ಈಗ ಇರುವ ಪರೀಕ್ಷಾ ಕೇಂದ್ರಗಳಿಗೆ ಹೆಚ್ಚುವರಿಯಾಗಿ ಆರು ಬ್ಲಾಕ್‌ಗಳನ್ನು (ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ತಾಲ್ಲೂಕುಗಳಲ್ಲಿ ತಲಾ ಒಂದು, ಯಳಂದೂರಿನಲ್ಲಿ ಎರಡು) ಸೇರ್ಪಡೆಗೊಳಿಸಲಾಗಿದೆ.

‘ನಮ್ಮಲ್ಲಿ ಈ ಹಿಂದೆ6,308 ವಿದ್ಯಾರ್ಥಿಗಳು ಇಂಗ್ಲಿಷ್‌ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ನಮ್ಮ ಜಿಲ್ಲೆಯ 13 ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದೇ ರೀತಿ ಹೊರ ಜಿಲ್ಲೆಗಳ 240 ವಿದ್ಯಾರ್ಥಿಗಳು ಇಲ್ಲಿ ಪರೀಕ್ಷೆ ಬರೆಯಲಿದ್ದಾರೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಎಸ್‌.ಕೃಷ್ಣಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನೆರೆ ರಾಜ್ಯದಲ್ಲಿ ಏಳು ಮಂದಿ: ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲೆಯ ಒಬ್ಬ ವಿದ್ಯಾರ್ಥಿ ಕೇರಳ ಹಾಗೂ ಆರು ಮಂದಿ ತಮಿಳುನಾಡಿನಲ್ಲಿ ಸಿಲುಕಿಕೊಂಡಿದ್ದು, ಅವರು ಪರೀಕ್ಷೆಗೆ ಹಾಜರಾಗುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ಇದೆ. ಜಿಲ್ಲಾಧಿಕಾರಿ ಅವರು ವಿದ್ಯಾರ್ಥಿಗಳಿಗೆ ಪಾಸ್‌ ನೀಡಲಿದ್ದಾರೆ' ಎಂದು ಅವರು ಮಾಹಿತಿ ನೀಡಿದರು.

ಬಸ್‌ ವ್ಯವಸ್ಥೆ: ‘ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು ಅನುಕೂಲ ಕಲ್ಪಿಸಲು ಸಾರಿಗೆ ವ್ಯವಸ್ಥೆ ಮಾಡಲಾಗುವುದು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕೇಂದ್ರಕ್ಕೆ ಬರುವ ಮಾರ್ಗಗಳ ನಕ್ಷೆಯನ್ನು ಸಿದ್ಧಪಡಿಸಲಾಗುತ್ತಿದೆ. ಅವರು ಇರುವ ಪ್ರದೇಶದಿಂದ ಸಂಚರಿಸಲು ಏನು ವ್ಯವಸ್ಥೆ ಇದೆ ಎಂಬುದನ್ನು ತಿಳಿಯಲಾಗುತ್ತಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪ‍ತ್ರ ತೋರಿಸಿದರೆ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ’ ಎಂದರು.

ಪ್ರೌಢಶಾಲಾ ಶಿಕ್ಷಕರ ನೆರವು: ಕೊಠಡಿ ಯಲ್ಲಿ ಹೆಚ್ಚು ವಿದ್ಯಾರ್ಥಿ ಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗದಿರುವುದರಿಂದ ಹೆಚ್ಚುವರಿ ಕೊಠಡಿಗಳ ಹಾಗೂ ಮೇಲ್ವಿಚಾರಕರ ಅವಶ್ಯಕತೆ ಇದೆ. ಈ ಸಮಸ್ಯೆಯನ್ನು ಬಗೆಹರಿಸಲು ಪಿಯು ಇಲಾಖೆ ಪ್ರೌಢಶಾಲಾ ಶಿಕ್ಷಕರು ಹಾಗೂ ಪ್ರೌಢಶಾಲೆಗಳ ಕೊಠಡಿ ಹಾಗೂ ಪೀಠೋಪಕರಣಗಳನ್ನು ಬಳಸಿಕೊಳ್ಳಲು ತೀರ್ಮಾನಿಸಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಎಲ್ಲ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಡಿಡಿಪಿಯು ಕೃಷ್ಣಮೂರ್ತಿ ಅವರು ಪತ್ರ ಬರೆದಿದ್ದಾರೆ.

ಪ್ರಾಂಶುಪಾಲರ ಸಂಘದಿಂದ ಮಾಸ್ಕ್‌: ಕೋವಿಡ್‌–19 ತಡೆಗಾಗಿ ಪರೀಕ್ಷಾ ಕೇಂದ್ರದಲ್ಲಿ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕಾಗಿದ್ದು, ವಿದ್ಯಾರ್ಥಿಗಳು ಮಾಸ್ಕ್‌ ಧರಿಸುವುದು ಕಡ್ಡಾಯ. ಎಲ್ಲ ವಿದ್ಯಾರ್ಥಿಗಳಿಗೆ ಜಿಲ್ಲಾ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಪ್ರಾಂಶು‍ಪಾಲರ ಸಂಘ ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸುವ ನಿರ್ಧಾರ ಕೈಗೊಂಡಿದೆ. ಮರುಬಳಕೆ ಮಾಡಬಹುದಾದ ಬಟ್ಟೆಯ ಮಾಸ್ಕ್‌ಗಳನ್ನು ಎಲ್ಲ ವಿದ್ಯಾರ್ಥಿಗಳಿಗೂ ಸಂಘ ಹಂಚಲಿದೆ.

ಪರೀಕ್ಷಾ ಕೊಠಡಿಗಳಲ್ಲಿಸುರಕ್ಷಿತ ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ, ಕೊಠಡಿಯ ಗಾತ್ರಕ್ಕೆ ಅನುಗುಣವಾಗಿ ಕನಿಷ್ಠ 12ರಿಂದ ಗರಿಷ್ಠ 24 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.

‘ಸ್ಯಾನಿಟೈಸರ್‌, ಕೈತೊಳೆಯಲು ಸಾಬೂನು ಮತ್ತು ನೀರಿನ ವ್ಯವಸ್ಥೆ ಮಾಡಲಾಗುವುದು. ಜ್ವರ, ಕೆಮ್ಮು ಹಾಗೂ ಇನ್ನಿತರ ರೋಗ ಲಕ್ಷಣ ಇರುವವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುವುದು’ ಎಂದು ಕೃಷ್ಣಮೂರ್ತಿ ಅವರು ತಿಳಿಸಿದರು.

ಪರೀಕ್ಷೆಗೆ ಬರುವ ಎಲ್ಲ ವಿದ್ಯಾರ್ಥಿಗಳ ಥರ್ಮಲ್‌ ಸ್ಕ್ರೀನಿಂಗ್‌ ಮಾಡುವುದಕ್ಕಾಗಿ ಹೊಸ ಉಪಕರಣಗಳನ್ನು ಪರೀಕ್ಷಾ ಕೇಂದ್ರಗಳೇ ಖರೀದಿಸಲಿವೆ. ‌ಆರೋಗ್ಯ ಇಲಾಖೆಯ ಸಿಬ್ಬಂದಿಯೂ ಸ್ಥಳದಲ್ಲಿರಲಿದ್ದು, ಥರ್ಮಲ್‌ ಸ್ಕ್ರೀನಿಂಗ್‌ ಮಾಡಿದ ನಂತರವೇ ಪರೀಕ್ಷಾ ಕೊಠಡಿಯೊಳಕ್ಕೆ ವಿದ್ಯಾರ್ಥಿಗಳು ತೆರಳಲಿದ್ದಾರೆ.

ಥರ್ಮಲ್‌ ಸ್ಕ್ರೀನಿಂಗ್‌ ಮಾಡಬೇಕಾಗಿರುವುದರಿಂದ ವಿದ್ಯಾರ್ಥಿಗಳು ಪರೀಕ್ಷೆ ಆರಂಭಕ್ಕೂ (ಬೆಳಿಗ್ಗೆ 10.15) ಎರಡು ಗಂಟೆ ಮೊದಲು ಕೇಂದ್ರಗಳಿಗೆ ಬರಬೇಕಾಗುತ್ತದೆ ಎಂದು ಡಿಡಿಪಿಯು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT