ಸೋಮವಾರ, ಫೆಬ್ರವರಿ 17, 2020
17 °C
ಅರಣ್ಯ ಇಲಾಖೆಯಿಂದ ಜನಜಾಗೃತಿ ಕಾರ್ಯಾಗಾರ: ಸಿಬ್ಬಂದಿಯಿಂದ ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆ

ಕಾಳ್ಗಿಚ್ಚು ತಡೆ: ತಂತ್ರಜ್ಞಾನ, ಅಗ್ನಿಶಾಮಕ ದಳದ ನೆರವು ಪ್ರಾತ್ಯಕ್ಷಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬೇಸಿಗೆಯಲ್ಲಿ ಸಂಭವಿಸಬಹುದಾದ ಕಾಳ್ಗಿಚ್ಚನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಾಂಪ್ರದಾಯಿಕ ವಿಧಾನಗಳ ಜೊತೆಗೆ ಆಧುನಿಕ ತಂತ್ರಜ್ಞಾನಗಳ ಮೊರೆ ಹೋಗಿದೆ. ಇದರ ಜೊತೆಗೆ ಅಗ್ನಿಶಾಮಕ ದಳದ ನೆರವನ್ನೂ ಪಡೆದಿದೆ. 

ರಾಜ್ಯ ಅಗ್ನಿ ಶಾಮಕ ದಳವು ಜಿಲ್ಲೆಗೆ ಆರು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಿದೆ. ಮೂರನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿಯೋಜಿಸಿದರೆ, ಎರಡು ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಹಾಗೂ ಒಂದು ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ನಿಯೋಜಿಸಲಾಗಿದೆ. ಕಾಳ್ಗಿಚ್ಚು ಬಿದ್ದಂತಹ ತುರ್ತು ಸಂದರ್ಭದಲ್ಲಿ ಈ ವಾಹನಗಳು ಅರಣ್ಯ ಇಲಾಖೆಯ ನೆರವಿಗೆ ಧಾವಿಸಿವೆ.

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಆಡಳಿತವು ಮಂಗಳವಾರ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗೆ, ಅರಣ್ಯ ಇಲಾಖೆ ಸಿಬ್ಬಂದಿಗೆ ಕಾಳ್ಗಿಚ್ಚು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬೂದಿಪಡಗ ಹಾಗೂ ಕೆ.ಗುಡಿಗಳಲ್ಲಿ ಒಂದು ದಿನದ ಜನಜಾಗೃತಿ ಕಾರ್ಯಾಗಾರ ಹಮ್ಮಿಕೊಂಡಿತ್ತು. 

ಅಗ್ನಿ ಶಾಮಕ ದಳ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ, ಬೆಂಕಿ ನಂದಿಸಲು ಬಳಸುವ ಉಪಕರಣಗಳನ್ನು ಹಾಗೂ ಅವುಗಳನ್ನು ಬಳಸುವ ರೀತಿಯನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. 

ಕಾಳ್ಗಿಚ್ಚು ನೈಸರ್ಗಿಕವಲ್ಲ: ಚಾಮರಾಜನಗರ ವೃತ್ತದ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಮನೋಜ್‌ ಕುಮಾರ್‌ ಅವರು ಮಾತನಾಡಿ, ‘ಭಾರತದಲ್ಲಿ ಯಾವುದೇ ಅರಣ್ಯ ಪ್ರದೇಶದಲ್ಲಿ ಇದುವರೆಗೆ ನೈಸರ್ಗಿಕವಾಗಿ ಕಾಳ್ಗಿಚ್ಚು ಉಂಟಾದ ಉದಾಹರಣೆಗಳಿಲ್ಲ. ಎಲ್ಲವೂ ಮಾನವ ನಿರ್ಮಿತ. ಇದಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ. ‌ಉದ್ದೇಶಪೂರ್ವಕವಾಗಿಯೇ ಬೆಂಕಿ ಹಚ್ಚುತ್ತಾರೆ. ಬೆಂಕಿ ಕಂಡ ತಕ್ಷಣ, ಗರಿಷ್ಠ ಎಂದರೆ ಅರ್ಧ ಗಂಟೆಗಳ ಒಳಗಾಗಿ ಅದನ್ನು ನಂದಿಸಿದರೆ ಹೆಚ್ಚಿನ ಹಾನಿ ಸಂಭವಿಸುವುದಿಲ್ಲ. ಅದು ಸಾಧ್ಯವಾಗದಿದ್ದರೆ, ಸುಲಭದಲ್ಲಿ ಅದನ್ನು ನಿಯಂತ್ರಣ ಮಾಡಲು ಸಾಧ್ಯವಿ‌ಲ್ಲ. ಗಾಳಿ, ಒಣ ಹುಲ್ಲು, ಒಣ ಮರಗಳು ಕ್ಷಣಾರ್ಧದಲ್ಲಿ ಉರಿಯುತ್ತಾ ಇನ್ನಷ್ಟು ದೂರಕ್ಕೆ ಹರಡುತ್ತವೆ’ ಎಂದರು. 

‘ಹಿಂದೆ ನಾವು ಅರಣ್ಯ ಪ್ರದೇಶದಲ್ಲಿ ಒಣಗಿದ ಮರ ಹಾಗೂ ಬಿದ್ದ ಮರಗಳನ್ನು ತೆರವುಗೊಳಿಸಿ ಹರಾಜು ಹಾಕುತ್ತಿದ್ದೆವು. ಈಗ ಅದನ್ನು ಹಾಗೆ ಬಿಡುತ್ತಿದ್ದೇವೆ. ಇದರಿಂದಾಗಿಯೂ ಸಮಸ್ಯೆಯಾಗುತ್ತಿದೆ. ಇದು ಸರ್ಕಾರದ ನೀತಿಗೆ ಸಂಬಂಧಿಸಿದ್ದು, ಸರ್ಕಾರದ ಮಟ್ಟದಲ್ಲೇ ಈ ಬಗ್ಗೆ ನಿರ್ಧಾರವಾಗಬೇಕು’ ಎಂದರು. 

ಅಗ್ನಿಶಾಮಕ ದಳದ ‌ಜಿಲ್ಲಾ ಅಧಿಕಾರಿ ಕೆ.ಪಿ.ನವೀನ್‌ ಕುಮಾರ್‌ ಅವರು ಮಾತನಾಡಿ, ‘ಬೆಂಕಿ ಬಿದ್ದ ಮೇಲೆ ಅದನ್ನು ನಂದಿಸುವ ಕಾರ್ಯಾಚರಣೆ ನಡೆಸುವುದಕ್ಕಿಂತಲೂ, ಬೆಂಕಿ ಬೀಳದಂತೆ ತಡೆಯುವುದು ಯಾವತ್ತಿಗೂ ಒಳ್ಳೆಯದು. ಕಾಳ್ಗಿಚ್ಚು ಹಾಗೂ ಅದರಿಂದ ಆಗುವ ಅನಾಹುತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಗ್ರಾಮಗಳಲ್ಲಿ ಬೆಂಕಿ ನಿಯಂತ್ರಣ ತಂಡ ರಚಿಸುವುದು, ಉತ್ತಮ ಸಂವಹನ ವ್ಯವಸ್ಥೆ, ಸಾಕಷ್ಟು ನೀರನ್ನು ಸಂಗ್ರಹಿಸಿಟ್ಟಿರುವುದು, ಪ್ರಾಥಮಿಕ ಶಾಲೆಗಳಲ್ಲಿ ಬೆಂಕಿ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಬೆಂಕಿ ಅನಾಹುತವನ್ನು ತಡೆಯಬಹುದು’ ಎಂದು ಮಾಹಿತಿ ನೀಡಿದರು. 

ಆಧುನಿಕ ತಂತ್ರಜ್ಞಾನ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ. ಸಂತೋಷ್‌ ಕುಮಾರ್‌ ಸಂತೋಷ್‌ ಕುಮಾರ್ ಅವರು ಮಾತನಾಡಿ, ‘ಬೆಂಕಿ ರೇಖೆ ನಿರ್ಮಾಣ, ಹಸಿ ಎಲೆಗಳಿಂದ ಕೂಡಿರುವ ರೆಂಬೆ, ನೀರನ್ನು ಬಳಸುವುದು ಸೇರಿದಂತೆ ಕಾಳ್ಗಿಚ್ಚನ್ನು ನಿಯಂತ್ರಿಸಲು ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸುವುದರ ಜೊತೆಗೆ ಕಾಳ್ಗಿಚ್ಚು ಕಂಡು ಬಂದ ನಂತರ ಅತ್ಯಂತ ಕಡಿಮೆ ಅವಧಿಯಲ್ಲಿ ಅದನ್ನು ನಿಯಂತ್ರಿಸಲು ಆಧುನಿಕ ತಂತ್ರಜ್ಞಾನವನ್ನೂ ಬಳಸಲಾಗುತ್ತಿದೆ. ಸಂವಹನಕ್ಕಾಗಿ ವೈರ್‌ಲೈಸ್‌ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇದರೊಂದಿಗೆ ಬೆಂಕಿ ಬಿದ್ದಿರುವ ಸ್ಥಳವನ್ನು ನಿಖರವಾಗಿ ಗುರುತಿಸಲು ಉಪಗ್ರಹದ ನೆರವನ್ನೂ ಪಡೆಯಲಾಗುತ್ತಿದೆ. ದೇಶದಲ್ಲಿರುವ ಎಲ್ಲ ಅರಣ್ಯ ಪ್ರದೇಶದ ನಕ್ಷೆ ಭಾರತೀಯ ಅರಣ್ಯ ಸರ್ವೇಕ್ಷಣಾ ಸಂಸ್ಥೆಯ ಬಳಿ ಇದ್ದು, ಬೆಂಕಿ ಬಿದ್ದ ಜಾಗವನ್ನು ನಿಖರವಾಗಿ ಗುರುತಿಸಿ, ಜಿಪಿಎಸ್‌ ಸಹಾಯದಿಂದ ಆ ಸ್ಥಳಕ್ಕೆ ಬೇಗ ತಲುಪಲು ಸಾಧ್ಯವಾಗುತ್ತದೆ’ ಎಂದರು. 

ಬಿಆರ್‌ಟಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ ಅವರು, ‘ಈಗಾಗಲೇ 1500 ಕಿ.ಮೀಗಳಷ್ಟು ಬೆಂಕಿ ರೇಖೆ ನಿರ್ಮಿಸಲಾಗಿದೆ. ತಾತ್ಕಾಲಿಕವಾಗಿ 450 ಅರಣ್ಯ ವೀಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ತಂಡಗಳನ್ನಾಗಿ ಮಾಡಿ ಅವರಿಗೆ ವಾಹನಗಳನ್ನು, ಆಹಾರ ಸಿದ್ಧಪಡಿಸಲು ಅಗತ್ಯ ವಸ್ತುಗಳನ್ನು ನೀಡಲಾಗಿದೆ. ದಿನದ 24 ಗಂಟೆಗಳ ಕಾಲವೂ ಇವರು ಬೆಂಕಿ ಮೇಲೆ ನಿಗಾ ಇಡಲಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ಮಿಸಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದರು.

ವಲಯ ಅರಣ್ಯಾಧಿಕಾರಿಗಳಾದ ಕಾಂತರಾಜ್‌ ಹಾಗೂ ಮಹದೇವಯ್ಯ ಅವರು ಬೆಂಕಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. 

ಮೈಸೂರಿನಲ್ಲಿ ಸೇನಾ ಹೆಲಿಕಾಪ್ಟರ್‌ ನಿಲ್ಲಿಸಲು ಪ್ರಸ್ತಾವ

ಮಾಧ್ಯಮ ಪ್ರತಿನಿಧಿಗಳೊಂದಿಗಿನ ಸಂವಾದಲ್ಲಿ ಮಾತನಾಡಿದ ಸಿಸಿಎಫ್‌ ಮನೋಜ್‌ ಕುಮಾರ್‌ ಅವರು, ‘ಕಾಡಿಗೆ ಬೆಂಕಿ ಬಿದ್ದ ಸಂದರ್ಭದಲ್ಲಿ ಹೆಲಿಕಾಪ್ಟರ್‌ ಮೂಲಕ ಸುಲಭವಾಗಿ ಆರಿಸಬಹುದು. ಬೆಂಗಳೂರಿನ ಸೇನಾ ನೆಲೆಯಲ್ಲಿ ನಿಲ್ಲುವ ಹೆಲಿಕಾಪ್ಟರ್‌ ಅನ್ನು ಮೈಸೂರು ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದರೆ, ತುರ್ತು ಸಂದರ್ಭದಲ್ಲಿ ಪ್ರಯೋಜನಕ್ಕೆ ಬರುತ್ತದೆ. ಈ ಸಂಬಂಧ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ. ಸರ್ಕಾರದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದರು. 

‘ಕಾವೇರಿ ವನ್ಯಧಾಮ ಮತ್ತು ಮಲೆಮಹದೇಶ್ವರ ವನ್ಯಧಾಮದಲ್ಲಿ ರಸ್ತೆ ಸಂಪರ್ಕ ಸರಿ ಇಲ್ಲದಿರುವುದರಿಂದ, ಬೆಂಕಿ ಬಿದ್ದಾಗ ಅಥವಾ ತುರ್ತು ಸಂದರ್ಭಗಳಲ್ಲಿ ನಿಗದಿತ ಸ್ಥಳ ತಲುಪಲು ಸಾಧ್ಯವಾಗದ ಪರಿಸ್ಥಿತಿ ಇದೆ. ಕಾವೇರಿ ವನ್ಯಧಾಮದಲ್ಲಿ ಈ ವರ್ಷ ಕಾಳ್ಗಿಚ್ಚಿನ ಮೇಲೆ ನಿಗಾ ಇಡಲು ಪ್ರಾಯೋಗಿಕವಾಗಿ ಡ್ರೋನ್‌ ಬಳಕೆ ಮಾಡಲಾಗುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. 

ಸಮಗ್ರ ವರದಿಗೆ ನಿರ್ಧಾರ: ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಧಾಮಗಳಲ್ಲಿ ಮಾನವ ಆನೆ ಸಂಘರ್ಷ ಹೆಚ್ಚುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ವ್ಯವಸ್ಥಿತವಾಗಿ ಯೋಜನೆ ಮಾಡಿದರೆ, ಸಂಘರ್ಷವನ್ನು ಕಡಿಮೆ ಮಾಡುವುದಕ್ಕೆ ಅವಕಾಶವಿದೆ. ಮಡಿಕೇರಿಯಲ್ಲಿ ಇದು ಯಶಸ್ವಿಯಾಗಿದೆ. ಹಾಗಾಗಿ ಎರಡೂ ವನ್ಯಧಾಮಗಳಿಗೆ ಸಂಬಂಧಿಸಿದಂತೆ ಮುಂದಿನ ಐದು ವರ್ಷಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ವರದಿಯನ್ನು ಸಿದ್ಧ ಪಡಿಸಲು ನಿರ್ಧಾರ ಮಾಡಲಾಗಿದೆ. ಅದನ್ನು ನಾವು ಸರ್ಕಾರಕ್ಕೆ ಕಳುಹಿಸುತ್ತೇವೆ’ ಎಂದರು. 

ಎಲ್ಲೆಲ್ಲಿ ಅಗ್ನಿಶಾಮಕ ವಾಹನಗಳ ನಿಯೋಜನೆ?

ಬಂಡೀಪುರ: ಬಂಡೀಪುರ ವಲಯ, ಗೋಪಾಲಸ್ವಾಮಿ ಬೆಟ್ಟ ವಲಯ ಮತ್ತು ಮದ್ದೂರು ವಲಯ

ಬಿಆರ್‌ಟಿ: ಪುಣಜನೂರು ವಲಯದ ಬೇಡಗುಳಿ, ಯಳಂದೂರು ವಲಯದ ಗುಂಬಳ್ಳಿ ಗೇಟ್‌

ಮಲೆಮಹದೇಶ್ವರ ವನ್ಯಧಾಮ: ಕೌದಳ್ಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು