ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಬೆಂಬಲ ಬೆಲೆಯಲ್ಲಿ ತೆಂಗು ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವ: ಎಡಿಸಿ

Published 3 ಸೆಪ್ಟೆಂಬರ್ 2023, 7:08 IST
Last Updated 3 ಸೆಪ್ಟೆಂಬರ್ 2023, 7:08 IST
ಅಕ್ಷರ ಗಾತ್ರ

ಚಾಮರಾಜನಗರ: ತೆಂಗಿನ ಬೆಲೆ ಕುಸಿದಿರುವುದರಿಂದ, ಬೆಳೆಗಾರರಿಗೆ ಪ್ರೋತ್ಸಾಹ ನಿಡುವುದಕ್ಕಾಗಿ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತೆಂಗು ಖರೀದಿ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಶನಿವಾರ ಭರವಸೆ ನೀಡಿದರು. 

ಚಾಮರಾಜನಗರ ತಾಲ್ಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘವು ಕಾಳನಹುಂಡಿ ರಸ್ತೆಯ ಮುಣಚನಹಳ್ಳಿಯಲ್ಲಿರುವ ತೆಂಗು ಸಂಸ್ಕರಣ ಘಟಕದ ಅವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತೆಂಗು ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಜಿಲ್ಲೆಯಲ್ಲಿ ತೆಂಗು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಾಲ್ಲೂಕು ವ್ಯಾಪ್ತಿಯಲ್ಲಿ ಬೆಳೆಗಾರರು, ಮಾರಾಟಗಾರರು ಸಹಕಾರ ಸಂಘವನ್ನು ಸ್ಥಾಪನೆ ಮಾಡಿ, ಹಲವಾರು ವರ್ಷಗಳಿಂದ ತೆಂಗು ಸಂಸ್ಕರಣಾ ಘಟಕವನ್ನು ಆರಂಭಿಸಿ, ತೆಂಗು ಬೆಳೆಗಾರರ ಹಿತರಕ್ಷಣೆಗೆ ಸಹಕಾರ ಸಂಘ ಶ್ರಮಿಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಪ್ರಸಾದ್‌ ಮಾತನಾಡಿ, ‘ರಾಜ್ಯದಲ್ಲಿ 30 ಸಾವಿರ ಹೆಕ್ಟರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ 6000 ಹೆಕ್ಟರ್‌ನಲ್ಲಿ ತೆಂಗು ಬೆಳೆಯಲಾಗುತ್ತಿದೆ. ಗುಣಮಟ್ಟದ ತೆಂಗು ಬೆಳೆಯುವಲ್ಲಿ ಜಿಲ್ಲೆ ಪ್ರಸಿದ್ದಿಯಾಗಿದೆ. ಇಲಾಖೆಯಿಂದಲೂ ತೆಂಗು ಬೆಳೆಗಾರರಿಗೆ ಪ್ರೋತ್ಸಾಹ ಹಾಗೂ ಸಹಾಯಧನ ನೀಡಲಾಗುತ್ತಿದೆ. ತೆಂಗಿನ ಮರ ಹತ್ತುವವರು ₹95 ಪಾವತಿಸಿ ವಿಮೆ ಮಾಡಿಸಿಕೊಂಡರೆ, ಅಪಘಾತ ಪರಿಹಾರ ನಿಧಿಯಾಗಿ ₹5 ಲಕ್ಷದವರೆಗೆ ಪರಿಹಾರ ದೊರೆಯಲಿದೆ. ಈ ಪ್ರಯೋಜವನ್ನು ಇಲಾಖೆಯ ಮೂಲಕ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಕೆರೆಗೆ ನೀರು ತುಂಬಿಸುವ ಹೋರಾಟ ಸಮಿತಿಯ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ  ತೆಂಗು ಬೇಸಾಯದ ಬಗ್ಗೆ ಮಾಹಿತಿ ನೀಡಿದರು. ಹೋಮಿಯೋಪಥಿ ವೈದ್ಯ ಗುರುಕಿರಣ್‌ ಅವರು ತೆಂಗು ಉತ್ಪನ್ನಗಳಿಂದ ಆರೋಗ್ಯ ಸುಧಾರಣೆ ಕುರಿತು ಮಾಹಿತಿ ನೀಡಿದರು.

ಸಂಘದ ಅಧ್ಯಕ್ಷ ಎ.ಎಂ.ಮಹೇಶ್ ಪ್ರಭು ಮಾತನಾಡಿ, ‘ತೆಂಗಿನಿಂದ 131 ಉಪ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿದೆ. ತೆಂಗು ಎಲ್ಲದಕ್ಕು ಸೂಕ್ತವಾಗಿದೆ. ವಿಶ್ವ ತೆಂಗು ದಿನಾಚರಣೆಯ ಸಂದರ್ಭದಲ್ಲಿ ತೆಂಗು ಬೆಳೆಗಾರರರಾದ ನಾವೆಲ್ಲರು ತೆಂಗಿಗೆ ಮಾರುಕಟ್ಟೆ ಕುಸಿತವಾಗದಂತೆ ನೋಡಿಕೊಳ್ಳಬೇಕಾಗಿದೆ. ಕುಸಿತ ಕಂಡ ಸಂದರ್ಭಗಳಲ್ಲಿ ಸರ್ಕಾರದ ಗಮನ ಸೆಳೆದು, ಬೆಂಬಲ ಬೆಲೆಯನ್ನು ನೀಡಿ, ಖರೀದಿ ಕೇಂದ್ರಗಳನ್ನು ತೆರೆದು ತೆಂಗು ಖರೀದಿಗೆ ಒತ್ತಾಯ ಹಾಕಬೇಕಾಗಿದೆ’ ಎಂದರು.

ಪರಿಸರ ಪ್ರೇಮಿ ವೆಂಕಟೇಶ್ ಅವರು ತೆಂಗು ಸಂಸ್ಕರಣ ಘಟಕದ ಸುತ್ತಲೂ ತೆಂಗಿನ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು.

 ಸಂಘದ ಉಪಾಧ್ಯಕ್ಷ ಪುಟ್ಟರಸು, ನಿರ್ದೇಶಕರಾದ ಜಯಶ್ರೀ, ಪಾರ್ವತಮ್ಮ, ಜಗದೀಶ್ ಆರಾಧ್ಯ, ಸಿದ್ದರಾಜು, ಎಚ್.ಎನ್.ವೆಂಕಟೇಶ್, ಎಚ್.ಎಂ.ಬಸವಣ್ಣ, ಬಿ.ಸೋಮಶೇಖರ್, ಎಸ್.ಬಸವರಾಜು, ಪಿ.ಎನ್.ಚಿನ್ನಸ್ವಾಮಿ ಗೌಂಡರ್ , ರಾಜ್ಯ ರೈತ ಸಂಘದ ಕಾಯಂ ಸದಸ್ಯರಾದ ಹೆಗ್ಗವಾಡಿಪುರ ಮಹದೇವಸ್ವಾಮಿ, ಮ್ಯಾನೇಜರ್ ನಾಗರಾಜು, ಲೆಕ್ಕಾಧಿಕಾರಿ ಶಾಂತಮಲ್ಲಪ್ಪ, ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT