ಮಂಗಳವಾರ, ಮೇ 17, 2022
24 °C
ಸಹಕಾರ ಸಂಘಗಳ ಜಂಟಿ ನಿಬಂಧಕರ ನೇಮಕ, ನಿಷ್ಪ‍ಕ್ಷಪಾತ ತನಿಖೆಗೆ ಹೋರಾಟಗಾರರ ಒತ್ತಾಯ

ಚಾಮುಲ್‌ ಅವ್ಯವಹಾರ: ಶಾಸನಬದ್ಧ ವಿಚಾರಣೆಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದಲ್ಲಿ (ಚಾಮುಲ್) 72 ಮಂದಿ ಉದ್ಯೋಗಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಶಾಸನ ಬದ್ಧ ವಿಚಾರಣೆ ನಡೆಸಿ ವರದಿ ನೀಡಲು ಸಹಕಾರ ಸಂಘಗಳ ಜಂಟಿ ನಿಬಂಧಕರನ್ನು ನೇಮಕ ಮಾಡಲಾಗಿದೆ. 

ಈ ಸಂಬಂಧ, ಜನವರಿ 6ರಂದು ಸಹಕಾರ ಸಂಘಗಳ ನಿಬಂಧಕರು ಆದೇಶ ಹೊರಡಿಸಿದ್ದಾರೆ. 

ತಾಲ್ಲೂಕಿನ ಕುದೇರಿನಲ್ಲಿರುವ ಚಾಮುಲ್‌ ಘಟಕದಲ್ಲಿ ಖಾಲಿ ಇದ್ದ 72 ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಲಂಚ ಪಡೆದು ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ, ಹಿಂದಿನ ಅಧ್ಯಕ್ಷರು, ನಿರ್ದೇಶಕರು ಸ್ವಜನ ಪಕ್ಷಪಾತ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಚಾಮರಾಜನಗರ ಜಿಲ್ಲಾಭಿವೃದ್ಧಿ ಹೋರಾಟ ಸಮಿತಿ, ಭ್ರಷ್ಟಾಚಾರ ವಿರೋಧಿ ಆಂದೋಲನ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ದೀರ್ಘ ಹೋರಾಟ ನಡೆಸಿದ್ದವು.

ಹಿಂದಿನ ಜಿ‌ಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳ ಜಂಟಿ ತನಿಖಾ ಸಮಿತಿ ರಚಿಸಿದ್ದರು. ನೇಮಕಾತಿಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಸಮಿತಿ ವರದಿ ನೀಡಿತ್ತು. ಜಿಲ್ಲಾಧಿಕಾರಿ ಅವರು ವರದಿಯನ್ನು ಸರ್ಕಾರಕ್ಕೆ ಕಳುಹಿಸಿದ್ದರು. ವರದಿ ಕಳುಹಿಸಿ ವರ್ಷವಾಗಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. 

ಚಾಮುಲ್‌ ಆಡಳಿತವನ್ನು ಸೂಪರ್‌ಸೀಡ್‌ ಮಾಡಿ ಈಗ ಆಗಿರುವ ನೇಮಕಾತಿಯನ್ನು ರದ್ದುಗೊಳಿಸಿ ಹೊಸದಾಗಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಚಾಮರಾಜನಗರ ಜಿಲ್ಲಾಭಿವೃದ್ಧಿ ಹೋರಾಟ ಸಮಿತಿ ಹಾಗೂ ಇತರ ಸಂಘಟನೆಗಳ ಮುಖಂಡರು ನವೆಂಬರ್‌ ಕೊನೆ ವಾರದಲ್ಲಿ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಇದಾಗಿ ಒಂದೂವರೆ ತಿಂಗಳುಗಳಲ್ಲಿ ಸಹಕಾರ ಇಲಾಖೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸನ ಬದ್ಧ ವಿಚಾರಣೆ ನಡೆಸಿ, ವರದಿ ಸಲ್ಲಿಸಲು ಅಧಿಕಾರಿಯನ್ನು ನೇಮಕ ಮಾಡಲಾಗಿದೆ. 

ಮುಖ್ಯಮಂತ್ರಿ ಅವರ ಸೂಚನೆ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಸಹಕಾರ ಸಂಘಗಳ ಕಾಯ್ದೆ 1959 ಕಲಂ 64 ರ ಅಡಿಯಲ್ಲಿ ಶಾಸನ ಬದ್ಧ ವಿಚಾರಣೆ ಕೈಗೊಂಡು ವರದಿ ನೀಡಲು ಸಹಕಾರ ಸಂಘಗಳ ಕಾನೂನು ಕೋಶದ  ಜಂಟಿ ನಿಬಂಧಕ ಎಂ.ಡಿ.ನರಸಿಂಹಮೂರ್ತಿ ಅವರನ್ನು ನೇಮಿಸಲಾಗಿದೆ. 

‘ಮುಖ್ಯಮಂತ್ರಿ ಅವರಿಗೆ ಮನವಿಕೊಟ್ಟ ಬಳಿಕ ವಿಚಾರಣೆಗೆ ಅಧಿಕಾರಿಯನ್ನು ನೇಮಿಸಲಾಗಿದೆ. ಇದು ಒಳ್ಳೆಯ ಬೆಳವಣಿಗೆ. ನೇಮಕಗೊಂಡಿರುವ ಅಧಿಕಾರಿಯು ಯಾರ ಪ್ರಭಾವಕ್ಕೂ ಒಳಗಾಗದೆ, ನಿಷ್ಪಕ್ಷಪಾತದಿಂದ ತನಿಖೆ ನಡೆಸಿ ವರದಿ ನೀಡಬೇಕು. ಆ ಮೂಲಕ ಅನ್ಯಾಯಕ್ಕೆ ಒಳಗಾದ ಪ್ರತಿಭಾವಂತ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಹೋರಾಟ ಸಮಿತಿಯ ವೀರಭದ್ರಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು