ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಅರಣ್ಯ, ಕೃಷಿ, ಭೂಮಾಪನ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭಾಗಿ

ಚಂಗಡಿ ಪುನರ್‌ವಸತಿ: 430 ಎಕರೆ ಪ್ರದೇಶದಲ್ಲಿ ಸರ್ವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: ತಾಲ್ಲೂಕಿನ ಬಹುನಿರೀಕ್ಷಿತ ಚಂಗಡಿ ಗ್ರಾಮ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ವತಿಯಿಂದ ಗುರುತಿಸಲಾಗಿರುವ ಪ್ರದೇಶದಲ್ಲಿ ಮಂಗಳವಾರ ಕೃಷಿ, ಭೂಮಾಪನ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸರ್ವೆ ಕಾರ್ಯ ನಡೆಸಿದರು.

ಗ್ರಾಮದ ವಸತಿ ಸಮುಚ್ಚಯ, ಮೂಲ ಸೌಕರ್ಯಗಳು, ಕೆರೆಗಳ ನಿರ್ಮಾಣ, ಕೃಷಿ ಭೂಮಿ ಇನ್ನಿತರೆ ಅನುಕೂಲಗಳ ಸಂಬಂಧ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಸರ್ವೆ ಕಾರ್ಯ ನಡೆಯಿತು. ಚಂಗಡಿ ಗ್ರಾಮಸ್ಥರು ಕೂಡ ಇದರಲ್ಲಿ ಭಾಗವಹಿಸುವುದರ ಮೂಲಕ ಅಧಿಕಾರಿಗಳಿಗೆ ಸಹಕಾರ ನೀಡಿದರು.

ಮಲೆಮಹದೇಶ್ವರ ವನ್ಯಧಾಮದ ಡಿಸಿಎಫ್ ವಿ. ಏಡುಕುಂಡಲು ಅವರು ಮಾತನಾಡಿ, ‘ವೈಶಂಪಾಳ್ಯ ಬಳಿಯ 430 ಎಕರೆ ಅರಣ್ಯ ಪ್ರದೇಶದಲ್ಲಿ ಚಂಗಡಿ ಪುನರ್‌ವಸತಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 50 ಎಕರೆಯಷ್ಟು ಸ್ಥಳವನ್ನು ಗ್ರಾಮಠಾಣವನ್ನಾಗಿ, 300 ಎಕರೆಯನ್ನು 135 ಜನರಿಗೆ ಕೃಷಿ ಭೂಮಿಯನ್ನಾಗಿ ವಿಂಗಡಿಸಲು ತೀರ್ಮಾನಿಸಲಾಗಿದೆ. ಇದಲ್ಲದೇ ಗ್ರಾಮದಲ್ಲಿ ಆಟದ ಮೈದಾನ, ಸಮುದಾಯ ಭವನ, ಕೆರೆಗಳ ನಿರ್ಮಾಣ, ಕೃಷಿ ಭೂಮಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಕ್ರಮ ಕೈಗೊಳ್ಳಲಿದೆ’ ಎಂದರು. 

‘ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಇಲಾಖೆ ಕಾರ್ಯ ನಿರ್ವಹಿಸಲಿದೆ. ನಿರ್ಮಾಣ ಮಾಡಿದ ಮನೆಗಳಲ್ಲಿ ಮಳೆ ನೀರು ಇಂಗಿಸಲು ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕೃಷಿ ಇಲಾಖೆ ಮಣ್ಣು ಪರೀಕ್ಷೆ ನಡೆಸಿ ಎಲ್ಲೆಲ್ಲಿ ಕೆರೆಗಳನ್ನು ನಿರ್ಮಿಸಬೇಕು ಎಂಬುದನ್ನು ಅಧ್ಯಯನ ಮಾಡಿ ಕೆರೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಿದೆ’ ಎಂದರು.

3 ತಿಂಗಳೊಳಗೆ ಕೆಲಸ ಆರಂಭ: ‘ಈಗಾಗಲೇ ಸರ್ವೆ ಕಾರ್ಯ ಆರಂಭವಾಗಿದೆ. ಇದೇ 13ರಂದು ಜಿಲ್ಲಾ ಮಟ್ಟದ ಸಭೆ ನಡೆಯಲಿದೆ. ಅಲ್ಲಿ ಅನುಮೋದನೆ ದೊರೆಯುತ್ತಿದ್ದಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರ್ಕಾರದ ಒಪ್ಪಿಗೆ ಸಿಕ್ಕ ತಕ್ಷಣ ಯೋಜನೆ ಆರಂಭಗೊಳ್ಳಲಿದೆ. ಮೂರು ತಿಂಗಳೊಳಗೆ ಈ ಯೋಜನೆಗೆ ಚಾಲನೆ ದೊರೆಯಲಿದೆ’ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. 

ಮಲೆಮಹದೇಶ್ವರ ವನ್ಯಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಾಗ್ಯಲಕ್ಷಿ, ತಹಶೀಲ್ದಾರ್ ಜಿ.ಎಚ್.ನಾಗರಾಜು, ಭೂ ಮಾಪನಾ ಇಲಾಖೆ ಸಹಾಯಕ ನಿರ್ದೇಶಕ ಚೇತನ್, ಸರ್ವೇ ಸೂಪರ್‌ವೈಸರ್‌ ಕುಮಾರಸ್ವಾಮಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಂದ್ರಮ್ಮ, ಪಶು ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ಲೋಕೋಪಯೋಗಿ ಇಲಾಖೆಯ ಚಿನ್ನಣ್ಣ ಇದ್ದರು.

ಚಂಗಡಿ ಗ್ರಾಮಸ್ಥರ ಸಂತಸ
ಸರ್ವೆ ಕಾರ್ಯ ಆರಂಭವಾಗಿರುವುದಕ್ಕೆ ಚಂಗಡಿಯ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. 

ಚಂಗಡಿ ಕರಿಯಪ್ಪ ಅವರು ಮಾತನಾಡಿ, ‘ವರ್ಷಗಳ ಹೋರಾಟದ ಫಲವಾಗಿ ಚಂಗಡಿ ಪುನರ್‌ವಸತಿ ಕಾರ್ಯ ಫಲಪ್ರದವಾಗುತ್ತಿರುವುದು ಸಂತಸ ತಂದಿದೆ. ವಿಶೇಷವಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿಯೂ ಪುನರ್‌ವಸತಿ ಸಂಬಂಧ ವಿವಿಧ ಇಲಾಖೆಗಳಿಗೆ ಗ್ರಾಮದ ಎಲ್ಲರೂ ಸಹಕಾರ ನೀಡಲಿದ್ದೇವೆ’ ಎಂದು ತಿಳಿಸಿದರು.

‘ಶಿಕ್ಷಣ, ಆರೋಗ್ಯ ಎಂಬುದು ನಮ್ಮ ಮಕ್ಕಳಿಗೆ ಕನಸಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಬಂದು ನಮಗೆ ಎಲ್ಲ ವ್ಯವಸ್ಥೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ಇಲ್ಲಿ ನಮಗೆ ಹೊಸದಾಗಿ ಗ್ರಾಮವನ್ನೇ ಸೃಷ್ಟಿಸುತ್ತಿದ್ದಾರೆ. ನಮಗಂತೂ ಸೌಲಭ್ಯ ಎಂಬುದು ಮರಿಚಿಕೆಯಾಗಿತ್ತು. ನಮ್ಮ ಮಕ್ಕಳಿಗಾದರೂ ಎಲ್ಲ ಸೌಲಭ್ಯ ಸಿಗುವಂತಾಗಲಿ’ ಎಂದು ಚಂಗಡಿ ಗ್ರಾಮದ ದೊಡ್ಡೇಗೌಡ ಅವರು ಆಶಯ ವ್ಯಕ್ತಪಡಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.