ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಲ್ಲೂರು ಜಾತ್ರೆ: ಮುಡಿಸೇವೆ, ನೀಲಗಾರ ದೀಕ್ಷೆ ಸಂಪನ್ನ

ಸಾವಿರಾರು ಭಕ್ತರು ಭಾಗಿ
Last Updated 12 ಜನವರಿ 2020, 15:21 IST
ಅಕ್ಷರ ಗಾತ್ರ

ಹನೂರು: ಚಿಕ್ಕಲ್ಲೂರು ಜಾತ್ರೆಯ ಎರಡನೆ ಹಾಗೂ ಮೂರನೆ ದಿನ ದೊಡ್ಡವರಸೇವೆ, ಹುಲಿವಾಹನೋತ್ಸವ, ಮುಡಿಸೇವೆ, ನೀಲಗಾರ ದೀಕ್ಷೆ ಆಚರಣೆಗಳು ಹಾಗೂ ವಿವಿಧ ಪೂಜಾ ಕೈಂಕರ್ಯಗಳು ವಿಧಿವಿಧಾನಗಳೊಂದಿಗೆ ಸಡಗರದಿಂದ ಜರುಗಿದವು.

ಸುತ್ತಮುತ್ತ ಗ್ರಾಮಗಳಿಂದ ಬಂದಿದ್ದ ಕೆಲ ಭಕ್ತರು ಸಹ ದೇವಸ್ಥಾನದ ಸುತ್ತ ಉರುಳು ಸೇವೆ ಮಾಡಿ ದೂಪ, ಸಾಂಬ್ರಾಣಿ, ಕರ್ಪೂರ, ಹಣ್ಣುಕಾಯಿ ಸಮರ್ಪಿಸಿದರು. ನೆತ್ತಿ ಸುಡುತ್ತಿದ್ದ ಬಿಸಿಲನ್ನು ಲೆಕ್ಕಿಸದೆ ಗಂಟಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಸಿದ್ದಪ್ಪಾಜಿಯ ದರ್ಶನ ಪಡೆದರು.

ಮುಡಿಸೇವೆ ಆಚರಣೆಯ ಭಾಗವಾಗಿ ಭಾನುವಾರಈ ಬಾರಿಯು ಸಾವಿರಾರು ಭಕ್ತರು ಕೇಶಮುಂಡನ ಮಾಡಿಸಿಕೊಳ್ಳುವ ಮೂಲಕ ತಮ್ಮ ಹರಕೆ ಸಲ್ಲಿಸಿದರು. ಕಷ್ಟ ನಿವಾರಣೆ ಹಾಗೂ ಇಷ್ಟಾರ್ಥ ಸಿದ್ಧಿಗೆ ಹರಕೆ ಹೊತ್ತ ಭಕ್ತರು ಮುಡಿಸೇವೆ ಸಲ್ಲಿಸಿ ಸಿದ್ದಪ್ಪಾಜಿಗೆ ಧೂಪ ಹಾಕಿ ನಮಿಸಿದರು. ಹರಕೆ ಹೊತ್ತ ಭಕ್ತರು ತಮ್ಮ ಮಕ್ಕಳಿಗೆ ನೀಲಗಾರ ದೀಕ್ಷೆ (ಗುಡ್ಡನ ಬಿಡಿಸುವುದು) ಕೊಡಿಸಿ ತಮ್ಮ ಕಾಣಿಕೆ ಸಲ್ಲಿಸಿದರು.

ದೇವಾಲಯದ ಸುತ್ತ ಇರುವ ಖಾಸಗಿ ಜಮೀನಿನಲ್ಲಿ ಎಲ್ಲೆಂದರಲ್ಲಿ ಬಿಡಾರಗಳು ತಲೆ ಎತ್ತಿದ್ದವು. ಸೋಮವಾರ ಪಂಕ್ತಿಸೇವೆ ನಡೆಯುವುದರಿಂದ ರಾಜ್ಯದ ನಾನಾ ಕಡೆಗಳಿಂದ ಬಂದಿದ್ದ ಭಕ್ತರು, ಜಮೀನಿನಲ್ಲಿ ಟಾರ್ಪಲಿನ್ ಬಿಡಾರಗಳನ್ನು ನಿರ್ಮಾಣ ಮಾಡಿ ವಾಸ್ತವ್ಯ ಹೂಡಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಾತ್ಕಾಲಿಕ ಪ್ರಾಥಮಿಕ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ.

ಜಾತ್ರೆ ಪ್ರಾರಂಭ ದಿನವಾದ ಶುಕ್ರವಾರ 82, ಶನಿವಾರ 261, ಭಾನುವಾರ 115 ಭಕ್ತರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ವಾಹನಗಳ ತಪಾಸಣೆ: ಜಾತ್ರೆಗೆ ಮಾರಕಾಸ್ತ್ರ, ಮದ್ಯ ಹಾಗೂ ಪ್ರಾಣಿಗಳನ್ನು ಕೊಂಡೊಯ್ಯುವುದನ್ನು ತಡೆಗಟ್ಟಲು ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿ ವಾಹನವನ್ನು ತಪಾಸಣೆ ನಡೆಸಿ ಬಿಡಲಾಗುತ್ತಿದೆ. ಬಾಳಗುಣಸೆ ಗೇಟ್, ಬಾಣೂರು ಗೇಟ್, ಮತ್ತು ಸುಂಡ್ರಳ್ಳಿ ಗೇಟ್ ಇನ್ನಿತರೆ ಚೆಕ್ ಪೋಸ್ಟ್‌ಗಳಲ್ಲಿಪೊಲೀಸರು ತೀವ್ರ ತಪಾಸಣೆ ನಡೆಸಿ ಬಿಡುತ್ತಿರುವುದು ಕಂಡು ಬಂದಿತು. ಜಾತ್ರೆಗೆ ಕೊಂಡೊಯ್ಯುತ್ತಿದ್ದ 16 ಕುರಿ ಮತ್ತು ಮೇಕೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹರಿದು ಬಂದ ಭಕ್ತಸಾಗರ
ಜಾತ್ರೆಯ ಮೂರನೆ ದಿನವಾದ ಭಾನುವಾರ ಜನಸಾಗರವೇ ಹರಿದು ಬಂತು. ದೇವಾಲಯ ಆವರಣದ ಆಸುಪಾಸು, ಹೊಸ ಮಠ, ಹಳೆ ಮಠ, ಚಿಕ್ಕಲ್ಲೂರು, ಕೊತ್ತನೂರು, ಬಾಳಗುಣಸೆ, ಸುಂಡ್ರಳ್ಳಿ ವಿವಿಧಡೆ ಎತ್ತ ನೋಡಿದರೂ ಭಾರಿ ಜನಸ್ತೋಮ ಕಂಡು ಬಂದಿತು.

ಸೋಮವಾರ ಪಂಕ್ತಿಸೇವೆ ನಡೆಯುವುದರಿಂದ ಭಾನುವಾರ ಮಧಾಹ್ನದಿಂದಲೇ ಕ್ಷೇತ್ರಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಅಪಾರ ಜನಸ್ತೋಮ ಹರಿದು ಬರುತ್ತಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT