ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಚಿತ್ರ ವ್ಯಾಧಿಯಿಂದ ಬಳಲುತ್ತಿರುವ ಮಕ್ಕಳು: ಚಿಕಿತ್ಸೆ ಭರವಸೆ ನೀಡಿದ ಡಿ.ಸಿ

Published 30 ಜುಲೈ 2023, 6:25 IST
Last Updated 30 ಜುಲೈ 2023, 6:25 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಕುರಟ್ಟಿ ಹೊಸೂರು ಹಾಗೂ ಶೆಟ್ಟಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಕ್ಕಳು ವಿಚಿತ್ರ ಚರ್ಮ ಕಾಯಿಲೆಯಿಂದ ಬಳಲುತ್ತಿದ್ದು, ಪೋಷಕರು ತಮ್ಮ ಮಕ್ಕಳ ಅವಸ್ಥೆ ಕಂಡು ನೋವಿನಲ್ಲಿ ದಿನ ಕಳೆಯುತ್ತಿದ್ದಾರೆ.  

ಶೆಟ್ಟಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಶೆಟ್ಟಳ್ಳಿ, ಭದ್ರಯ್ಯನಹಳ್ಳಿ ಹಾಗೂ ಕುರಟ್ಟಿ ಹೊಸೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಕುರಟ್ಟಿ ಹೊಸೂರು, ಎ ವಿಲೇಜ್ ಗ್ರಾಮಗಳಲ್ಲಿ ಮಕ್ಕಳ ಮೈಯಲ್ಲಿ ಚುಕ್ಕಿ ರೀತಿಯಲ್ಲಿ ಕಲೆಗಳು ಕಾಣಿಸಿಕೊಳ್ಳುತ್ತಿವೆ. ಚರ್ಮ ಸುಕ್ಕಿನಂತಾಗುತ್ತದೆ.  ಅನುವಂಶಿಕವಾಗಿ ಈ ಕಾಯಿಲೆ ಬರುತ್ತಿದ್ದು, ಏಳು ವರ್ಷಗಳ ಹಿಂದೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. 

ಬಿಸಿಲಿಗೆ ಹೋಗುವುದಕ್ಕೆ ಅವರಿಗೆ ಆಗುವುದಿಲ್ಲ. ಕಾಯಿಲೆಯಿಂದಾಗಿ ಮಕ್ಕಳು ದಿನೇ ದಿನೇ ದೈಹಿಕವಾಗಿ ಕ್ಷೀಣಿಸುತ್ತಿದ್ದಾರೆ. ಇದು ಕ್ಸೆರೊಡರ್ಮಾ ಪಿಗ್ಮೆಂಟೋಸಮ್‌ ಕಾಯಿಲೆ ಎನ್ನಲಾಗಿದೆ.  

ಎರಡು ಮೂರು ದಶಕಗಳಿಂದಲೂ ಕಾಯಿಲೆ ಇದ್ದು, ಈವರೆಗೆ 20ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ ಎಂದು ಹೇಳುತ್ತಾರೆ ಇಲ್ಲಿನ ಗ್ರಾಮಸ್ಥರು. 

ಈ ರೋಗವು ಒಂದು ವರ್ಷದ ಮಗುವಿದ್ದಾಗ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ದೇಹದ ತುಂಬೆಲ್ಲ ಕಪ್ಪು ಚುಕ್ಕೆಗಳು ಹರಡುತ್ತವೆ. ವರ್ಷಗಳು ಉರುಳುತ್ತಿದ್ದಂತೆ, ಕಣ್ಣಿನ ದೃಷ್ಟಿ ಕೂಡ ಕಳೆದುಕೊಂಡು ಕಣ್ಣಿನ ಗುಡ್ಡೆಗಳು ಹೊರಬರಲು ಶುರುವಾಗುತ್ತದೆ. ಮಕ್ಕಳು 18 ವರ್ಷ ತಲುಪುವ ಹೊತ್ತಿಗೆ ದೇಹವು ಸಂಪೂರ್ಣ ಕೃಷವಾಗಿ ಸಾವಿಗೆ ಈಡಾಗುತ್ತಿದ್ದಾರೆ. 

‘ಈ ವಿಚಿತ್ರ ರೋಗಕ್ಕೆ ತುತ್ತಾಗಿ ಇದುವರೆಗೆ ನಮ್ಮ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. ಏಳು ವರ್ಷಗಳ ಹಿಂದೆ ಇದೇ ರೀತಿ ಗ್ರಾಮದಲ್ಲಿ ಈ ಕಾಯಿಲೆ ಉಲ್ಭಣಗೊಂಡಿತ್ತು. ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡ ಪರಿಣಾಮ ಜಿಲ್ಲಾಡಳಿತವೇ ಗ್ರಾಮಕ್ಕೆ  ಬಂದು ಆರೋಗ್ಯ ಶಿಬಿರ ಏರ್ಪಡಿಸಿ ಮಕ್ಕಳ ರಕ್ತ ಮಾದರಿ ಸಂಗ್ರಹಿಸುವುದರ ಜತೆಗೆ ಒಂದು ತಿಂಗಳ ಕಾಲ ಗ್ರಾಮದಲ್ಲೇ ಶಿಬಿರ ಆಯೋಜಿಸಿ ಚಿಕಿತ್ಸೆ ನೀಡಿತ್ತು. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಈಗ ಗ್ರಾಮದಲ್ಲಿ‌ ಮತ್ತೆ ಕಾಯಿಲೆ ಕಾಣಿಸಿಕೊಂಡಿದೆ’ ಎಂದು ಕುರಟ್ಟಿ ಹೊಸೂರು ಗ್ರಾಮದ ಉದಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಹಿತಿ ಪಡೆದ ಶಿಲ್ಪಾ ನಾಗ್‌ 
ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಅವರು ಶನಿವಾರ ಸಂಜೆ ಕುರಟ್ಟಿ ಹೊಸೂರಿಗೆ ಭೇಟಿ ನೀಡಿ ಕಾಯಿಲೆಗೆ ತುತ್ತಾಗಿರುವ ಮಕ್ಕಳನ್ನು ಆರೋಗ್ಯ ಸ್ಥಿತಿ ವಿಚಾರಿಸಿದರು. ಕುಟುಂಬಸ್ಥರು‌ ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದರು. ರೋಗದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದರು.   ಪೋಷಕರಿಗೆ ಸಾಂತ್ವನ ಹೇಳಿದ ಅವರು ‘ಕಾಯಿಲೆಯ ಬಗ್ಗೆ ಪರಿಶೀಲಿಸಿ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುವುದು. ಆರೋಗ್ಯ ಅಧಿಕಾರಿಗಳನ್ನು ಗ್ರಾಮಕ್ಕೆ ಕಳುಹಿಸಿ ಪರಿಶೀಲನೆಗೆ ಸೂಚಿಸಲಾಗುವುದು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT