ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ವ್ಯಕ್ತಿಯ ಹೊಟ್ಟೆಯಲ್ಲಿದ್ದ 5.5 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Last Updated 27 ಜನವರಿ 2023, 15:59 IST
ಅಕ್ಷರ ಗಾತ್ರ

ಚಾಮರಾಜನಗರ: ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿ ಬೆಳೆದಿದ್ದ 5.5 ಕೆಜಿ ತೂಕದ ಗಡ್ಡೆಯನ್ನು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್‌) ವೈದ್ಯರು ಶುಕ್ರವಾರ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ.

ಸಿಮ್ಸ್‌ ಬೋಧನಾ ಆಸ್ಪತ್ರೆಯಲ್ಲಿ ಇಷ್ಟು ಭಾರದ ದುರ್ಮಾಂಸವನ್ನು ರೋಗಿಯೊಬ್ಬರ ದೇಹದಿಂದ ತೆಗೆದಿರುವುದು ಇದೇ ಮೊದಲು.

ಸಿಮ್ಸ್‌ನ ಜನರಲ್‌ ಸರ್ಜರಿ ವಿಭಾಗದ ಮುಖ್ಯಸ್ಥ, ಪ್ರಾಧ್ಯಾಪ‍ಕ ಡಾ.ಕಿರಣ್‌ ನೇತೃತ್ವದ ತಂಡ ಸತತ ಮೂರು ಗಂಟೆಗಳ ಕಾಲ ಶಸ್ತ್ರಕ್ರಿಯೆ ನಡೆಸಿ ಗಡ್ಡೆಯನ್ನು ತೆಗೆದಿದ್ದಾರೆ.

‘40 ವರ್ಷದ ಪುರುಷರೊಬ್ಬರ ಹೊಟ್ಟೆಯಲ್ಲಿ ಗಡ್ಡೆ ಪತ್ತೆಯಾಗಿತ್ತು. ಅವರು ಬೇರೆ ಆಸ್ಪತ್ರೆಗಳಿಗೆ ಭೇಟಿ ನೀಡಿ ವೈದ್ಯರ ಅಭಿಪ್ರಾಯ ಪಡೆದಿದ್ದರು. ನಂತರ ನಮ್ಮಲ್ಲಿಗೆ ಬಂದಿದ್ದರು. ಅದು ಕ್ಯಾನ್ಸರ್‌ ಗಡ್ಡೆಯಾ ಅಥವಾ ಸಾಮಾನ್ಯ ಗಡ್ಡೆಯಾ ಎಂಬುದು ಸ್ಪಷ್ಟವಾಗಿಲ್ಲ. ಡಾ.ಕಿರಣ್‌, ಡಾ.ಚಂದ್ರಶೇಖರಯ್ಯ, ಡಾ.ಶಶಿಧರ್‌ ಹಾಗೂ ಸ್ನಾತಕೋತ್ತರ ಕೋರ್ಸ್‌ ವಿದ್ಯಾರ್ಥಿಯೊಬ್ಬರಿದ್ದ ತಂಡ ಮೂರು ಗಂಟೆಗಳ ಕಾಲ ಶಸ್ತ್ರಕ್ರಿಯೆ ನಡೆಸಿ ಹೊರ ತೆಗೆದಿದ್ದಾರೆ. ಗಡ್ಡೆಯನ್ನು ನಮ್ಮದೇ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಜಿಲ್ಲಾ ಸರ್ಜನ್‌ ಡಾ.ಕೃಷ್ಣಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡೂವರೆ ತಿಂಗಳ ಹಿಂದೆ ಆ ರೋಗಿಯ ಹೊಟ್ಟೆಯಲ್ಲಿ ಗಡ್ಡೆ ಇರಲಿಲ್ಲ. ಎರಡೂವರೆ ತಿಂಗಳಲ್ಲಿ ಇದು ಬೆಳೆದಿದೆ. ಹೊಟ್ಟೆ ಊದಿಕೊಳ್ಳುವ ಸಮಸ್ಯೆ ಅವರನ್ನು ಬಾಧಿಸಿತ್ತು. ಅವರ ಜಠರ ಸೇರಿದಂತೆ ಇತರ ಅಂಗಗಳಿಗೆ ಯಾವುದೇ ತೊಂದರೆಯಾಗಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT