ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಇಲ್ಲದಿದ್ದರೂ ಒಲಿದ ತಂಬೂರಿ ಕಂಸಾಳೆ ಕಲೆ

ಅಜ್ಜ, ತಂದೆಯಿಂದ ದೇಸಿ ಕಲೆಗಳನ್ನು ಕಲಿತ ಮಹದೇವ ನಾಯಕ, ರಾಜ್ಯದಾದ್ಯಂತ ಪ್ರದರ್ಶನ
Last Updated 4 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಓದಲು, ಬರೆಯಲು ಬಾರದಿದ್ದರೂ, ದೇಸಿ ಕಲೆಗಳಾದ ತಂಬೂರಿ, ಬೀಸು ಕಂಸಾಳೆಯನ್ನು ಒಲಿಸಿಕೊಂಡಿದ್ದಾರೆ ಮಹದೇವ ನಾಯಕ.

ತಾಲ್ಲೂಕಿನ ವೆಂಕಟಯ್ಯನ ಛತ್ರ ಸಮೀಪದ ಬಸವಾಪುರ ಗ್ರಾಮದವರಾದ ಮಹದೇವ ನಾಯಕ ಕೆಲ ವರ್ಷಗಳಿಂದ ಗಡಿ ಊರಾದ ತಾಳವಾಡಿಯಲ್ಲಿ ನೆಲೆಸಿದ್ದಾರೆ. ತಾವು ಸಿದ್ಧಿಸಿಕೊಂಡಿರುವ ತಂಬೂರಿ ಹಾಗೂ ಬೀಸು ಕಂಸಾಳೆ ಕಲೆಗಳ ಪ್ರದರ್ಶನವನ್ನು ರಾಜ್ಯದೆಲ್ಲೆಡೆ ಪಸರಿಸಿದ್ದಾರೆ.

ಅಜ್ಜ ಹಾಗೂ ತಂದೆಯಿಂದ ಈ ಎರಡೂ ಕಲೆಗಳನ್ನು ಕಲಿತಿರುವ ಮಹದೇವ ನಾಯಕ, ಕಲಿಯುವುದಕ್ಕೆ ಮುಂದೆ ಬರುವ ಆಸಕ್ತರಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ.

ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬೀಸು ಕಂಸಾಳೆ ಪ್ರದರ್ಶನಕ್ಕೆ ತರಬೇತಿ ನೀಡುತ್ತಿದ್ದಾರೆ.

ತಾಲ್ಲೂಕಿನ ಹರದನಹಳ್ಳಿಯ ‘ನಾಗಮಲೆ ಬೀಸು ಕಂಸಾಳೆ ತಂಡ’, ಬಂಡಿಗೆರೆಯ ‘ಮಲೆ ಮಹದೇಶ್ವರ ಬೀಸು ಕಂಸಾಳೆ ತಂಡ’ಗಳು ಇವರ ಗರಡಿಯಲ್ಲಿ ಪಳಗಿವೆ. ಇವೆರಡೂ ತಂಡಗಳು ಸ್ಥಳೀಯ ಅಥವಾ ಖಾಸಗಿ ಕಾರ್ಯಕ್ರಮಗಳಿಗೆ ತೆರಳಿದರೆ ಇವರೂ ಆ ತಂಡಗಳೊಂದಿಗೆ ಹೋಗುತ್ತಾರೆ.

ಬೆಂಗಳೂರು, ಬಳ್ಳಾರಿ, ಬೆಳಗಾವಿ, ಹುಣಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೀಸು ಕಂಸಾಳೆ ಪ್ರದರ್ಶನ ನೀಡಿದ ಅನುಭವ ಇವರಿಗಿದೆ. ತಂಬೂರಿ ಮೀಟುತ್ತಾ ಪದ ಕಟ್ಟುವ ಕಲೆಯನ್ನು ಸ್ಥಳೀಯ ಪ್ರದೇಶಗಳಿಗೆ ಮಾತ್ರ ಅವರು ಸೀಮಿತ ಮಾಡಿಕೊಂಡಿದ್ದಾರೆ.

ನಿಗದಿತ ಹಣ ಇಲ್ಲ

‘ನನ್ನ ತಾತ, ತಂದೆ ಕಲೆಯನ್ನು ಕಲಿಸಿ ಹೋಗಿದ್ದಾರೆ. ಹುಟ್ಟಿನಿಂದಲೇಬಂದಿರುವಕಲೆಯಲ್ಲಿ ಬದುಕು ನಡೆಯುತ್ತಿದೆ. ಜಿಲ್ಲೆಯಲ್ಲಿ ಜರುಗುವ ಜಾತ್ರೆಗಳಿಗೆ ಹೋಗುತ್ತೇನೆ. ಜಾತ್ರೆ ಬಳಿಕ ಆಯ್ದ ಮನೆಗಳಲ್ಲಿ ಮಾತ್ರ ಭಿಕ್ಷೆ ಮಾಡುತ್ತೇನೆ. ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳನ್ನು ನೀಡುತ್ತೇವೆ’ ಎಂದು ಮಹದೇವ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಸವ ಜಯಂತಿ, ಗಣೇಶ ಚತುರ್ಥಿ ಸೇರಿದಂತೆ ಸ್ಥಳೀಯ ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತಾರೆ. ಖಾಸಗಿ ಕಾರ್ಯಕ್ರಮಗಳಾದರೆ ₹2,000ದಿಂದ ₹10 ಸಾವಿರದವರೆಗೂ ಸಿಗುತ್ತದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಅವರು ಏನು ನಿರ್ಧರಿಸಿರುತ್ತಾರೂಆ ಹಣ ಸಿಗುತ್ತದೆ. ಸರ್ಕಾರಿ ಕಾರ್ಯಕ್ರಮಗಳಾದರೆ ನಮಗೆ ಹೆಚ್ಚಿನ ಅನುಕೂಲ. ನಮ್ಮನ್ನು ಗುರುತಿಸುತ್ತಾರೆ’ ಎಂದರು.

‘ನನ್ನ ಮಕ್ಕಳಿಗೂ ಕಲಿಸುವ ಆಸೆ ಇದೆ. ಇಂದಿನ ಯುವಕರು ಆಸಕ್ತಿಯಿಂದ ಕಲಿಯುವುದು ಕಡಿಮೆ. ಆಸಕ್ತರು ಮುಂದೆ ಬಂದರೆ ಹೇಳಿ ಕೊಡುತ್ತೇನೆ’ ಎನ್ನುತ್ತಾರೆ ಅವರು.

ಸೇತುವೆಯಾಗಲಿ

‌‘ಸರ್ಕಾರದ ಕಾರ್ಯಕ್ರಮಗಳು ನಡೆದಾಗ ಕಲಾವಿದರಿಗೆ ನೇರವಾಗಿ ಮಾಹಿತಿ ತಲುಪಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಮಧ್ಯವರ್ತಿಗಳ ಮೂಲಕ ಕಲಾವಿದರಿಗೆ ಮಾಹಿತಿ ಸಿಗುತ್ತಿದೆ. ಇವರು ನೈಜ ಕಲಾವಿದರನ್ನು ಗುರುತಿಸುವುದಿಲ್ಲ. ತಮಗಿಷ್ಟ ಬಂದವರಿಗೆ ಕಾರ್ಯಕ್ರಮಗಳನ್ನು ನೀಡುತ್ತಾರೆ. ಆದ್ದರಿಂದ ಕಲಾವಿದರು ಮತ್ತು ಸರ್ಕಾರದ ನಡುವೆ ಇಲಾಖೆ ಸೇತುವೆಯಾಗಿರಬೇಕು’ ಎಂದು ಸಲಹೆ ನೀಡುತ್ತಾರೆ ಅವರು.

ತಂಬೂರಿ ಮೀಟುತ್ತಾ ಕಥೆ...

‘ಕಂಸಾಳೆ ತಂಬೂರಿಶೈಲಿಯ ಕಥೆ ಹೇಳಬೇಕಾದರೆ ತಂಡದಲ್ಲಿ ಐವರು ಇರಲೇಬೇಕು. ತಂಬೂರಿ, ದಂಬಡಿ, ಕಂಸಾಳೆ, ಘಟಂ ಹಾಗೂ ಕಂಚಿ ಹಿಡಿದು ಕಥೆ ಹೇಳುವುದಕ್ಕೆ ಆರಂಭಿಸುತ್ತೇವೆ’ ಎಂದು ತಾವು ಅಭ್ಯಾಸ ಮಾಡಿರುವ ಇನ್ನೊಂದು ಕಲೆಯ ಬಗ್ಗೆ ವಿವರಿಸುತ್ತಾರೆ ಮಹದೇವ ನಾಯಕ.

‘ಹಿಂದೆ ಹರದನಹಳ್ಳಿ, ಬಸವಾಪುರ ಹಾಗೂ ಬ್ಯಾಡಮೂಡ್ಲು ಗ್ರಾಮಗಳಲ್ಲಿ ಪದಗಳನ್ನು ಕಟ್ಟುತ್ತಿದ್ದೆವು. ಈಗ ಜಾತ್ರೆ, ಪೂಜಾ ಕೈಂಕರ್ಯಗಳಲ್ಲೂ ತಂಬೂರಿ ಕಥೆ ಹೇಳುತ್ತೇವೆ. ಮಹದೇಶ್ವರ, ಮೈಲಾರ ರಾಮ, ಬಿಳಿಗಿರಿರಂಗನಾಥ ಸ್ವಾಮಿ, ಮುಡುಕುತೊರೆ ಮಲ್ಲಪ್ಪ, ನಂಜುಂಡೇಶ್ವರ, ನಿಂಗರಾಜಮ್ಮ ದೇವರ ಮೇಲೆ ಕಥೆ ಹೇಳುತ್ತೇವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT