ಚಾಮರಾಜನಗರ: ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಮೂರು ಕ್ಷೇತ್ರಗಳ ಹೆಸರಿದ್ದು, ನಿರೀಕ್ಷೆಯಂತೆಯೇ ಹುರಿಯಾಳುಗಳ ಆಯ್ಕೆ ನಡೆದಿದೆ.
ಚಾಮರಾಜನಗರ ಕ್ಷೇತ್ರದಿಂದ ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿಗೆ, ಹನೂರು ಕ್ಷೇತ್ರದಿಂದಲೂ ಹಾಲಿ ಶಾಸಕ ಆರ್.ನರೇಂದ್ರಗೆ ಮತ್ತು ಗುಂಡ್ಲುಪೇಟೆ ಕ್ಷೇತ್ರದಿಂದ ಯುವ ಮುಖಂಡ ಎಚ್.ಎಂ.ಗಣೇಶ್ ಪ್ರಸಾದ್‌ಗೆ ಟಿಕೆಟ್ ಘೋಷಿಸಲಾಗಿದೆ.
ಈ ಮೂರೂ ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಆಕಾಂಕ್ಷಿಗಳ ನಡುವೆ ಪೈಪೋಟಿ ಇರಲಿಲ್ಲ. ಟಿಕೆಟ್‌ಗೆ ಮೂವರ ನಡುವೆ ಪೈಪೋಟಿ ಇರುವ ಕೊಳ್ಳೇಗಾಲದ ಅಭ್ಯರ್ಥಿಯ ಹೆಸರನ್ನು ಪಕ್ಷ ಇನ್ನೂ ಅಂತಿಮಗೊಳಿಸಿಲ್ಲ.
ಚಾಮರಾಜನಗರ ಕ್ಷೇತ್ರದಲ್ಲಿ ಹಾಲಿ ಶಾಸಕ, ಸತತ ಮೂರು ಬಾರಿ ಗೆದ್ದಿರುವ ಪುಟ್ಟರಂಗಶೆಟ್ಟಿ ಅವರನ್ನು ಬಿಟ್ಟು ಬೇರೆ ಯಾರೂ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿರಲಿಲ್ಲ. ಹಾಗಾಗಿ, ಅವರು ಅಭ್ಯರ್ಥಿಯಾಗುವುದು ಖಚಿತವಾಗಿತ್ತು.
ಹನೂರು ಕ್ಷೇತ್ರದಲ್ಲಿ, ಶಾಸಕ, ಮೂರು ಬಾರಿ ಗೆದ್ದಿರುವ ಆರ್.ನರೇಂದ್ರ ಮತ್ತು ಮತ್ತೊಬ್ಬ ಮುಖಂಡ ಎಲ್.ನಾಗೇಂದ್ರ ಅವರು ಟಿಕೆಟ್‌ಗೆ ಮನವಿ ಮಾಡಿ ಅರ್ಜಿ ಹಾಕಿದ್ದರು. ವರಿಷ್ಠರು ಹಾಲಿ ಶಾಸಕರಿಗೆ ಮಣೆ ಹಾಕಿದ್ದಾರೆ.
ಗುಂಡ್ಲುಪೇಟೆ ಕ್ಷೇತ್ರದಲ್ಲಿ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಅವರ ಮಗ ಎಚ್.ಎಂ.ಗಣೇಶ್ ಪ್ರಸಾದ್ ಮತ್ತು ಮತ್ತೊಬ್ಬ ಹಿರಿಯ ಮುಖಂಡ ಎಚ್.ಎಸ್.ನಂಜಪ್ಪ ಅವರು ಟಿಕೆಟ್ ಬಯಸಿದ್ದರು. ವರಿಷ್ಠರು ಗಣೇಶ್ ಪ್ರಸಾದ್ ಅವರಿಗೆ ಮಣೆ ಹಾಕಿದ್ದಾರೆ. ಎರಡು ಅರ್ಜಿಗಳು ಬಂದಿದ್ದರೂ ರಾಜ್ಯ ಮುಖಂಡರು ಗಣೇಶ್ ಪ್ರಸಾದ್ ಪರವಾಗಿ ಬಹಿರಂಗವಾಗಿ ಮಾತನಾಡಿದ್ದರು. ಹಾಗಾಗಿ, ಅವರಿಗೆ ಟಿಕೆಟ್ ಸಿಗುವುದು ನಿಚ್ಚಳವಾಗಿತ್ತು.
ಗೆಲ್ಲುವ ವಿಶ್ವಾಸ: ತಮಗೆ ಟಿಕೆಟ್ ಘೋಷಣೆಯಾದ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿರುವ ಮೂವರೂ ಅಭ್ಯರ್ಥಿಗಳು, ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿದ್ದು, ಮತದಾರರು ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ನಾಲ್ಕನೇ ಗೆಲುವಿನತ್ತ ಕಣ್ಣು: ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಮತ್ತು ಆರ್.ನರೇಂದ್ರ ಅವರು ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಶಾಸಕರು ಎಂದು ಗುರುತಿಸಿಕೊಂಡವರು. ಇದೀಗ ನಾಲ್ಕನೇ ಬಾರಿ ಅಭ್ಯರ್ಥಿಗಳಾಗಿದ್ದು, ಗೆಲುವಿನತ್ತ ದೃಷ್ಟಿ ನೆಟ್ಟಿದ್ದಾರೆ.
ಗಣೇಶ್ ಪ್ರಸಾದ್ ಅವರಿಗೆ ಇದು ಮೊದಲ ಚುನಾವಣೆ. ಮಹದೇವ ಪ್ರಸಾದ್ ಅವರ ಹಠಾತ್ ನಿಧನದ ಬಳಿಕ ಅವರ ಪತ್ನಿ ಎಂ.ಸಿ.ಮೋಹನಕುಮಾರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ, ಸಚಿವರೂ ಆಗಿದ್ದರು. 2018ರ ಚುನಾವಣೆಯಲ್ಲಿ ಸೋತ ಬಳಿಕ ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿ, ಮಗ ಗಣೇಶ್ ಪ್ರಸಾದ್ ಅವರ ರಾಜಕೀಯ ಪ್ರವೇಶಕ್ಕೆ ನಾಂದಿ ಹಾಡಿದ್ದರು. ಐದು ವರ್ಷಗಳಿಂದ ಕ್ಷೇತ್ರದಾದ್ಯಂತ ಸುತ್ತಾಡಿರುವ ಗಣೇಶ್ ಪ್ರಸಾದ್, ಈ ಬಾರಿ ತಮ್ಮ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಕೊಳ್ಳೇಗಾಲಕ್ಕೆ ಯಾರು?: ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬ ಕುತೂಹಲ ಹಾಗೆಯೇ ಉಳಿದುಕೊಂಡಿದೆ.
ರಾಜ್ಯದಾದ್ಯಂತ ಟಿಕೆಟ್‌ಗಾಗಿ ಪೈಪೋಟಿ ಇರುವ ಕಡೆ, ಗೊಂದಲ ಇರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ವರಿಷ್ಠರು ಇನ್ನೂ ಆಯ್ಕೆ ಮಾಡಿಲ್ಲ. ಮುಂದಿನ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರುಗಳನ್ನು ಅಂತಿಮಗೊಳಿಸಲಾಗುವುದು ಎಂದು ಮುಖಂಡರು ಹೇಳಿದ್ದಾರೆ.
ಮೀಸಲು ಕ್ಷೇತ್ರವಾದ ಕೊಳ್ಳೇಗಾಲದಲ್ಲಿ ಎ.ಆರ್.ಕೃಷ್ಣಮೂರ್ತಿ, ಎಸ್.ಜಯಣ್ಣ ಮತ್ತು ಎಸ್.ಬಾಲರಾಜು ನಡುವೆ ಟಿಕೆಟ್‌ಗಾಗಿ ಪೈಪೋಟಿ ಇದೆ. ಒಬ್ಬರಿಗೆ ಕೊಟ್ಟರೆ ಇನ್ನೊಬ್ಬರು ಮುನಿಸಿಕೊಳ್ಳುವ ಸ್ಥಿತಿ ಇದೆ. ಹಾಗಾಗಿ, ಆಕಾಂಕ್ಷಿಗಳನ್ನು ಮನವೊಲಿಸಿದ ನಂತರ ಟಿಕೆಟ್ ಘೋಷಣೆ ಮಾಡುವ ಲೆಕ್ಕಾಚಾರದಲ್ಲಿ ಮುಖಂಡರಿದ್ದಾರೆ.
‘ಜನರು ಕೈ ಹಿಡಿಯುವ ವಿಶ್ವಾಸವಿದೆ’
ಪ್ರಜಾಪ್ರಭುತ್ವದಲ್ಲಿ ಜನರ ಅಭಿಪ್ರಾಯಕ್ಕೆ ಮನ್ನಣೆ ಸಿಗುತ್ತದೆ. ನಾನು ಮೂರು ಬಾರಿ ಗೆದ್ದಿದ್ದೇನೆ. ಆತ್ಮಸಾಕ್ಷಿಯಿಂದ ಕೆಲಸ ಮಾಡಿದ್ದೇನೆ. ಈ ಬಾರಿ ಬಿಜೆಪಿ ಸರ್ಕಾರ ಸಮರ್ಪಕ ಅನುದಾನ ನೀಡದೇ ಇದ್ದುದರಿಂದ ಅಭಿವೃದ್ಧಿ ಕೆಲಸಗಳು ನನ್ನ ನಿರೀಕ್ಷೆಯಷ್ಟು ಮಾಡಲು ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ ಅವಧಿಯಲ್ಲಿ ಕ್ಷೇತ್ರದಾದ್ಯಂತ ಸಾಕಷ್ಟು ಅಭಿವೃದ್ಧಿಯಾಗಿದೆ. ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಅವರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಈ ಬಾರಿಯೂ ಜನರು ನನ್ನ ಕೈಹಿಡಿಯುತ್ತಾರೆ ಎಂಬ ವಿಶ್ವಾಸವಿದೆ.
ಸಿ.ಪುಟ್ಟರಂಗಶೆಟ್ಟಿ, ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ
‘ಗೆಲ್ಲುವ ನಂಬಿಕೆ ಇದೆ’
ಇದು ನಿರೀಕ್ಷಿತ ಘೋಷಣೆ. ಕ್ಷೇತ್ರದಾದ್ಯಂತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿ
ದ್ದೇನೆ. ಕ್ಷೇತ್ರಕ್ಕಾಗಿ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೆ. ಅದರಲ್ಲಿ ಬಹುತೇಕ ಪೂರ್ಣವಾಗಿವೆ. ಬಿಜೆಪಿ ಸರ್ಕಾರ ಅನುದಾನ ಕೊಡದೇ ಇದ್ದುದರಿಂದ ಕೆಲವು ಯೋಜನೆಗಳು ಅನುಷ್ಠಾನಕ್ಕೆ ಬಂದಿಲ್ಲ. ಮೂರು ಕೆರೆಗಳಿಗೆ ನೀರು ತುಂಬಿಸಲು ಯಶಸ್ವಿಯಾಗಿದ್ದೇನೆ. ಇನ್ನೆರಡು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆಗಬೇಕಿತ್ತು. ಆ ಪ್ರಕ್ರಿಯೆ ಜಾರಿಯಲ್ಲಿದೆ. ಮಹದೇಶ್ವರಬೆಟ್ಟದ ರಸ್ತೆ ಅಭಿವೃದ್ಧಿ ಬಾಕಿ ಇದೆ. ಬೆಟ್ಟದ ಅಭಿವೃದ್ಧಿ ಕೆಲಸಗಳು ಶೇಕಡಾ 90ರಷ್ಟು ಪೂರ್ಣಗೊಂಡಿದೆ. ಮೂರು ಅವಧಿಯಲ್ಲಿ ಶಾಸಕನಾಗಿ ಮಾಡಿರುವ ಕೆಲಸಗಳ ಬಗ್ಗೆ ಆತ್ಮತೃಪ್ತಿಯಿದೆ. ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಅವರ ಕಷ್ಟ, ದುಃಖಗಳಲ್ಲಿ ಭಾಗಿಯಾಗುತ್ತಿದ್ದೇನೆ. ಈ ಬಾರಿಯೂ ನನ್ನನ್ನು ಗೆಲ್ಲಿಸಲಿದ್ದಾರೆ ಎಂಬ ನಂಬಿಕೆ ಇದೆ.
–ಆರ್.ನರೇಂದ್ರ, ಹನೂರು ಕ್ಷೇತ್ರದ ಅಭ್ಯರ್ಥಿ
‘ಕಾಂಗ್ರೆಸ್ ಗೆಲುವು ಖಚಿತ’
ಗುಂಡ್ಲುಪೇಟೆ ಕ್ಷೇತ್ರಕ್ಕೆ ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿರುವುದರಿಂದ ಖುಷಿಯಾಗಿದೆ. ಪಕ್ಷ ನನ್ನನ್ನು ಗುರುತಿಸಿದೆ. ಐದು ವರ್ಷಗಳಿಂದ ಕ್ಷೇತ್ರದಾದ್ಯಂತ ಸುತ್ತಾಡಿ, ಜನರೊಂದಿಗೆ ಬೆರೆತಿದ್ದೇನೆ. ಪಕ್ಷದ ಮುಖಂಡರು ಆಶೀರ್ವಾದ ನೀಡಿದ್ದಾರೆ. ನನ್ನ ತಂದೆ ಎಚ್.ಎಸ್.ಮಹದೇವ ಪ್ರಸಾದ್ ಅವರ ಅಭಿಮಾನಿಗಳು ಪ್ರೀತಿ ತೋರಿದ್ದಾರೆ. ಕ್ಷೇತ್ರದ ಹಿರಿಯ ಮುಖಂಡರು ಕೂಡ ನನ್ನೊಂದಿಗೆ ಇದ್ದಾರೆ. ಇಡೀ ಕ್ಷೇತ್ರದಲ್ಲಿ ಜನರ ಸ್ಪಂದನೆ ಬೆಂಬಲ ಅತ್ಯುತ್ತಮವಾಗಿ ಸಿಗುತ್ತಿತ್ತು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ.
ಎಚ್.ಎಂ.ಗಣೇಶ್ ಪ್ರಸಾದ್, ಗುಂಡ್ಲುಪೇಟೆ ಕ್ಷೇತ್ರದ ಅಭ್ಯರ್ಥಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.