ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಕೈ’ಗೆ ಮತ್ತೆ ಜೈಕಾರ, ಬೋಸ್‌ಗೆ ಗೆಲುವಿನ ಹಾರ

ಚಾಮರಾಜನಗರದಲ್ಲಿ ಕಾಂಗ್ರೆಸ್‌ಗೆ 1.88 ಲಕ್ಷ ಮತಗಳ ಅಂತರದ ಭರ್ಜರಿ ಜಯ, ಎನ್‌ಡಿಎಗೆ ಹೀನಾಯ ಸೋಲು
Published 4 ಜೂನ್ 2024, 15:51 IST
Last Updated 4 ಜೂನ್ 2024, 15:51 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಮತದಾರರು ಈ ಬಾರಿ ಕಾಂಗ್ರೆಸ್‌ಗೆ ಜೈಕಾರ ಹಾಕಿದ್ದಾರೆ. ಕಳೆದ ಚುನಾವಣೆಯಲ್ಲಿ ಕಳೆದುಕೊಂಡಿದ್ದ ಕ್ಷೇತ್ರವನ್ನು ಮತ್ತೆ ಕೈವಶ ಮಾಡಿಕೊಂಡಿದೆ. ಪಕ್ಷದ ಅಭ್ಯರ್ಥಿ ಸುನಿಲ್‌ ಬೋಸ್‌ ಅವರು ದಾಖಲೆಯ 1,88,706 ಮತಗಳ ಅಂತರದಿಂದ ಬಿಜೆಪಿ, ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಸ್‌.ಬಾಲರಾಜ್‌ ಅವರನ್ನು ಮಣಿಸಿದ್ದಾರೆ. ಮೊದಲ ಪ್ರಯತ್ನದಲ್ಲೇ ಅವರು ಲೋಕಸಭೆಗೆ ಆಯ್ಕೆಯಾಗಿದ್ದಾರೆ. 

ಕಾಂಗ್ರೆಸ್‌ ಬಿಜೆಪಿ ನಡುವೆ ಪ್ರಬಲ ಪೈಪೋಟಿ ನಡೆಯಬಹುದು ಎಂಬ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ. ಕಳೆದ ಬಾರಿ ಕ್ಷೇತ್ರದಲ್ಲಿ ಗೆದ್ದು ಖಾತೆ ತೆರೆದಿದ್ದ ಬಿಜೆಪಿಯು, ಜೆಡಿಎಸ್‌ನ ಬೆಂಬಲ ಇದ್ದಾಗ್ಯೂ ಹೀನಾಯವಾಗಿ ಸೋತಿದೆ.  

ಕಣದಲ್ಲಿ 14 ಅಭ್ಯರ್ಥಿಗಳಿದ್ದರು. ಕ್ರಮಬದ್ಧವಾಗಿದ್ದ 13,61,654 ಮತಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌ ಅವರು 7,51,671 ಮತಗಳನ್ನು ಗಳಿಸಿದರೆ, ಎಸ್‌.ಬಾಲರಾಜ್‌ 5,62,965 ಮತಗಳನ್ನು ಪಡೆದರು. ‘ನೋಟಾ’ಗೆ 8,143 ಮತಗಳು ಬಿದ್ದಿವೆ. 539 ಮತಗಳು ತಿರಸ್ಕೃತಗೊಂಡಿವೆ.

21 ಸುತ್ತುಗಳಲ್ಲಿ ನಡೆದ ಮತ ಎಣಿಕೆ ಕಾರ್ಯದಲ್ಲಿ ಸುನಿಲ್‌ ಬೋಸ್‌ ಅವರು ಮೊದಲ ಸುತ್ತುನಿಂದ ಕೊನೆಯ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡಿದ್ದರು. ಒಂದು ಸುತ್ತಿನಿಂದ ಇನ್ನೊಂದು ಸುತ್ತಿಗೆ ಅಂತರ ಹೆಚ್ಚಾಗುತ್ತಲೇ ಹೋಯಿತು. ಬಾಲರಾಜ್‌ ಅವರು ಯಾವ ಹಂತದಲ್ಲೂ ಸವಾಲು ನೀಡಲಿಲ್ಲ. 

ಐತಿಹಾಸಿಕ ಗೆಲುವನ್ನು ತಂದು ಕೊಟ್ಟ ಚಾಮರಾಜನಗರ ಕ್ಷೇತ್ರದ ಜನರ ವಿಶ್ವಾಸವನ್ನು ಉಳಿಸುವ ಕೆಲಸ ಮಾಡುವೆ.
ಸುನಿಲ್‌ ಬೋಸ್‌, ಕಾಂಗ್ರೆಸ್‌ ಅಭ್ಯರ್ಥಿ

ಅಂಚೆ ಮತಗಳಲ್ಲಿ ಮಾತ್ರ ಎಸ್‌.ಬಾಲರಾಜ್‌ ಮುನ್ನಡೆ ಗಳಿಸಿದ್ದರು. ಒಟ್ಟು 4,407 ಅಂಚೆ ಮತಗಳಲ್ಲಿ ಬಾಲರಾಜ್‌ಗೆ 1,909 ಮತಗಳು ಬಂದಿದ್ದರೆ, ಬೋಸ್‌ಗೆ 1,745 ಮತಗಳು ಬಿದ್ದಿವೆ.   

ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆ: ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಸುನಿಲ್‌ ಬೋಸ್‌ ಅವರಿಗೆ ಹೆಚ್ಚಿನ ಮತಗಳು ಬಿದ್ದಿವೆ. ಅವರ ತಂದೆ ಡಾ.ಎಚ್‌.ಸಿ.ಮಹದೇವಪ್ಪ ಪ್ರತಿನಿಧಿಸುವ ತಿ.ನರಸೀಪುರ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಏಳೂ ಕ್ಷೇತ್ರಗಳಲ್ಲಿ ದಾಖಲೆ ಪ್ರಮಾಣದ ಮುನ್ನಡೆ ಸಿಕ್ಕಿದೆ. ತಿ.ನರಸೀಪುರದಲ್ಲಿ ಬಾಲರಾಜ್‌ ಅವರಿಗಿಂತ  2,921ರಷ್ಟು ಹೆಚ್ಚು ಮತಗಳನ್ನು ಪಡೆದಿದ್ದಾರೆ.   

ಜೆಡಿಎಸ್‌ ಶಾಸಕರಿರುವ ಹನೂರು ಕ್ಷೇತ್ರದಲ್ಲಿ ಬೋಸ್‌ ಅವರಿಗೆ ಅತಿ ಹೆಚ್ಚು ಅಂದರೆ 36,957 ಮತಗಳ ಮುನ್ನಡೆ ಸಿಕ್ಕಿದೆ. ಉಳಿದಂತೆ ವರುಣದಲ್ಲಿ 33,352, ಕೊಳ್ಳೇಗಾಲದಲ್ಲಿ 33,016, ನಂಜನಗೂಡಿನಲ್ಲಿ 20,578, ಚಾಮರಾಜನಗರದಲ್ಲಿ 20,326, ಗುಂಡ್ಲುಪೇಟೆಯಲ್ಲಿ 17,782 ಮತ್ತು  ಎಚ್‌.ಡಿ.ಕೋಟೆ ಕ್ಷೇತ್ರದಲ್ಲಿ 17,738 ಮತಗಳ ಮುನ್ನಡೆ ಗಳಿಸಿದ್ದಾರೆ.  

ಬಿಗಿ ಭದ್ರತೆ ನಡುವೆ ಎಣಿಕೆ: ನಗರದ ಹೊರವಲಯದ ಬೇಡರಪುರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಗಿ ಭದ್ರತೆ ನಡುವೆ ಮತ ಎಣಿಕೆ ನಡೆಯಿತು. ಬೆಳಿಗ್ಗೆ ಎಂಟು ಗಂಟೆಗೆ ಮತ ಎಣಿಕೆ ನಡೆಯಿತು. ಆರಂಭದಲ್ಲಿ ಅಂಚೆ ಮತಗಳನ್ನು ಎಣಿಸಲಾಯಿತು. ಬಳಿಕ ವಿಧಾನಸಭಾ ಕ್ಷೇತ್ರವಾರು ಹಾಕಲಾಗಿದ್ದ ಟೇಬಲ್‌ಗಳಲ್ಲಿ ವಿವಿಎಂನಲ್ಲಿ ದಾಖಲಾಗಿದ್ದ ಮತಗಳನ್ನು ಎಣಿಕೆ ಮಾಡಲಾಯಿತು. 

ತಾಂತ್ರಿಕ ದೋಷ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಹರದನಹಳ್ಳಿ, ಗುಂಡ್ಲುಪೇಟೆ  ತಾಲ್ಲೂಕಿನ ಬಿ.ಶೆಟ್ಟಿ ಹಳ್ಳಿ, ಎಚ್‌.ಡಿ.ಕೋಟೆ ಕ್ಷೇತ್ರ ವ್ಯಾಪ್ತಿಯ ಎಳೆಹುಂಡಿ ಮತ್ತು ತುಂಬಸೋಗೆ–2 ಮತಗಟ್ಟೆಗಳ ಇವಿಎಂಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ವಿವಿಪ್ಯಾಟ್‌ನಲ್ಲಿದ್ದ ಮತದಾನ ದಾಖಲು ರಸೀದಿಗಳನ್ನು (ಸ್ಲಿಪ್‌) ಎಣಿಸಿ ಮತ ಎಣಿಕೆ ಮಾಡಲಾಯಿತು. 

ಜನಾದೇಶಕ್ಕೆ ತಲೆ ಬಾಗುವೆ. ಕಾಂಗ್ರೆಸ್‌ ನನ್ನ ವಿರುದ್ಧ ಅಪಪ್ರಚಾರ ಅಧಿಕಾರ ದುರ್ಬಳಕೆ ಮಾಡಿ ಹಣ ಬಲದಿಂದ ಗೆದ್ದಿದೆ
ಎಸ್‌.ಬಾಲರಾಜ್‌ ಎನ್‌ಡಿಎ ಅಭ್ಯರ್ಥಿ

21 ಸುತ್ತುಗಳಲ್ಲಿ ಮತ ಎಣಿಕೆ ನಡೆಯಿತು. ಮೊದಲ ಸುತ್ತಿನಲ್ಲಿ ಬೋಸ್‌ 5,263 ಮತಗಳ ಮುನ್ನಡೆ ಗಳಿಸಿದ್ದರು. 12ನೇ ಸುತ್ತಿನ ಹೊತ್ತಿಗೆ ಅದು 1,13,330 ಮತಗಳಿಗೆ ಏರಿತ್ತು. ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಬೋಸ್‌ ಗೆಲುವು ಖಚಿತವಾಗಿತ್ತು. 3 ಗಂಟೆಯ ಹೊತ್ತಿಗೆ ಮತ ಎಣಿಕೆ ಬಹುತೇಕ ಮುಕ್ತಾಯವಾಗಿತ್ತು. ನಂತರ ಪ್ರತಿ ವಿಧಾನಸಭಾ ಕ್ಷೇತ್ರದ ಐದು ಮತಗಟ್ಟೆಗಳ ಇವಿಎಂಗಳನ್ನು ರ‍್ಯಾಂಡಮ್‌ ಆಗಿ ಆಯ್ಕೆ ಮಾಡಿ ವಿವಿಪ್ಯಾಟ್‌ ಸ್ಲಿಪ್‌ಗಳನ್ನು ಎಣಿಕೆ ಮಾಡಿ, ಇವಿಎಂನಲ್ಲಿ ದಾಖಲಾದ ಮತಗಳಿಗೆ ತಾಳೆ ನೋಡಲಾಯಿತು. 

ಚುನಾವಣಾ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌ ಅವರು, ವಿಜೇತ ಅಭ್ಯರ್ಥಿ ಸುನಿಲ್‌ ಬೋಸ್‌ ಅವರಿಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. 

ಮಾದರಿ ಕ್ಷೇತ್ರ ಮಾಡುವ ಗುರಿ: ಸುನಿಲ್‌ ಬೋಸ್‌

‘ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತದಾರರು ನನಗೆ ದೊಡ್ಡ ಅಂತರದಲ್ಲಿ ಐತಿಹಾಸಿಕ ಗೆಲುವನ್ನು ತಂದುಕೊಟ್ಟಿದ್ದಾರೆ. ನನಗೆ ಹೊಸ ಜವಾಬ್ದಾರಿ ನೀಡಿದ್ದಾರೆ. ಚಾಮರಾಜನಗರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಪ್ರಯತ್ನ ಮಾಡುತ್ತೇನೆ’ ಎಂದು ಸುನಿಲ್‌ ಬೋಸ್‌ ಹೇಳಿದರು. 

ಗೆಲುವಿನ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ‘ಈ ಗೆಲುವಿಗೆ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಮೇಲೆ ವಿಶ್ವಾಸ ಇಟ್ಟು ಮತ ಹಾಕಿದ್ದಾರೆ. ಅವರ ವಿಶ್ವಾಸವನ್ನು ಉಳಿಸುವ ಕೆಲಸ ಮಾಡಬೇಕಿದೆ. ಎಲ್ಲ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು ಸ್ನೇಹಿತರು ಹಿತೈಷಿಗಳೊಂದಿಗೆ ಚರ್ಚೆ ನಡೆಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ. ಜನರಿಗೆ ಉದ್ಯೋಗ ಕಲ್ಪಿಸುವುದು ಕಾಡಂಚಿನ ಪ್ರದೇಶಗಳಲ್ಲಿ ಜನರ ಆರೋಗ್ಯ ತಪಾಸಣೆಗಾಗಿ ಸಂಚಾರಿ ಆಂಬುಲೆನ್ಸ್‌ ವ್ಯವಸ್ಥೆಯಂತಹ ಕ್ರಮಗಳನ್ನು ಕೈಗೊಳ್ಳಲು ಆದ್ಯತೆ ನೀಡುತ್ತೇನೆ’ ಎಂದರು. 

‘ನನ್ನ ಮೇಲೆ ವಿಶ್ವಾಸ ಇಟ್ಟು ಟಿಕೆಟ್‌ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಯಕರಾದ ರಾಹುಲ್‌ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಕೃತಜ್ಞತೆ ಅರ್ಪಿಸುತ್ತೇನೆ’ ಎಂದು ಬೋಸ್‌ ಹೇಳಿದರು. 

ತಮ್ಮ ಸ್ವಕ್ಷೇತ್ರ ತಿ.ನರಸೀಪುರದಲ್ಲಿ ಮುನ್ನಡೆಯ ಅಂತರ ಕಡಿಮೆಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದವು. ಮುನ್ನಡೆ ಕಡಿಮೆಯಾಗಿರಬಹುದು. ಆದರೆ ಹೆಚ್ಚು ಮತಗಳನ್ನು ಗಳಿಸಿದ್ದೇವೆ. ನಮ್ಮ ಕಾರ್ಯಕರ್ತರು ಶ್ರಮ ಪಟ್ಟಿದ್ದಾರೆ. ಕ್ಷೇತ್ರದಿಂದ ಕ್ಷೇತ್ರಕ್ಕೆ ರಾಜಕೀಯ ವಾತಾವರಣ ಬದಲಾಗುತ್ತಿರುತ್ತದೆ. ಎಲ್ಲಿ ಲೋಪ ಆಗಿದೆ ಎಂಬುದರ ಬಗ್ಗೆ ತಂದೆಯವರು (ಡಾ.ಎಚ್‌.ಸಿ.ಮಹದೇವಪ್ಪ) ಪಕ್ಷದ ಮುಖಂಡರೆಲ್ಲ ಸೇರಿ ಚರ್ಚೆ ನಡೆಸುತ್ತೇವೆ. ಅಂತರ ಕಡಿಮೆಯಾದ  ಕಾರಣಕ್ಕೆ ಪಕ್ಷದ ವರ್ಚಸ್ಸು ಕುಗ್ಗಿದೆ ಎಂದಲ್ಲ. ನರಸೀಪುರದಲ್ಲಿ ಕಾಂಗ್ರೆಸ್‌ ಪ್ರಬಲವಾಗಿದೆ’ ಎಂದರು.

ಜನಾದೇಶಕ್ಕೆ ತಲೆ ಬಾಗುವೆ: ಬಾಲರಾಜ್‌

ಫಲಿತಾಂಶದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಎನ್‌ಡಿಎ ಪರಾಜಿತ ಅಭ್ಯರ್ಥಿ ಎಸ್‌.ಬಾಲರಾಜ್‌ ‘ನಿರೀಕ್ಷಿತ ಫಲಿತಾಂಶ ಬಂದಿಲ್ಲ. 30 ವರ್ಷಗಳಿಂದ ಪ್ರಾಮಾಣಿಕವಾಗಿ ಜನ ಸೇವೆ ಮಾಡುತ್ತಾ ಬಂದಿದ್ದೇನೆ. ಪಕ್ಷ ನನ್ನನ್ನು ಗುರುತಿಸಿ ಸ್ಪರ್ಧಿಸಲು ಅವಕಾಶ ನೀಡಿತ್ತು.  ಜೆಡಿಎಸ್‌ ಕೂಡ ಬೆಂಬಲ ನೀಡಿತ್ತು.  ಗೆಲ್ಲುವ ನಿರೀಕ್ಷೆ ಇತ್ತು. ಜನರ ಆದೇಶಕ್ಕೆ ತಲೆ ಬಾಗುತ್ತೇನೆ. ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳುವೆ’ ಎಂದರು. 

‘ಜನರ ಸೇವೆ ಮಾಡಲು ಅಧಿಕಾರ ಇರಬೇಕೆಂದಿಲ್ಲ. ಮುಂದೆಯೂ ಜನರ ಪರವಾಗಿ ಹೋರಾಟ ಕೆಲಸಗಳನ್ನು ಮಾಡುವೆ’ ಎಂದರು.  

ಸೋಲಿಗೆ ಏನು ಕಾರಣ ಎಂದು ಕೇಳಿದ್ದಕ್ಕೆ ‘ನೂರಾರು ಕಾರಣಗಳನ್ನು ಕೊಡಬಹುದು. ಆದರೆ ಸೋಲಿನ ಪರಾಮರ್ಶೆ ಮಾಡಲು ನಾನು ಹೋಗುವುದಿಲ್ಲ. ಕಾಂಗ್ರೆಸ್‌ ನನ್ನ ವಿರುದ್ಧ ಅಪ್ರಚಾರ ಮಾಡಿತು. ಅಧಿಕಾರ ದುರುಪಯೋಗ ಮಾಡಿಕೊಂಡಿತು. ಹಣ ಬಲ ಸೇರಿದಂತೆ ಗೆಲುವಿಗೆ ವಾಮಮಾರ್ಗಗಳನ್ನು ಅನುಸರಿಸಿದೆ. ಕಾಂಗ್ರೆಸ್‌ ಈಗ ಗೆಲುವು ಸಾಧಿಸಿದೆ. ಮುಂದೆ ಜನರಿಗೆ ಅರ್ಥವಾಗಲಿದೆ. ಸುನಿಲ್‌ ಬೋಸ್‌ ಅವರು ಜನರ ಕಷ್ಟಗಳಿಗೆ ಸ್ಪಂದಿಸುವುದರ ಜೊತೆಗೆ ಕ್ಷೇತ್ರದ ಅಭಿವೃದ್ಧಿ ಮಾಡಲಿ’ ಎಂದು ಬಾಲರಾಜ್‌ ಹೇಳಿದರು. 

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌ ಅವರು ವಿಜೇತ ಅಭ್ಯರ್ಥಿ ಸುನಿಲ್‌ ಬೋಸ್‌ ಅವರಿಗೆ ಪ್ರಮಾಣಪತ್ರ ವಿತರಿಸಿದರು. ಕೊಳ್ಳೇಗಾಲ ಶಾಸಕ ಎ.ಆರ್‌.ಕೃಷ್ಣಮೂರ್ತಿ ಇದ್ದರು
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌ ಅವರು ವಿಜೇತ ಅಭ್ಯರ್ಥಿ ಸುನಿಲ್‌ ಬೋಸ್‌ ಅವರಿಗೆ ಪ್ರಮಾಣಪತ್ರ ವಿತರಿಸಿದರು. ಕೊಳ್ಳೇಗಾಲ ಶಾಸಕ ಎ.ಆರ್‌.ಕೃಷ್ಣಮೂರ್ತಿ ಇದ್ದರು
ಮತ ಎಣಿಕೆ ಕೇಂದ್ರದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಮುಖಂಡರು ಬೋಸ್‌ ಗೆಲುವನ್ನು ಸಂಭ್ರಮಿಸಿದ್ದು ಹೀಗೆ...
ಮತ ಎಣಿಕೆ ಕೇಂದ್ರದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಮುಖಂಡರು ಬೋಸ್‌ ಗೆಲುವನ್ನು ಸಂಭ್ರಮಿಸಿದ್ದು ಹೀಗೆ...
ಮತ ಎಣಿಕೆ ಕೇಂದ್ರದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ತಪಾಸಣೆಯ ನಂತರವಷ್ಟೇ ಏಜೆಂಟರು ಸಿಬ್ಬಂದಿಯನ್ನು ಒಳಕ್ಕೆ ಬಿಡಲಾಯಿತು
ಮತ ಎಣಿಕೆ ಕೇಂದ್ರದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ತಪಾಸಣೆಯ ನಂತರವಷ್ಟೇ ಏಜೆಂಟರು ಸಿಬ್ಬಂದಿಯನ್ನು ಒಳಕ್ಕೆ ಬಿಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT