ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡಿ, ಐಟಿಗೆ ದೂರು ಸಲ್ಲಿಸಲಿ: ಕಾಂಗ್ರೆಸ್‌ ಸವಾಲು

ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ಆರೋಪ, ನಿಜಗುಣರಾಜು ಹೇಳಿಕೆಗೆ ಎದಿರೇಟು
Last Updated 27 ನವೆಂಬರ್ 2022, 3:07 IST
ಅಕ್ಷರ ಗಾತ್ರ

ಚಾಮರಾಜನಗರ: ಕಾಡಾ ಅಧ್ಯಕ್ಷ ನಿಜಗುಣರಾಜು ಅವರು ಶಾಸಕ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ಇ.ಡಿ ಹಾಗೂ ಐ.ಟಿಗೆ ದೂರು ನೀಡಲಿ, ಅದನ್ನು ಎದುರಿಸಲು ಶಾಸಕರು ಸಿದ್ಧರಿದ್ದಾರೆ ಎಂದು ಚಾಮರಾಜನಗರ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎ.ಎಸ್‌.ಗುರುಸ್ವಾಮಿ ಶನಿವಾರ ಹೇಳಿದರು.

‘ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ. ಕ್ವಾರಿ ಖರೀದಿ ಮಾಡುವಾಗ ₹2 ಕೋಟಿಗೂ ಅಧಿಕ ಹಣವನ್ನು ನಗದು ರೂಪದಲ್ಲಿ ಕೊಟ್ಟಿದ್ದಾರೆ. ಇದರ ವಿರುದ್ಧ ಇ.ಡಿ ಹಾಗೂ ಐ.ಟಿಗೆ ದೂರು ನೀಡಲಾಗುವುದು’ ಎಂದು ನಿಜಗುಣರಾಜು ಅವರು ಸುದ್ದಿಗೋಷ್ಠಿ ನಡೆಸಿ ನೀಡಿದ ಹೇಳಿಕೆಗೆ ಗುರುಸ್ವಾಮಿ ಹಾಗೂ ಕಾಂಗ್ರೆಸ್‌ನ ಹಲವು ಮುಖಂಡರು ಪ್ರತಿಯಾಗಿ ಸುದ್ದಿಗೋಷ್ಠಿ ನಡೆಸಿ, ಕಾಡಾ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದರು.

‘ನಮ್ಮ ಶಾಸಕರ ಬಗ್ಗೆ ನಿಜಗುಣರಾಜು ಮಾಡಿರುವ ಆರೋಪಗಳು ಸಮಂಜಸವಲ್ಲ. ಅವರು 40 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ. 15 ವರ್ಷಗಳಿಂದ ಶಾಸಕರಾಗಿದ್ದಾರೆ. ಜನಪ್ರತಿನಿಧಿಯಾಗಿ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಾ ಬಂದಿದ್ದಾರೆ. 42 ವರ್ಷಗಳಿಂದ ಗಣಿಗಾರಿಕೆಯಲ್ಲೂ ಅವರು ತೊಡಗಿಕೊಂಡಿದ್ದಾರೆ. ನ್ಯಾಯಸಮ್ಮತವಾಗಿಯೇ ಮಾಡುತ್ತಾ ಬಂದಿದ್ದಾರೆ’ ಎಂದರು.

‘ಕರಿಕಲ್ಲು ವ್ಯಾಪಾರ ಅಂತರರಾಷ್ಟ್ರೀಯ ಮಟ್ಟದ ವ್ಯಾಪಾರವಾಗಿದ್ದು, ಕರಿಕಲ್ಲಿಗ ಉತ್ತಮ ಬೇಡಿಕೆ ಇದೆ. ಜಾಗತಿಕವಾಗಿ ಬೆಲೆ ಹೆಚ್ಚಾದರೆ, ಗಣಿ ಮಾಲೀಕರಿಗೂ ಉತ್ತಮ ಲಾಭವಾಗುತ್ತದೆ. ಆರು ಪಟ್ಟು ಲಾಭ ಸಿಗುವ ಉದಾಹರಣೆಯೂ ಇದೆ. ನಿಜಗುಣರಾಜು ಅವರು ದೂರು ನೀಡಲಿ. ಅದಕ್ಕೆ ಕಾನೂನಾತ್ಮಕವಾಗಿ ಶಾಸಕರು ಉತ್ತರ ನೀಡಲಿದ್ದಾರೆ’ ಎಂದರು.

ನಿಜಗುಣರಾಜು ಅವರು ತಮ್ಮ ರೆಸಾರ್ಟ್‌ ಬಳಿ ನಗರಸಭೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ನಾವು ಈ ಹಿಂದೆಯೇ ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದ್ದೆವು. ಅವರಿನ್ನೂ ಆ ಜಾಗ ತೆರವುಗೊಳಿಸಿಲ್ಲ. ಇದಕ್ಕೆ ಅವರು ಮೊದಲು ಸ್ಪಷ್ಟನೆ ನೀಡಲಿ. ಅದು ಬಿಟ್ಟು ಬ್ಲಾಕ್‌ ಮೇಲ್‌ ತಂತ್ರ ಅನುಸರಿಸುವುದನ್ನು ಅವರು ಬಿಡಲಿ’ ಎಂದು ಗುರುಸ್ವಾಮಿ ಹೇಳಿದರು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷಬಿ.‌ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕ ಮಹದೇವು, ಮುಖಂಡರಾದ ಚಂಗುಮಣಿ, ಮಹದೇವಯ್ಯ ಇದ್ದರು.


.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT