ಭಾನುವಾರ, ಆಗಸ್ಟ್ 1, 2021
21 °C
ಕೋವಿಡ್‌ 3ನೇ ಅಲೆ ತಡೆಯಲು ಆರೋಗ್ಯ ಇಲಾಖೆಯ ಬಲವರ್ಧನೆ ಮಾಡಲು ಕಾಂಗ್ರೆಸ್‌ ಒತ್ತಾಯ

ಜಿಲ್ಲೆಯ ಜನರನ್ನು ಕೊಲ್ಲುವ ಅಧಿಕಾರಿಗಳು ಬೇಡ: ಕೆರೆಹಳ್ಳಿ ನವೀನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಜಿಲ್ಲೆಯ ಜನರನ್ನು ಕೊಲ್ಲುವ ಅಧಿಕಾರಿಗಳು ನಮಗೆ ಬೇಡ. ಮಾತುಗಾರರೂ ಬೇಡ.  ಜನರ ಆರೋಗ್ಯ ಕಾಪಾಡುವವರು ಬೇಕು’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ವಕ್ತಾರ ಕೆರೆಹಳ್ಳಿ ನವೀನ್‌ ಅವರು ಸೋಮವಾರ ಹೇಳಿದರು. 

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಕೋವಿಡ್‌ 3ನೇ ಅಲೆ ಬರುವುದರ ಮುನ್ನ ಆರೋಗ್ಯ ಇಲಾಖೆಯ ಬಲವರ್ಧನೆ ಮಾಡಲು ಸರ್ಕಾರ, ಜಿಲ್ಲಾಡಳಿತ ಮುಂದಾಗಬೇಕು. ಆರೋಗ್ಯ ಇಲಾಖೆಯಲ್ಲಿ 560 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 600 ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 

‘ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕ ದುರಂತದಲ್ಲಿ 36ಕ್ಕೂ ಹೆಚ್ಚು ಮಂದಿ ಮೃತಪಟ್ಟು 50 ದಿನಗಳು ಕಳೆದಿವೆ. ಆದರೆ, ಇದುವರೆಗೂ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಮೃತರ ಕುಟುಂಬಗಳಿಗೆ ಪ‍ರಿಹಾರ ನೀಡಿಲ್ಲ. ಹೈಕೋರ್ಟ್‌ ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಸೂಚನೆ ನೀಡಿದ ಬಳಿಕ, ಸರ್ಕಾರ 24 ಜನರ ಕುಟುಂಬಗಳಿಗೆ ತಲಾ ₹2 ಲಕ್ಷ ನೀಡಿ ಕೈತೊಳೆದುಕೊಂಡಿದೆ. ಇದಕ್ಕೆ ಸಂಬಂಧಪಟ್ಟ ತನಿಖಾ ಆಯೋಗದ ಕಚೇರಿಯನ್ನು ಮೈಸೂರಿನಲ್ಲಿ ತೆರೆಯಲಾಗಿದೆ. ಮೈಸೂರಿನಲ್ಲಿ ಈಗಲೂ ಲಾಕ್ ಡೌನ್ ಜಾರಿಯಲ್ಲಿದ್ದು, ಸಂತ್ರಸ್ತರಿಗೆ ತಮ್ಮ ಆಹವಾಲು ಸಲ್ಲಿಸಲು ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ, ಕಚೇರಿಯನ್ನು ಚಾಮರಾಜನಗರಕ್ಕೆ ಸ್ಥಳಾಂತರಿಸಬೇಕು’ ಎಂದು ಒತ್ತಾಯಿಸಿದರು. 

ಹನೂರಿನ ನಿರ್ಲಕ್ಷ್ಯ: ‘ಹನೂರು ತಾಲ್ಲೂಕು ಕೇಂದ್ರವಾಗಿದ್ದು, ಅಲ್ಲಿನ ಆಸ್ಪತ್ರೆಯನ್ನು ಮೇಲ್ದರ್ಗೇರಿಸಲು ಹಾಗೂ ತಾಲ್ಲೂಕು ಸ್ಥಾನಮಾನ ನೀಡುವಲ್ಲಿ ಬಿಜೆಪಿ ತಾರತಮ್ಯ ಮಾಡುತ್ತಿದ್ದು, ಕಾಂಗ್ರೆಸ್‌ನ ಶಾಸಕರು ಇದ್ದಾರೆ ಅನ್ನುವ ಕಾರಣಕ್ಕೆ ನಿರ್ಲಕ್ಷ್ಯ ಮಾಡುತ್ತಿದೆ’ ಎಂದು ದೂರಿದರು. 

ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ, ವಕೀಲ ಅರುಣ್ ಕುಮಾರ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಗೋವಿಂದರಾಜ್  ಇದ್ದರು. 

ಶ್ರೀರಾಮುಲು ರಾಜೀನಾಮೆಗೆ ಒತ್ತಾಯ

ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಜಿಲ್ಲಾಧ್ಯಕ್ಷ ಎನ್.ನಾಗರಾಜು ಅವರು ಮಾತನಾಡಿ, ‘ಆಮ್ಲಜನಕ ದುರಂತದಲ್ಲಿ ಸತ್ತವರ ಪೈಕಿ 13ಕ್ಕೂ ಹೆಚ್ಚು ಎಸ್‌ಸಿ, ಎಸ್‌ಟಿ ಸಮುದಾಯದವರಿದ್ದಾರೆ. ಇವರ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ನೀಡಿಲ್ಲ. ಈ ಇಲಾಖೆಯ ಸಚಿವ ಶ್ರೀರಾಮುಲು ಸೌಜನ್ಯಕ್ಕೂ ಭೇಟಿ ನೀಡಿಲ್ಲ. ಇಲಾಖೆಯಲ್ಲಿ ಕೋಟಿಗಟ್ಟಲೆ ಅನುದಾನ ಇದೆ. ಇದನ್ನು ವಿನಿಯೋಗಿಸುವಲ್ಲಿ ವಿಫಲರಾಗಿರುವ ಶ್ರೀರಾಮುಲು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು’ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.