ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ತೆಕ್ಕೆಗೆ ಗುಂಡ್ಲುಪೇಟೆ ಪುರಸಭೆ

ಕಿರಣ್ ಗೌಡ ಅಧ್ಯಕ್ಷ, ಉಪಾಧ್ಯಕ್ಷರಾಗಿ ಹೀನಾ ಕೌಸರ್ ಆಯ್ಕೆ
Published 4 ಸೆಪ್ಟೆಂಬರ್ 2024, 13:53 IST
Last Updated 4 ಸೆಪ್ಟೆಂಬರ್ 2024, 13:53 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಪುರಸಭೆಯ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಬಿಜೆಪಿಯಿಂದ ಪಕ್ಷಾಂತರಗೊಂಡು ಕಾಂಗ್ರೆಸ್ ಸೇರ್ಪಡೆಯಾದ ಕಿರಣ್ ಗೌಡ ಅಧ್ಯಕ್ಷರಾಗಿ ಹಾಗೂ ಹೀನಾ ಕೌಸರ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಕಿರಣ್ ಗೌಡ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಹೀನಾ ಕೌಸರ್ ಹಾಗೂ ಬಿಜೆಪಿಯಿಂದ ಎಸ್.ಕುಮಾರ್ ನಾಮಪತ್ರ ಸಲ್ಲಿಸಿದ್ದರು.

ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪಕ್ಷದ ಸದಸ್ಯರು, ಶಾಸಕ, ಸಂಸದ, ಎಸ್‍ಡಿಪಿಐ, ಪಕ್ಷೇತರ ಹಾಗೂ ಬಿಜೆಪಿಯಿಂದ ಪಕ್ಷಾಂತರಗೊಂಡು ಕಾಂಗ್ರೆಸ್ ಸೇರ್ಪಡೆಯಾದವರ ಮತ ಸೇರಿದಂತೆ 14 ಮಂದಿ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಪರ 8 ಮಂದಿ ಕೈ ಎತ್ತಿದ್ದರು.  ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಟಿ.ರಮೇಶ್ ಬಾಬು ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.

ನೂರಾರು ಮಂದಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪುರಸಭೆ ಕಾರ್ಯಾಲಯದ ಮುಂದೆ ಜಮಾಯಿಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಬೃಹತ್ ಹೂವಿನ ಹಾರ ಹಾಕಿ, ಜಯ ಘೋಷ ಕೂಗಿ ಸಂಭ್ರಮಿಸಿದರು.

ಸಂಸದ ಸುನೀಲ್ ಬೋಸ್ ಮಾತನಾಡಿ, ‘ಶಾಸಕರ ತಂತ್ರಗಾರಿಕೆಯಿಂದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯಲಾಗಿದ್ದು, ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ’ ಎಂದು ಹೇಳಿದರು.

ಪುರಸಭೆ ನೂತನ ಅಧ್ಯಕ್ಷ ಕಿರಣ್ ಗೌಡ ಮಾತನಾಡಿ, ‘ಪುರಸಭೆಯ 10ನೇ ಅವಧಿಗೆ ಕಾಂಗ್ರೆಸ್ ಪಕ್ಷದಿಂದ ನನ್ನನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿರುವುದು ಖುಷಿ ತಂದಿದೆ. ಎಲ್ಲಾ ಪುರಸಭೆ ಸದಸ್ಯರು ಹಾಗೂ ಶಾಸಕರ ಸಹಕಾರದೊಂದಿಗೆ ಗುಂಡ್ಲುಪೇಟೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ’ ಎಂದರು.

ಈ ವೇಳೆ ಸದಸ್ಯರಾದ ಅಣ್ಣಯ್ಯಸ್ವಾಮಿ, ಮಹಮ್ಮದ್ ಇಲಿಯಾಸ್, ಮಧುಸೂದನ್, ಎನ್.ಕುಮಾರ್, ಅನ್ನಪೂರ್ಣ, ನಿರ್ಮಲ, ಶ್ರೀನಿವಾಸ್ ಕಣ್ಣಪ್ಪ, ಭಾಗ್ಯಲಕ್ಷ್ಮೀ, ಎಸ್‍ಡಿಪಿಐ ಸದಸ್ಯ ರಾಜಗೋಪಾಲ್, ಪಕ್ಷೇತರ ಸದಸ್ಯ ಶಶಿಧರ್ ಪಿ.ದೀಪು, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ಕರಕಲಮಾದಹಳ್ಳಿ ಪ್ರಭು, ಮುಖಂಡರಾದ ಪ್ರದೀಪ್, ಸಾಹುಲ್ ಹಮೀದ್ ಸೇರಿದಂತೆ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

ಪುರಸಭೆಯ ಗೆಲುವಿನ ಮೂಲಕ ಜಿಲ್ಲೆಯು ಕಾಂಗ್ರೆಸ್ ಪಕ್ಷದ ಭದ್ರ ಕೋಟೆ ಎಂಬುದು ಮತ್ತೊಮ್ಮೆ ಸಾಬೀಗಿದೆ
ಸುನೀಲ್ ಬೋಸ್ ಸಂಸದ

ಗುಂಡ್ಲುಪೇಟೆಯಲ್ಲಿಯೇ ಇದ್ದೀನಿ: ಶಾಸಕ ಗಣೇಶಪ್ರಸಾದ್

‘ಗಣೇಶ್ ಎಲ್ಲಿದ್ದೀಯಪ್ಪ ಎಂದು ಟೀಕಿಸಿದ ವಿರೊಧ ಪಕ್ಷದವರಿಗೆ ಇಂದು ಪುರಸಭೆಯ ಅಧಿಕಾರ ಹಿಡಿಯುವ ಮೂಲಕ ಗುಂಡ್ಲುಪೇಟೆಯಲ್ಲಿಯೇ ಇದ್ದೀನಿ ಎಂಬುದನ್ನು ತೋರಿಸಿದ್ದೇನೆ’ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಹೇಳಿದರು. ‘1994ರಿಂದ ಎಚ್.ಎಸ್.ಮಹದೇವಪ್ರಸಾದ್ ಶಾಸಕರಾಗಿದ್ದ ಅವಧಿಯಿಂದಲೂ ಪುರಸಭೆ ಕಾಂಗ್ರೆಸ್ ವಶದಲ್ಲಿಯೇ ಇತ್ತು. ಆದರೆ 2019ರ ಚುನಾವಣೆಯ ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಬೋರ್ಡ್ ಆಯಿತು. ಅದನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲಾಗಿದೆ. ಇದಕ್ಕೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಹಕಾರ ನೀಡಿದ್ದಾರೆ’ ಎಂದು ತಿಳಿಸಿದರು. ಮೂಲ ಕಾಂಗ್ರೆಸ್ಸಿಗರಲ್ಲಿ ಅಸಮಾಧಾನವಿಲ್ಲ: ಪಕ್ಷಾಂತರಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಎಂಬ ಪ್ರಶ್ನೆಗೆ ಉತ್ತರಿಸಿ ‘ಮೂಲ ಕಾಂಗ್ರೆಸ್ಸಿಗರಲ್ಲಿ ಅಸಮಾಧಾನವಿಲ್ಲ. ಯಾವುದೇ ಕಾರಣಕ್ಕೂ ವಿಚಲಿತರಾಗಬೇಡಿ ಮುಂದಿನ ದಿನಗಳಲ್ಲಿ ಅವಕಾಶ ನೀಡಲಾಗುವುದು ಎಂದಿದ್ದೇನೆ. ಅದರಂತೆ ನಡೆದುಕೊಳ್ಳಲಾಗುವುದು. ಪಟ್ಟಣದ ಅಭಿವೃದ್ಧಿ ದೃಷ್ಠಿಯಿಂದ ಅಧಿಕಾರ ಹಿಡಿಯಲಾಗಿದ್ದು ರಸ್ತೆ ಚರಂಡಿ ಕುಡಿಯುವ ನೀರು ಬೀದಿ ದೀಪ ಸ್ವಚ್ಛತೆ ಸೇರಿದಂತೆ ಮೂಲಸೌಲಭ್ಯಕ್ಕೆ ಒತ್ತು ನೀಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT