ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂವಿಧಾನ ಜಾಗೃತಿ ಜಾಥ: ಮೊಳಗಿದ ‘ನಮ್ಮ ಸಂವಿಧಾನ, ನಮ್ಮ ಹೆಮ್ಮೆ’ ಘೋಷಣೆ

Published 16 ಫೆಬ್ರುವರಿ 2024, 2:44 IST
Last Updated 16 ಫೆಬ್ರುವರಿ 2024, 2:44 IST
ಅಕ್ಷರ ಗಾತ್ರ

ಚಾಮರಾಜನಗರ: ಸಂವಿಧಾನ ಅಂಗೀಕಾರವಾಗಿ 75 ವರ್ಷ ಪೂರ್ಣಗೊಂಡಿರುವ ಅಂಗವಾಗಿ  ಸಂವಿಧಾನದ ಮಹತ್ವ ಮತ್ತು ಆಶಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ನಗರದಲ್ಲಿ ಗುರುವಾರ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. 

ನಗರದ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ ಅವರು ಭಾರತ ಸಂವಿಧಾನದ ಪೀಠಿಗೆ ಭಿತ್ತಿಪತ್ರಗಳನ್ನು ಬಸ್ ನಿಲ್ದಾಣ ಹಾಗೂ ಬಸ್‌ಗಳಲ್ಲಿ ಅಳವಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪ್ರಯಾಣಿಕರು, ಸಂವಿಧಾನ ಪೀಠಿಕೆ ವಾಚನ ಮಾಡಿ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಎಂದು ಘೋಷಣೆ ಕೂಗಿದರು.

ಬಸ್ ನಿಲ್ದಾಣದ ವೃದ್ದರೊಬ್ಬರು ಸಂವಿಧಾನ ಪೀಠಿಕೆಯನ್ನು ಓದಿ ನೆರೆದಿದ್ದವರ ಮೆಚ್ಚುಗೆ ಗಳಿಸಿದರು. ಕೆ.ಎಸ್.ಆರ್.ಟಿಸಿ ಸಿಬ್ಬಂದಿ ಕೂಡ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.  

ನಗರದ ಸಂತ ಫ್ರಾನ್ಸಿಸ್ ಶಾಲಾ ಮೈದಾನದಲ್ಲಿ ಶಾಲೆಯ 650ಕ್ಕೂ ಹೆಚ್ಚು ವಿದ್ಯಾರ್ಥಿಗಳು ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಎಂಬ ಅಕ್ಷರ ರೂಪದಲ್ಲಿ ನಿಂತು ಒಕ್ಕೊರಲಿನಿಂದ ಘೋಷ ಮೊಳಗಿಸಿದ್ದು ವಿಶೇಷ ಗಮನ ಸೆಳೆಯಿತು.

ಶಾಲೆಯ ವಿದ್ಯಾರ್ಥಿನಿಯರಾದ ಬಿ.ಎಸ್.ಮಾನಸ, ಎಂ.ಕೃತಿಕಾ, ಬಿ.ಎಸ್.ಸೃಷ್ಠಿ ಸಂವಿಧಾನ ಪೀಠಿಕೆ ಬೋಧಿಸಿದರು.

ಗೀತಾ ಹುಡೇದ ಮಾತನಾಡಿ, ‘ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಮಹತ್ವ ಮತ್ತು ಸದಾಶಯಗಳನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ಸಂವಿಧಾನ ಜಾಗೃತಿಗಾಗಿ ಜಿಲ್ಲಾದ್ಯಂತ ಅರಿವಿನ ಸ್ತಬ್ದ ಚಿತ್ರ ಸಾಗುತ್ತಿದೆ. ಈ ಉದ್ದೇಶಕ್ಕಾಗಿ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ, ಸಂತ ಫ್ರಾನ್ಸಿಸ್ ಶಾಲೆಯ ಪ್ರಾಂಶುಪಾಲ ಪ್ರಭಾಕರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ, ಬಿ.ಆರ್.ಸಿ. ಬಸವರಾಜು, ಇನ್ನಿತರ ಅಧಿಕಾರಿಗಳು, ಶಿಕ್ಷಕರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT