ಭಾನುವಾರ, ಮೇ 9, 2021
26 °C
ಮೂರ್ನಾಲ್ಕು ದಶಕಗಳಿಂದ ಖಜಾನೆಯಲ್ಲಿದ್ದ ಬೆಳ್ಳಿ ವಸ್ತುಗಳು; ರಥ ನಿರ್ಮಾಣಕ್ಕೆ ಬಳಕೆ

ಮಹದೇಶ್ವರ ಬೆಟ್ಟ: ಕಾಣಿಕೆ ಬೆಳ್ಳಿ ಕರಗಿಸಿ ಗಟ್ಟಿ ಮಾಡುವ ಪ್ರಕ್ರಿಯೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಇಲ್ಲಿನ ಪ್ರಸಿದ್ಧ ಯಾತ್ರಾಸ್ಥಳ ಮಲೆಮಹದೇಶ್ವರಸ್ವಾಮಿ ದೇವಾಲಯಕ್ಕೆ ಭಕ್ತರು ಹರಕೆ, ಕಾಣಿಕೆ ರೂಪದಲ್ಲಿ ಸಲ್ಲಿಸಿದ್ದ, ಮೂರ್ನಾಲ್ಕು ದಶಕಗಳಿಂದ ಸಂಗ್ರಹವಾಗಿದ್ದ ಸುಮಾರು 400 ಕೆಜಿಗಳಷ್ಟು ಅನುಪಯುಕ್ತ ಬೆಳ್ಳಿಯನ್ನು ಕರಗಿಸಿ ಗಟ್ಟಿಯನ್ನಾಗಿ ಮಾಡುವ ಕಾರ್ಯಕ್ಕೆ ಭಾನುವಾರ ಚಾಲನೆ ಸಿಕ್ಕಿದೆ. 

‘ಇದುವರೆಗೂ ಈ ಬೆಳ್ಳಿಯನ್ನು ಖಜಾನೆಯಲ್ಲಿ ಇರಿಸಲಾಗಿದ್ದು, ಕೊಠಡಿ ಭರ್ತಿಯಾಗಿತ್ತು. ಅಲ್ಲದೇ, ಮಲೆ ಮಹದೇಶ್ವರಸ್ವಾಮಿಗೆ ಬೆಳ್ಳಿ ರಥ ನಿರ್ಮಿಸಲು ಮುಂದಾಗಿದ್ದು, ಇದಕ್ಕಾಗಿ ಬೆಳ್ಳಿಯ ಅಗತ್ಯವೂ ಇದೆ. ಹೀಗಾಗಿ ಬೆಳ್ಳಿಯನ್ನು ಕರಗಿಸುವ ನಿರ್ಧಾರ ಕೈಗೊಳ್ಳಲಾಯಿತು’ ಎಂದು ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಬೆಳ್ಳಿ ಕರಗಿಸಿ ಗಟ್ಟಿ ತಯಾರಿಸುವ ಕಾರ್ಯಕ್ಕಾಗಿ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ನೇತೃತ್ವದಲ್ಲಿ ಉಪ ಸಮಿತಿಯೊಂದನ್ನು ಮಾಡಲಾಗಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ವಿಡಿಯೊ ಚಿತ್ರೀಕರಣ ಸೇರಿದಂತೆ ಅಗತ್ಯ ಭದ್ರತಾ ವ್ಯವಸ್ಥೆಯನ್ನು ರೂಪಿಸಿ, ಈ ಕಾರ್ಯ ಆರಂಭಿಸಲಾಗಿದ್ದು, ಮೂರ್ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಅವರು ಹೇಳಿದರು.  

ಶುದ್ಧ ಬೆಳ್ಳಿಯಲ್ಲ: ‘ದೇವಾಲಯಕ್ಕೆ ಕಾಣಿಕೆ, ಹರಕೆ ಅಥವಾ ದಾನದ ರೂಪದಲ್ಲಿ ಬಂದಿರುವ ಬೆಳ್ಳಿ ವಸ್ತುಗಳು ಆಭರಣ ಬೆಳ್ಳಿ. ಹಾಗಾಗಿ, ಈಗ ತಯಾರಿಸುವ ಗಟ್ಟಿ ಶುದ್ಧ ಬೆಳ್ಳಿ ಅಲ್ಲ. ಇದರಲ್ಲಿ ಶೇ 70ರಿಂದ 80ರಷ್ಟು ಶುದ್ಧ ಬೆಳ್ಳಿ ಇರಬಹುದು. ಈ ಎಲ್ಲ ಗಟ್ಟಿಗಳನ್ನು ಸರ್ಕಾರದ ಸಂಸ್ಥೆಗೆ (ಟಂಕಸಾಲೆ) ನೀಡಿ, ಅದಕ್ಕೆ ಸರಿ ಸಮನಾದ ಶೇ 100ರಷ್ಟು ಶುದ್ಧ ಬೆಳ್ಳಿಯನ್ನು ಪಡೆದು ರಥದ ನಿರ್ಮಾಣಕ್ಕೆ ಬಳಸಲಾಗುವುದು’ ಎಂದು ಜಯವಿಭವಸ್ವಾಮಿ ಅವರು ಮಾಹಿತಿ ನೀಡಿದರು. 

ಹಳೆಯ ನಾಣ್ಯಗಳ ಸಂಗ್ರಹ: ಖಜಾನೆಯಲ್ಲಿ ಇರಿಸಲಾಗಿದ್ದ ಬೆಳ್ಳಿ ವಸ್ತುಗಳಲ್ಲಿ ಹಳೆಯ ನಾಣ್ಯಗಳು, ಪುರಾತನ ಕಾಲದ ಬೆಳ್ಳಿ ವಸ್ತುಗಳಿದ್ದು, ಅದನ್ನು ಹಾಗೆಯೇ ಉಳಿಸಿಕೊಳ್ಳಲು ಪ್ರಾಧಿಕಾರ ನಿರ್ಧರಿಸಿದೆ. ಮುಂದೆ ಇವುಗಳನ್ನು ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲು ಅಧಿಕಾರಿಗಳು ಯೋಚಿಸಿದ್ದಾರೆ. 

 

ರಥಕ್ಕೆ ಬೇಕು 450 ಕೆಜಿ ಶುದ್ಧ ಬೆಳ್ಳಿ 

ಬೆಳ್ಳಿ ರಥ ನಿರ್ಮಾಣಕ್ಕಾಗಿ 450 ಕೆಜಿಗಳಷ್ಟು ಶುದ್ಧ ಬೆಳ್ಳಿ ಅಗತ್ಯವಿದೆ. ಪ್ರಾಧಿಕಾರವು ಈ ಹಿಂದೆಯೇ, ಶುದ್ಧ ಬೆಳ್ಳಿಯನ್ನು ನೀಡುವಂತೆ ಭಕ್ತರಲ್ಲಿ ವಿನಂತಿ ಮಾಡಿತ್ತು. ಈಗಾಗಲೇ 45 ಕೆಜಿಗಳಷ್ಟು ಬೆಳ್ಳಿ ದಾನವಾಗಿ ಬಂದಿದೆ. 

‘ಈಗ ಕರಗಿಸಲಾಗಿರುವ ಬೆಳ್ಳಿಯಲ್ಲಿ ಅಂದಾಜು 300ರಿಂದ 320 ಕೆಜಿಯಷ್ಟು ಶುದ್ಧಬೆಳ್ಳಿ ಸಿಗಬಹುದು. ದಾನಿಗಳು ಇನ್ನೂ ಕೊಡುವುದಕ್ಕೆ ಅವಕಾಶ ಇದೆ. ಒಂದು ವೇಳೆ ಅಗತ್ಯಬಿದ್ದರೆ ಟೆಂಡರ್‌ ಕರೆದು ಅಗತ್ಯವಿರುವಷ್ಟು ಬೆಳ್ಳಿಯನ್ನು ಖರೀದಿಸಲಾಗುವುದು’ ಎಂದು ಜಯವಿಭವಸ್ವಾಮಿ ಅವರು ಹೇಳಿದರು. 

‘ಬೆಳ್ಳಿ ರಥಕ್ಕಾಗಿ ಈಗಾಗಲೇ 17 ಅಡಿಗಳಷ್ಟು ಎತ್ತರದ ತೇಗದ ರಥ ಸಿದ್ಧವಾಗಿದೆ. ಇದಕ್ಕೆ ಬೆಳ್ಳಿ ಕವಚ ಅಳವಡಿಸಬೇಕಾಗಿದೆ. ಈ ಕಾರ್ಯಕ್ಕೆ ₹20 ಲಕ್ಷ ಬೇಕಾಗುತ್ತದೆ. ಈ ವೆಚ್ಚವನ್ನು ಬರಿಸಲು ಬೆಂಗಳೂರಿನ‌ ಉದ್ಯಮಿ ಸೋಮಶೇಖರ್ ಹಾಗೂ ಸೇಲಂನ‌ ಮೋಹನ್‌ರಾಮ್ ಅವರು ಮುಂದೆ ಬಂದಿದ್ದಾರೆ. ಯೋಜನೆಯಂತೆ ನಡೆದರೆ ಇದೇ ಜುಲೈ ಅಥವಾ ಆಗಸ್ಟ್‌ನಲ್ಲಿ ಬೆಳ್ಳಿ ರಥ ನಿರ್ಮಾಣವಾಗಲಿದೆ’ ಎಂದು ಅವರು ವಿವರಿಸಿದರು. 

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು