ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ ಆತಂಕ: ಗಡಿಭಾಗದಲ್ಲಿ ಕಟ್ಟೆಚ್ಚರ

ಶಂಕಿತರ ಚಿಕಿತ್ಸೆಗೆ ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಯಲ್ಲಿ ತಲಾ ಐದು ಹಾಸಿಗೆ ಮೀಸಲು
Last Updated 3 ಫೆಬ್ರುವರಿ 2020, 15:37 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ: ಕೇರಳದಲ್ಲಿ ಮೂವರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಡುತ್ತಿದ್ದಂತೆಯೇ ನೆರೆ ರಾಜ್ಯಕ್ಕೆ ಹೊಂದಿಕೊಂಡಿರುವ ಗುಂಡ್ಲುಪೇಟೆಯ ಗಡಿ ಭಾಗದಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.

ಅಲ್ಲಿಂದ ರಾಜ್ಯಕ್ಕೆ ಬರುತ್ತಿರುವ ಪ್ರಯಾಣಿಕರ ಮೇಲೆ ನಿಗಾ ಇಟ್ಟಿದ್ದು, ಎರಡು ದಿನಗಳಿಂದ ತಪಾಸಣೆ ನಡೆಸುತ್ತಿದೆ.

ರಾಷ್ಟ್ರೀಯ ಹೆದ್ದಾರಿ 67 ಮತ್ತು 766ರಲ್ಲಿರುವ ಕಕ್ಕನಹಳ್ಳ ಮತ್ತು ಮೂಲೆ ‌ಹೊಳೆ ಚೆಕ್‌ಪೋಸ್ಟ್‌ಗಳಲ್ಲಿ ನೆರೆಯ ರಾಜ್ಯದಿಂದ ಬರುತ್ತಿರುವ ಪ್ರಯಾಣಿಕರ ಮಾಹಿತಿ ಪಡೆಯುತ್ತಿರುವ ಸಿಬ್ಬಂದಿ, ತಪಾಸಣೆ ನಡೆಸಿ ಒಳಬಿಡುತ್ತಿದ್ದಾರೆ. ಕಾಡಂಚಿನ ಗ್ರಾಮದಲ್ಲಿ ವಾಸಿಸುತ್ತಿರುವ ಹಾಗೂ ಕೇರಳಕ್ಕೆ ಪ್ರತಿನಿತ್ಯ ಕೂಲಿಗಾಗಿ ಹೋಗುವವರ ಮೇಲೆ ನಿಗಾ ಇಡುತ್ತಿದ್ದಾರೆ.

‘ಎರಡು ಚೆಕ್‌ಪೋಸ್ಟ್‌ಗಳಲ್ಲಿ ಎರಡು ತಂಡಗಳು ಕಾರ್ಯನಿರ್ವಹಿಸುತ್ತಿದ್ದು, 2,500 ಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆ ಮಾಡಲಾಗಿದೆ.ಒಬ್ಬರು ವೈದ್ಯರು ವೈದ್ಯಕೇತರ ಸಿಬ್ಬಂದಿ ತಂಡದಲ್ಲಿದ್ದಾರೆ. ಬರುವ ಪ್ರಯಾಣಿಕರಲ್ಲಿ ಶೀತ, ನೆಗಡಿ ಸೇರಿದಂತೆ ಇತರೆ ರೋಗ ಲಕ್ಷಣಗಳಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಸ್ವಚ್ಛತೆಯ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ರವಿಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತ್ಯೇಕ ಹಾಸಿಗೆ: ಜಿಲ್ಲಾ ಆರೋಗ್ಯ ಇಲಾಖೆ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು, ‘ಕೇರಳದಿಂದ ಬರುವವರ ತಪಾಸಣೆ ಮಾಡುವುದರ ಜೊತೆಗೆ ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ತಲಾ ಐದು ಹಾಸಿಗೆಗಳನ್ನು ಚಿಕಿತ್ಸೆಗಾಗಿ ಮೀಸಲಿಡಲಾಗಿದೆ’ ಎಂದರು.

‘ಕೇರಳದಲ್ಲಿ ಕೊರೊನಾ ವೈರಸ್‌ ಸೋಂಕು ಕಂಡು ಬಂದ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿರುವವರು ಹಾಗೂ ಅವರು ವಾಸಿಸುತ್ತಿರುವ ಪ್ರದೇಶದಿಂದ ಬಂದಿರುವವರಾದರೆ ಹೆಚ್ಚು ವಿಚಾರಣೆಗೆ ಒಳಪಡಿಸಿ, ಅವರಲ್ಲಿ ರೋಗದ ಲಕ್ಷಣವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಅನುಮಾನ ಬಂದರೆ,ಅವರ ರಕ್ತದ ಮಾದರಿ ಹಾಗೂ ಗಂಟಲಿನಲ್ಲಿರುವ ಜೊಲ್ಲು/ಕಫದ ಮಾದರಿ ಸಂಗ್ರಹಿಸಿ ಬೆಂಗಳೂರಿಗೆ ಕಳುಹಿಸುತ್ತೇವೆ. ಆಸ್ಪತ್ರೆಯಲ್ಲಿ ಅವರನ್ನು ಪ್ರತ್ಯೇಕವಾಗಿರಿಸಿ 15 ದಿನಗಳ ಕಾಲ ಆರೋಗ್ಯದ ಮೇಲೆ ನಿಗಾ ಇಡಬೇಕಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಅರಿವಿಗೆ ಕ್ರಮ

‘ಗಡಿ ಪ್ರದೇಶ, ನಗರ ಹಾಗೂ ಇತರ ಪ್ರದೇಶಗಳಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕರ ಪತ್ರಗಳನ್ನು ಎಲ್ಲ ಕಡೆಯೂ ಹಂಚಲಾಗುವುದು’ ಎಂದು ವಿವರಿಸಿದರು.

ಬಾರದ ಚೀನಿ ಉದ್ಯೋಗಿಗಳು

ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಹೋಬಳಿಯ ತ್ರಿಯಂಬಕಪುರ ಗ್ರಾಮದಲ್ಲಿರುವ ಚೀನಾ ಮೂಲದ ಚೆಂಗ್ವಾಂಗ್‌ ನ್ಯಾಚುರಲ್ಸ್‌ ಎಕ್ಟ್ರಾಕ್ಟ್‌ ಇಂಡಿಯಾ (ಪ್ರೈ) ಲಿಮಿಟೆಡ್‌ನಲ್ಲಿ ಚೀನಾದ ಎಂಟು ಮಂದಿ ಉದ್ಯೋಗದಲ್ಲಿದ್ದಾರೆ.

ಈ ಪೈಕಿ ಐವರು ಜನವರಿ 10ರಂದು ಹಾಗೂ 21ರಂದು ಚೀನಾಗೆ ತೆರಳಿದ್ದರು. ಇವರಲ್ಲಿ ಇಬ್ಬರು ಸೋಮವಾರ (ಫೆ.3) ಭಾರತಕ್ಕೆ ಬರಬೇಕಿತ್ತು. ಆದರೆ, ವೀಸಾ ಸಿಗದ ಕಾರಣ ಬಂದಿಲ್ಲ’ ಎಂದು ಡಾ.ರವಿಕುಮಾರ್‌ ಅವರು ಹೇಳಿದರು.

‘ಔಷಧವಿಲ್ಲ, ಸ್ವಚ್ಛತೆಯೇ ಮದ್ದು’

‘ಕೊರೊನಾ ವೈರಸ್‌ ಸೋಂಕಿಗೆ ಇದುವರೆಗೆ ಔಷಧ ಕಂಡು ಹಿಡಿದಿಲ್ಲ. ಜ್ವರ, ಶೀತ, ನೆಗಡಿ, ಗಂಟಲುನೋವು, ಭೇದಿ ರೋಗ ಲಕ್ಷಣಗಳು. ಮುಂದಿನ ಹಂತದಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಸೋಂಕು ತಗುಲಿದ ವ್ಯಕ್ತಿಯ ಸ್ಪರ್ಶದಿಂದ, ಸೀನಿದರೆ ಇದು ಇತರರಿಗೂ ಹರಡುತ್ತದೆ’ ಎಂದು ಡಾ.ಎಂ.ಸಿ.ರವಿ ಅವರು ಮಾಹಿತಿ ನೀಡಿದರು.

‘ಸೋಂಕು ಹರಡದಂತೆ ತಡೆಯುವುದೇ ಇದಕ್ಕೆ ಮದ್ದು. ಅದಕ್ಕಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT