ಮಂಗಳವಾರ, ಜೂನ್ 15, 2021
27 °C
ಕೋವಿಡ್‌: ಮತ್ತಿಬ್ಬರು ಸಾವು, 60 ಹೊಸ ಪ್ರಕರಣ, 54 ಮಂದಿ ಗುಣಮುಖ

ಚಾಮರಾಜನಗರ | ಕೊರೊನಾ ಸೈನಿಕ ಎಎಸ್‌ಐ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ಠಾಣೆಯೊಂದರ ಎಎಸ್‌ಐಯೊಬ್ಬರು ಸೇರಿದಂತೆ ಇಬ್ಬರು ಕೋವಿಡ್‌ ಸೋಂಕಿತರು ಗುರುವಾರ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೈನಿಕರೊಬ್ಬರು ಮೃತಪಟ್ಟ ಮೊದಲ ಪ್ರಕರಣ ಇದು. 

ಗುರುವಾರ ವರದಿಯಾದ ಎರಡೂ ಸಾವಿನ ಪ್ರಕರಣಗಳನ್ನು ಜಿಲ್ಲಾಡಳಿತವು ಕೋವಿಡ್‌ಯೇತರ ಕಾರಣದಿಂದ ಮೃತಪಟ್ಟವರ ಪಟ್ಟಿಗೆ ಸೇರಿಸಿದೆ. 

56 ವರ್ಷದ ಎಎಸ್ಐ ಅವರು (ರೋಗಿಸಂಖ್ಯೆ 1,35,728) ಜುಲೈ 30ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. 15 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಟೈಫಾಯ್ಡ್‌ನಿಂದಲೂ ಬಳಲುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸ್ವಲ್ಪ ಚೇತರಿಸಿದ್ದರು. ಗುರುವಾರ ಮೃತಪಟ್ಟಿದ್ದಾರೆ. 

ಸರ್ಕಾರದ ಶಿಷ್ಟಾಚಾರದಂತೆ ಅವರ ಸ್ವಗ್ರಾಮ, ಗುಂಡ್ಲುಪೇಟೆ ತಾಲ್ಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆದಿದೆ.

‌ಮೃತಪಟ್ಟ ಇನ್ನೊಬ್ಬರು ಹನೂರು ತಾಲ್ಲೂಕಿನ ಎಲ್ಲೇಮಾಳದ 64 ವರ್ಷದ ಮಹಿಳೆ (ರೋಗಿ ಸಂಖ್ಯೆ–2,06,844). ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಇವರು, ಕೋಮಾದಲ್ಲಿದ್ದರು. ಬುಧವಾರ ಮನೆಯಲ್ಲಿ ಮೃತಪಟ್ಟಿದ್ದಾರೆ. ನಂತರ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕೋವಿಡ್‌ ಇರುವುದು ದೃಢಪಟ್ಟಿದೆ.

ಈ ಎರಡು ಸಾವಿನ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಮೃತಪಟ್ಟ ಕೋವಿಡ್‌ ಸೋಂಕಿತರ ಸಂಖ್ಯೆ 28ಕ್ಕೆ ಏರಿದೆ. 

ಜಿಲ್ಲಾಡಳಿತದ ಅಂಕಿ ಅಂಶಗಳ ಪ್ರಕಾರ, ಕೋವಿಡ್‌ ಕಾರಣದಿಂದ 17 ಜನರು ಮೃತಪಟ್ಟಿದ್ದರೆ, ಸೋಂಕು ಖಚಿತವಾಗಿದ್ದರೂ ಬೇರೆ ಅನಾರೋಗ್ಯದಿಂದಾಗಿ 11 ಮಂದಿ ಪ್ರಾಣಕಳೆದುಕೊಂಡಿದ್ದಾರೆ. 

60 ಹೊಸ ಪ್ರಕರಣ: ಜಿಲ್ಲೆಯಲ್ಲಿ ಗುರುವಾರ 60 ಮಂದಿಯಲ್ಲಿ ಕೋವಿಡ್‌–19 ದೃಢಪಟ್ಟಿದೆ. 54 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 1,432ಕ್ಕೆ, ಗುಣಮುಖರಾದವರ ಸಂಖ್ಯೆ 979ಕ್ಕೆ ಏರಿಕೆಯಾಗಿದೆ.

425 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಗುರುವಾರ ಇಬ್ಬರು ಸೇರಿದಂತೆ ಒಟ್ಟು 114 ಮಂದಿ ಹೋಂ ಐಸೊಲೇಷನ್‌ನಲ್ಲಿ ಇದ್ದಾರೆ. 22 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಗುರುವಾರ 588 ಮಂದಿಯ ಗಂಟಲು ದ್ರವದ ಮಾದರಿ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 577 ಪರೀಕ್ಷೆಗಳನ್ನು ಆರ್‌ಟಿಪಿಸಿಆರ್ ಹಾಗೂ 11 ಟ್ರು ನಾಟ್‌ ಪರೀಕ್ಷೆ ನಡೆಸಲಾಗಿದೆ. 528 ಮಂದಿಯ ವರದಿ ನೆಗೆಟಿವ್‌ ಬಂದಿದೆ. 

ದೃಢಪಟ್ಟ 60 ಪ್ರಕರಣಗಳ ಪೈಕಿ, ಚಾಮರಾಜನಗರ ತಾಲ್ಲೂಕಿನಲ್ಲಿ 22, ಗುಂಡ್ಲುಪೇಟೆ 14, ಕೊಳ್ಳೇಗಾಲ ಮತ್ತು ಹನೂರು ತಾಲ್ಲೂಕುಗಳಲ್ಲಿ ತಲಾ 11, ಯಳಂದೂರು ತಾಲ್ಲೂಕಿನಲ್ಲಿ ಒಂದು ಪ್ರಕರಣ ವರದಿಯಾಗಿವೆ. ಸೋಂಕಿತರದಲ್ಲಿ ಹೊರ ಜಿಲ್ಲೆಯ ಇಬ್ಬರಿದ್ದಾರೆ.

ಗುಣಮುಖರಾದ 54 ಜನರ ಪೈಕಿ ಚಾಮರಾಜನಗರ ತಾಲ್ಲೂಕಿನ 22, ಗುಂಡ್ಲುಪೇಟೆಯ 14, ಯಳಂದೂರು ತಾಲ್ಲೂಕಿನ ಒಂಬತ್ತು, ಕೊಳ್ಳೇಹಾಲದ ಎಂಟು ಹಾಗೂ ಹನೂರು ತಾಲ್ಲೂಕಿನ ಒಬ್ಬರು ಇದ್ದಾರೆ.

ಚಾಮರಾಜನಗರದಲ್ಲಿ ಹೆಚ್ಚು ಸಕ್ರಿಯ ಪ್ರಕರಣ 

ಜಿಲ್ಲೆಯಲ್ಲಿರುವ 425 ಸಕ್ರಿಯ ಪ್ರಕರಣಗಳ ಪೈಕಿ ಚಾಮರಾಜನಗರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 129 ಪ್ರಕರಣಗಳು ಇವೆ. 122 ಪ್ರಕರಣಗಳು ಕೊಳ್ಳೇಗಾಲದಲ್ಲಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 83, ಯಳಂದೂರು 51, ಹನೂರು ತಾಲ್ಲೂಕಿನಲ್ಲಿ 38 ಸಕ್ರಿಯ ಪ್ರಕರಣಗಳಿವೆ. ಇನ್ನೆರಡು ಪ್ರಕರಣಗಳು ಹೊರ ಜಿಲ್ಲೆಯದ್ದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು