ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ನಶೆ ಏರಿಸಿಕೊಂಡ ಇಲಿಗಳು!

Last Updated 7 ಏಪ್ರಿಲ್ 2020, 16:00 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಲಾಕ್‌ಡೌನ್‌ ಅವಧಿಯಲ್ಲಿ ಮದ್ಯಪ್ರಿಯರಷ್ಟೇ ಮದ್ಯದಂಗಡಿಗಳಿಗೆ ಕನ್ನ ಹಾಕುತ್ತಿಲ್ಲ; ಮದ್ಯದ ರುಚಿ ಕಂಡ ಇಲಿಗಳೂ ಮದ್ಯದ ಪೌಚ್‌ಗಳಿಗೆ ಬಾಯಿ ಹಾಕುತ್ತಿವೆ!

ಹೌದು. ಕೊಳ್ಳೇಗಾಲದ ಮದ್ಯದಂಗಡಿಯೊಂದರಲ್ಲಿ ಇಲಿಗಳು ಮದ್ಯದ ನೂರಾರು ಪೌಚ್‌ಗಳನ್ನು ಹರಿದುಹಾಕಿವೆ. ಅಂಗಡಿಯ ಮುಚ್ಚಿದ ಬಾಗಿಲಿನ ಸಂದಿಯಿಂದ ಮದ್ಯ ಹರಿದುಬಂದಿದ್ದರಿಂದ ವಿಷಯ ಬೆಳಕಿಗೆ ಬಂದಿದೆ!

ಕೋವಿಡ್‌–19 ಆತಂಕದಿಂದಾಗಿ, ಮದ್ಯಮಾರಾಟಕ್ಕೆ ನಿಷೇಧ ಇರುವುದರಿಂದ ಮದ್ಯದಂಗಡಿಗಳು ಬಾಗಿಲು ಹಾಕಿವೆ. ನಗರದ ‘ಸುರೇಶ್‌ ವೈ‌ನ್ಸ್‌’ ಕೂಡ 14 ದಿನಗಳಿಂದ ಮುಚ್ಚಿದೆ. ಹಾಗಾಗಿ, ಮಾಲೀಕರು ಕೂಡ ಅಂಗಡಿಯತ್ತ ಸುಳಿದಿರಲಿಲ್ಲ.

ಮಂಗಳವಾರ ಅಂಗಡಿಯತ್ತ ಹೋದ ಅವರಿಗೆ ಆಘಾತ ಕಾದಿತ್ತು. ಮುಚ್ಚಿದ ಬಾಗಿಲು ಮುಚ್ಚಿದಂತೆಯೇ ಇದ್ದು, ಮದ್ಯ ಹರಿದು ಬರುತ್ತಿತ್ತು. ಇದನ್ನು ಕಂಡು ಗಾಬರಿಯಾದ ಅವರು, ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಭೇಟಿ ನೀಡಿದ ಅಬಕಾರಿ ಉಪ ನಿರೀಕ್ಷಕಿ ಮೀನಾ, ಸೀಲ್‌ ಹಾಕಿದ ಬಾಗಿಲನ್ನು ತೆರೆಸಿದಾಗ, ಇಲಿಗಳ ಕರಾಮತ್ತು ಬಯಲಾಗಿದೆ. ಉಳಿದ ಪೌಚ್‌ಗಳನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಹಾಕಿ ಬೀಗ ಹಾಕಲಾಯಿತು.

ಲಾಕ್‌ಡೌನ್‌ ಅವಧಿ ಮುಗಿಯಲು ಇನ್ನೂ 8 ದಿನಗಳಿರುವಾಗಲೇ ಮದ್ಯದಂಗಡಿ ತೆರೆದಿರುವುದನ್ನು ಕಂಡು ಮದ್ಯ ಪ್ರಿಯರು ಅಂಗಡಿ ಎದುರು ಜಮಾಯಿಸಿದರು. ಇದನ್ನು ಗಮನಿಸಿದ ಪೊಲೀಸರು, ನಡೆದ ವಿಷಯವನ್ನು ಅವರಿಗೆ ತಿಳಿಸಿ, ಅಲ್ಲಿಂದ ಸಾಗಹಾಕಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT