ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ ರಸ್ತೆ ಕಾಮಗಾರಿ: ಪರಿಹಾರಕ್ಕೆ ₹3.34 ಕೋಟಿ

ರಸ್ತೆಗಾಗಿ ಮನೆ ತೆರವುಗೊಳಿಸಲು 9 ಮನೆಗಳ ಮಾಲೀಕರ ಒಪ್ಪಿಗೆ
Last Updated 6 ಅಕ್ಟೋಬರ್ 2020, 14:17 IST
ಅಕ್ಷರ ಗಾತ್ರ

ಚಾಮರಾಜನಗರ: ಎರಡೂವರೆ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಗರದ ನ್ಯಾಯಾಲಯ ರಸ್ತೆಯ ಅಭಿವೃದ್ಧಿ ಕಾಮಗಾರಿ ಕೆಲವು ದಿನಗಳ ಹಿಂದೆ ಆರಂಭವಾಗಿದ್ದು, ಒಂಬತ್ತು ಮನೆಗಳ ಮಾಲೀಕರು ರಸ್ತೆ ಅಭಿವೃದ್ಧಿಗಾಗಿ ತಮ್ಮ ಮನೆಗಳನ್ನು ತೆರವುಗೊಳಿಸಲು ಒಪ್ಪಿಗೆ ನೀಡಿದ್ದಾರೆ.

9 ಮನೆಗಳಿರುವ ನಿವೇಶನ ಸೇರಿದಂತೆ 23 ಜನರಿಗೆ ಸೇರಿದ ಜಮೀನುಗಳನ್ನು ಸ್ವಾಧೀನ ಮಾಡಿಕೊಳ್ಳಬೇಕಾಗಿದ್ದು, ಅವರಿಗೆ ಪರಿಹಾರ ನೀಡಲು ನಗರಸಭೆ ₹3.34 ಕೋಟಿ ವೆಚ್ಚ ಮಾಡಬೇಕಾಗಿದೆ.

ನಗರೋತ್ಥಾನ ಯೋಜನೆಯ ಅಡಿಯಲ್ಲಿ ಲೋಕೋಪಯೋಗಿ ಇಲಾಖೆಯು ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಡಿವೈಎಸ್‌ಪಿ ಕಚೇರಿಯಿಂದ ನ್ಯಾಯಾ‌ಲಯದ ಎದುರಾಗಿ ಹಾದು ಹೋಗಿ ಸತ್ಯಮಂಗಲ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ₹8 ಕೋಟಿ ವೆಚ್ಚದಲ್ಲಿ 60 ಅಡಿಯ ಕಾಂಕ್ರೀಟ್‌ ರಸ್ತೆಯನ್ನಾಗಿ ಮಾಡುವಕಾಮಗಾರಿಕೈಗೊಂಡಿತ್ತು.

ಡಿವೈಎಸ್‌ಪಿ ಕಚೇರಿಯಿಂದ ಜಿಲ್ಲಾ ಕಾರಾಗೃಹದವರೆಗೆ ಒಂದು ಕಿ.ಮೀ ಮತ್ತು ಸತ್ಯಮಂಗಲ ರಸ್ತೆಯಿಂದ (ಪ್ರವಾಸಿ ಮಂದಿರದ ಎದುರಿನಿಂದ) ಅಂಬೇಡ್ಕರ್‌ ಭವನದವರೆಗೆ ಈಗಾಗಲೇ 60 ಅಡಿಗಳ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದೆ. ಕಾರಾಗೃಹದಿಂದ ಅಂಬೇಡ್ಕರ್‌ ಭವನದವರೆಗೆ ರಸ್ತೆ ನಿರ್ಮಿಸುವುದು ಬಾಕಿ ಇತ್ತು. ಈಗ ಆಗಿರುವ ಕಾಮಗಾರಿಗೆ₹8 ಕೋಟಿ ವೆಚ್ಚವಾಗಿದೆ.

ಭೂಸ್ವಾಧೀನ ವಿಚಾರವಾಗಿ ಸಮಸ್ಯೆ ಇದ್ದುದರಿಂದ ರಸ್ತೆ ಕಾಮಗಾರಿ ಪೂರ್ಣವಾಗಿರಲಿಲ್ಲ.ಯೋಜನೆಗೆ ಹೆಚ್ಚುವರಿ ಅನುದಾನ ಬೇಕಾಗಿದ್ದರಿಂದಲೂ ಕಾಮಗಾರಿ ವಿಳಂಬವಾಗಿತ್ತು.

‘ಬಾಕಿ ಉಳಿದಿರುವ ಕಾಮಗಾರಿ ನಡೆಸಲು 23 ಮಂದಿಗೆ ಸೇರಿದ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ. ಈ ಪೈಕಿ ಒಂಬತ್ತು ಮನೆಗಳಿವೆ. ಎಲ್ಲ ಮನೆ ಮಾಲೀಕರು ತೆರವಿಗೆ ಲಿಖಿತವಾಗಿ ಒಪ್ಪಿಗೆ ನೀಡಿದ್ದಾರೆ. ಜಮೀನು ಹಾಗೂ ಮನೆಗಳ ಮಾಲೀಕರಿಗೆ ಪರಿಹಾರ ನೀಡುವುದಕ್ಕಾಗಿ ₹3.34 ಕೋಟಿ ವೆಚ್ಚವಾಗಲಿದೆ’ ಎಂದು ನಗರಸಭೆ ಆಯುಕ್ತ ಎಂ.ರಾಜಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಳಿದ ರಸ್ತೆ ಕಾಮಗಾರಿಗಾಗಿ ಹೆಚ್ಚುವರಿ ₹3.5 ಕೋಟಿ ಅನುದಾನ ಬಿಡುಗಡೆಯಾಗಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದೆ. ಇದರಲ್ಲಿ ಚರಂಡಿ ನಿರ್ಮಾಣಕ್ಕೆ ಅವಕಾಶ ಇಲ್ಲದಿರುವುದರಿಂದ ಅದಕ್ಕಾಗಿ ನಗರಸಭೆಯು ಪ್ರತ್ಯೇಕ ಯೋಜನೆ ರೂಪಿಸಲಾಗಿದೆ. ಅದಕ್ಕೆ ₹1.80 ಕೋಟಿ ವೆಚ್ಚವಾಗಲಿದೆ. ಟೆಂಡರ್‌ ಆಗಿದೆ’ ಎಂದು ಅವರು ಮಾಹಿತಿ ನೀಡಿದರು.

ಹಿಗ್ಗಿದ ಯೋಜನಾ ವೆಚ್ಚ

ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗೆ ₹8 ಕೋಟಿ ವೆಚ್ಚವಾಗಿದೆ.ಬಾಕಿ ಉಳಿದ ಕಾಮಗಾರಿಗಾಗಿ, ನಗರೋತ್ಥಾನ ಯೋಜನೆ ಅಡಿಯಲ್ಲಿ ಹೆಚ್ಚುವರಿ ₹3.5 ಕೋಟಿ ಅನುದಾನ ಬಿಡುಗಡೆಯಾಗಿದೆ. ಜಮೀನು ಮಾಲೀಕರಿಗೆ ಪರಿಹಾರ ನೀಡುವುದಕ್ಕೆ ₹3.34 ಕೋಟಿ ಅಗತ್ಯವಿದೆ. ಇದಲ್ಲದೇ, ಕಾಂಕ್ರೀಟ್‌ ಚರಂಡಿ ನಿರ್ಮಾಣಕ್ಕಾಗಿ ನಗರಸಭೆ ಪ್ರತ್ಯೇಕವಾಗಿ ₹1.80 ಕೋಟಿ ವೆಚ್ಚವನ್ನೂ ಮಾಡುತ್ತಿದೆ. ಹಾಗಾಗಿ, ಡಿವೈಎಸ್‌ಪಿ ಕಚೇರಿಯಿಂದ ಸತ್ಯಮಂಗಲ ರಸ್ತೆಯವರೆಗೆ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಒಟ್ಟು ₹16.64 ಕೋಟಿ ವೆಚ್ಚ ಮಾಡಿದಂತಾಗುತ್ತದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT