ಶುಕ್ರವಾರ, ಮೇ 27, 2022
28 °C

ಚಾಮರಾಜನಗರ: ಪ್ರತಿ ದಿನ 2000 ಪರೀಕ್ಷೆ ನಡೆಸಲು ಸುರೇಶ್‌ ಕುಮಾರ್‌ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಜಿಲ್ಲೆಯಲ್ಲಿ ನಡೆಸುತ್ತಿರುವ ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸಬೇಕು. ಪ್ರತಿ ದಿನ 2000ದವರೆಗೆ ಪರೀಕ್ಷೆ ನಡೆಸಲು ಗುರಿ ನಿಗದಿ ಪಡಿಸಿಕೊಳ್ಳಬೇಕು. ಆಯಾ ಭಾಗದಲ್ಲೇ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರು ಶುಕ್ರವಾರ ಅಧಿಕಾರಿಗಳಿಗೆ ಸೂಚಿಸಿದರು. 

ಗೂಗಲ್‌ ಮೀಟ್‌ ಮೂಲಕ ನಡೆದ ಜಿಲ್ಲಾ ಮಟ್ಟದ ಕೋವಿಡ್‌ ಟಾಸ್ಕ್‌ ಫೋರ್ಸ್‌ ಸಭೆಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಲಸಿಕೆಯನ್ನು ಪ್ರತಿದಿನ ಹೆಚ್ಚು ಜನರಿಗೆ ನೀಡಬೇಕು. ಎಲ್ಲ ವರ್ಗದ ಪ್ರದೇಶಗಳ ಜನತೆ ಲಸಿಕೆ ಪಡೆಯಲು ವ್ಯವಸ್ಥೆಗಳನ್ನು ಕಲ್ಪಿಸಬೇಕು. ಗಿರಿಜನರ ಹಾಡಿಗಳು, ಆದ್ಯತಾ ವಲಯಗಳು, ವಿಶೇಷ ಗುಂಪಿನ ಫಲಾನುಭವಿಗಳು ಸೇರಿದಂತೆ ಎಲ್ಲ ನಾಗರಿಕರು ಕೋವಿಡ್ ಲಸಿಕೆ ಪಡೆದುಕೊಳ್ಳಲು ಅನುಕೂಲವಾಗಬೇಕು’ ಎಂದರು. 

ಸಭೆಯಲ್ಲಿ ಮಾತನಾಡಿದ ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್, ಸಿ.ಎಸ್.ನಿರಂಜನ್ ಕುಮಾರ್ ಅವರು, ‘ಕೋವಿಡ್ ಪರೀಕ್ಷೆ ಸಂಖ್ಯೆಯ ಗುರಿಯನ್ನು ಹೆಚ್ಚಳ ಮಾಡಬೇಕಿದೆ. ಇದರಿಂದ ಸೋಂಕು ಹರಡದಂತೆ ತಡೆಯಲು ಸಾಧ್ಯವಾಗಲಿದೆ. ಸೋಂಕು ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಇನ್ನಷ್ಟು ಸಕ್ರಿಯವಾಗಿ ಕಾರ್ಯಗಳು ನಡೆಯಬೇಕಿದೆ. ಕೋವಿಡ್ ಲಸಿಕೆ ನೀಡುವುದನ್ನು ಹೆಚ್ಚಳ ಮಾಡಬೇಕಿದೆ. ಗಿರಿಜನರ ಪ್ರದೇಶಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಒತ್ತು ನೀಡಬೇಕಾಗಿದೆ’ ಎಂದು ಹೇಳಿದರು. 

ಸಚಿವರು ಪ್ರತಿಕ್ರಿಯಿಸಿ, ‘ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣವನ್ನು ತಗ್ಗಿಸುವ ದಿಸೆಯಲ್ಲಿ ಮತ್ತಷ್ಟು ಸುಧಾರಣಾ ಕಾರ್ಯ ಯೋಜನೆ ಮಾಡಬೇಕು. ಪ್ರತೀ ತಾಲ್ಲೂಕಿನಲ್ಲಿ ಅತಿ ಹೆಚ್ಚು ಸೋಂಕು ಕಂಡು ಬಂದಿರುವ ಗ್ರಾಮಗಳನ್ನು ಗುರುತಿಸಿ ಅಲ್ಲಿ ಸೋಂಕು ಹೆಚ್ಚಾಗಲು ಇರುವ ಕಾರಣಗಳನ್ನು ಪತ್ತೆ ಮಾಡಬೇಕು. ಕೊರೊನಾ ನಿಯಂತ್ರಣ ಏಕೆ ಸಾಧ್ಯವಾಗಿಲ್ಲ ಎಂಬ ಬಗ್ಗೆ ಆಳವಾಗಿ ತಿಳಿದುಕೊಳ್ಳುವ ಕೆಲಸ ಕೈಗೊಂಡು ತುರ್ತಾಗಿ ಸೋಂಕು ತಡೆಗೆ ಕ್ರಮವಹಿಸಬೇಕು’ ಎಂದರು. 

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್‌ರಾಜ್, ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬದೋಲೆ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ. ರವಿ, ಜಿಲ್ಲಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಂಜೀವ್, ನೋಡೆಲ್ ಅಧಿಕಾರಿಗಳಾದ ಮಲೆಮಹದೇಶ್ವರ ವನ್ಯ ಜೀವಿ ವಿಭಾಗದ ಉಪಸಂರಕ್ಷಣಾಧಿಕಾರಿ ಏಡುಕೊಂಡಲು, ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೆಶಕ ಡಾ. ಸಂತೋಷ್‌ ಕುಮಾರ್, ಜಿಲ್ಲಾಸ್ಪತ್ರೆಯ ನೋಡಲ್ ಅಧಿಕಾರಿ ಡಾ.ಮಹೇಶ್ ಇತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು