ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಹಾಕುವ ತಾಲೀಮು ಯಶಸ್ವಿ

Last Updated 8 ಜನವರಿ 2021, 14:40 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌–19 ಲಸಿಕೆಯನ್ನು ಮೊದಲ ಹಂತದಲ್ಲಿ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ನೀಡುವುದಕ್ಕೂ ಪೂರ್ವಭಾವಿಯಾಗಿ ಶುಕ್ರವಾರ ಜಿಲ್ಲೆಯಲ್ಲಿ ಲಸಿಕೆ ನೀಡುವ ತಾಲೀಮು ನಡೆಯಿತು.

ಚಾಮರಾಜನಗರದ ಜಿಲ್ಲಾಸ್ಪತ್ರೆ, ಜೆಎಸ್‌ಎಸ್‌ ಆಸ್ಪತ್ರೆ, ಗುಂಡ್ಲುಪೇಟೆಯ ತಾಲ್ಲೂಕು ಆಸ್ಪತ್ರೆ ಹಾಗೂ ಹನೂರು ತಾಲ್ಲೂಕಿನ ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾಲೀಮು ನಡೆಯಿತು. ಒಂದು ಕೇಂದ್ರದಲ್ಲಿ ತಲಾ 25 ಮಂದಿಯಂತೆ ಒಟ್ಟು 100 ಮಂದಿ ಆರೋಗ್ಯ ಕಾರ್ಯಕರ್ತರು ತಾಲೀಮಿನಲ್ಲಿ ಭಾಗಿಯಾದರು. ಲಸಿಕೆ ನೀಡಲು ತರಬೇತಿ ಪಡೆದ ಸಿಬ್ಬಂದಿಯೇ ಲಸಿಕೆ ನೀಡುವ ಪ್ರಾತ್ಯಕ್ಷಿಕೆ ತೋರಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ನಡೆದ ತಾಲೀಮನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ, ಉಪಾಧ್ಯಕ್ಷೆ ಶಶಿಕಲಾ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ವೀಕ್ಷಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂ.ಸಿ.ರವಿ, ತಜ್ಞ ವೈದ್ಯ ಡಾ.ರಮೇಶ್‌, ಲಸಿಕಾ ಅಧಿಕಾರಿ ಡಾ.ವಿಶ್ವೇಶ್ವರಯ್ಯ ಅವರು ಲಸಿಕೆ ನೀಡುವುದು ಹಾಗೂ ಅದಕ್ಕೆ ಅನುಸರಿಸಲಾಗುವ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ದೇಶದಾದ್ಯಂತ ಕೋವಿಡ್ ಲಸಿಕೆ ನೀಡುವ ತಾಲೀಮು ನಡೆಸಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಜಿಲ್ಲೆಯಲ್ಲೂ ನಡೆಸಲಾಗುತ್ತಿದೆ. ಲಸಿಕೆ ನೀಡುವ ಎಲ್ಲ ಹಂತಗಳನ್ನು ತಾಲೀಮಿನ ಮೂಲಕ ಪಾಲಿಸಲಾಗುತ್ತದೆ.ಇದರಲ್ಲಿರುವ ಲೋಪಗಳನ್ನು ಪತ್ತೆ ಹಚ್ಚಿ ಸರಿಪಡಿಸಲಾಗುತ್ತದೆ’ ಎಂದರು.

ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ 6,250 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಒಬ್ಬರಿಗೆ 0.1 ಮಿ.ಲೀನಷ್ಟು ಲಸಿಕೆ ನೀಡಲಾಗುತ್ತಿದೆ. ಈಗಾಗಲೇ ಲಸಿಕೆ ಹಾಕಲಿರುವ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ’ ಎಂದರು.

ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಇದ್ದರು.

ಹೀಗಿದೆ ಲಸಿಕೆ ನೀಡುವ ಪ್ರಕ್ರಿಯೆ

ಲಸಿಕೆ ಪಡೆಯಲಿರುವ ಆರೋಗ್ಯ ಕಾರ್ಯಕರ್ತರನ್ನು ಈಗಾಗಲೇ ಗುರುತಿಸಲಾಗಿದ್ದು, ಅವರ ಹೆಸರು ಹಾಗೂ ವಿವರಗಳನ್ನು ದಾಖಲು ಮಾಡಿಕೊಳ್ಳಲಾಗಿದೆ.

ಲಸಿಕೆ ಪಡೆಯುವವರು ಲಸಿಕೆ ನೀಡುವ ಕೇಂದ್ರಕ್ಕೆ ಹೋಗಿ, ನೋಂದಣಿ ಸ್ಥಳದಲ್ಲಿ ಆಧಾರ್‌ ನಂಬರ್‌ ನೀಡಬೇಕು. ತಕ್ಷಣ ಅವರ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅಲ್ಲಿಂದ ಅವರನ್ನು ನಿರೀಕ್ಷಣಾ ಕೊಠಡಿಗೆ ಕಳುಹಿಸಲಾಗುತ್ತದೆ. ಅಲ್ಲಿರುವ ಸಿಬ್ಬಂದಿ ಒಟಿಪಿ ಸಂಖ್ಯೆಯನ್ನು ಪಡೆಯುತ್ತಾರೆ. ಕೋ–ವಿನ್ ಸಾಫ್ಟ್‌ವೇರ್‌ನಲ್ಲಿ ಅವರ ಮಾಹಿತಿಗಳನ್ನು ದಾಖಲು ಮಾಡಲಾಗುತ್ತದೆ. ಅಲ್ಲಿಯೇ ಆರೋಗ್ಯ ತಪಾಸಣೆ ನಡೆಸಿ ನಂತರ ಲಸಿಕೆ ನೀಡುವ ಕೊಠಡಿಗೆ ಕಳುಹಿಸುತ್ತಾರೆ. ತರಬೇತಿ ಪಡೆದ ಸಿಬ್ಬಂದಿ 0.1 ಮಿ.ಲೀನಷ್ಟು ಲಸಿಕೆಯನ್ನು ಚುಚ್ಚುಮದ್ದಿನ ಮೂಲಕ ನೀಡುತ್ತಾರೆ. ಲಸಿಕೆ ಪಡೆದವರುನ್ನು ನಂತರ ನಿಗಾ ಘಟಕಕ್ಕೆ ಕಳುಹಿಸಿ, ಅರ್ಧ ಗಂಟೆ ಕಲಾ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತದೆ. ಏನಾದರೂ ವ್ಯತ್ಯಾಸ ಆದರೆ, ತಕ್ಷಣ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲದಿದ್ದರೆ, ನಿಗದಿತ ಸಮಯದ ಬಳಿಕ ಮನೆಗೆ ಕಳುಹಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT