ಶನಿವಾರ, ಮೇ 15, 2021
24 °C
ಯುಗಾದಿ ಹಬ್ಬ– ವಸಂತನ ಆಗಮನ: ಬಯಲು ಬನದಲ್ಲಿ ಚೈತ್ರ ಸಂಭ್ರಮ

ಕೋವಿಡ್‌ ನಡುವೆ ಕಳೆಗುಂದಿದ ಹಬ್ಬದ ಸಂಭ್ರಮ

ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಕೋವಿಡ್‌ ಎರಡನೇ ಅಲೆಯ ಭೀತಿಯ ನಡುವೆಯೇ ಹೊಸ ಸಂವತ್ಸರ (ಪ್ಲವನಾಮ ಸಂವತ್ಸರ) ಸ್ವಾಗತಿಸುವ ಯುಗಾದಿ ಬಂದಿದೆ.

ಕಳೆದ ವರ್ಷವೂ ಲಾಕ್‌ಡೌನ್‌ ಕಾರಣಕ್ಕೆ ಯುಗಾದಿ ಸಂಭ್ರಮ ಮಸುಕಾಗಿತ್ತು. ಈ ಬಾರಿಯಾದರೂ ಸಂಭ್ರಮದಿಂದ ಆಚರಿಸುವ ಜನರ ಆಕಾಂಕ್ಷೆಗೆ ಮತ್ತೆ ಕೋವಿಡ್‌ ತಣ್ಣೀರು ಎರಚುವಂತೆ ಕಾಡುತ್ತಿದೆ. ವನ, ವೃಕ್ಷಗಳ ಹಸಿರ ಓಕುಳಿ ನಡುವೆ ಆಗಮಿಸುವ ವಸಂತ ಋತುವಿನ ಸ್ವಾಗತಕ್ಕೆ ಸದ್ದುಗದ್ಧಲ ಕಂಡುಬರುತ್ತಿಲ್ಲ.

ಜಿಲ್ಲೆಯಲ್ಲಿ ಕಳೆದ ವರ್ಷ ಕೋವಿಡ್ ಕಾರಣಕ್ಕೆ ಕೊಂಡೋತ್ಸವ ಜಾತ್ರೆಗಳು ನಡೆದಿಲ್ಲ. ಆದರೆ, ಈ ಬಾರಿ ಈ ಆಚರಣೆಗೆ ಧಕ್ಕೆಯಾಗಿಲ್ಲ. ಶಿವರಾತ್ರಿ ನಂತರ ಆರಂಭವಾಗುವ ಊರ ಹಬ್ಬಗಳು ಯುಗಾದಿಗೆ ಕೊನೆಯಾಗುತ್ತವೆ. ಜನರು ಶ್ರದ್ಧಾ ಭಕ್ತಿಯಿಂದ ಯುಗಾದಿ ಆಚರಿಸಿ ಹೊಸ ಸಂವತ್ಸರವನ್ನು ಬರಮಾಡಿಕೊಳ್ಳುತ್ತಾರೆ. 

ಮನೆಯ ಮುಂದೆ ರಂಗೂಲಿ ಇಟ್ಟು, ಮುಂದಿನ ಬಾಗಿಲಿಗೆ ತಳಿರು ತೋರಣಕಟ್ಟಿ, ಅಭ್ಯಂಜನ ಮಾಡಿ, ಬೇವು ಬೆಲ್ಲ ಹಂಚಿ ತಿಂದರೆ ಹಬ್ಬ ಕಳೆಗಟ್ಟಿದಂತೆಯೇ. 

ಸಾಂಪ್ರದಾಯಿಕ ಪೂಜೆ: ‘ಯುಗಾದಿಯಂದು ಪ್ರತಿಯೊಬ್ಬರೂ ಮನೆದೇವರ ಪೂಜೆ ನೆರವೇರಿಸುತ್ತಾರೆ. ಹೊಸ ಯುಗದ ಹೊಸ್ತಿಲಲ್ಲಿ ಪಂಚಾಂಗದ ಫಲಾಫಲಗಳನ್ನು ತಿಳಿಯುವ ಕುತೂಹಲ ಎಲ್ಲರಲ್ಲೂ ಇರುತ್ತದೆ. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣಕ್ಕೆ ಸರ್ಕಾರ ರೂಪಿಸಿರುವ ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯ. ಹಾಗಾಗಿ, ಈ ವರ್ಷವೂ ಹಿಂದೂ ಕ್ಯಾಲೆಂಡ್‌ನ ಹೊಸ ವರ್ಷಾರಂಭವನ್ನು ಸಾಂಪ್ರಾಯಿಕವಾಗಿ ಆಚರಿಸುವುದು ಅನಿವಾರ್ಯವಾಗಿದೆ’ ಎಂದು ಬಿಳಿಗಿರಿರಂಗನಬೆಟ್ಟದ ಅರ್ಚಕ ರವಿಕುಮಾರ್ ಅವರು ಹೇಳಿದರು. 

ತ್ರಿವೇಣಿ ಸಂಗಮಕ್ಕೆ ಹೋಗಲಾಗುತ್ತಿಲ್ಲ: ಗ್ರಾಮೀಣ ಭಾಗದಲ್ಲಿ ಯುಗಾದಿ ದಿನ ಹೊನ್ನೇರು ಕಟ್ಟುವ ಸಂಪ್ರದಾಯವಿದೆ. ಜೋಡೆತ್ತುಗಳಿಗೆ ವಿಶೇಷ ಅಲಂಕಾರ ಮಾಡಿ ಹೊಲದಲ್ಲಿ ಒಂದು ಸುತ್ತು ಉಳುಮೆ ಮಾಡುತ್ತಾರೆ. ಗೋಸಂಪಿಗೆ, ಅಕ್ಕಿ, ಬೆಲ್ಲದ ನೈವೇಧ್ಯ ಇಟ್ಟು, ವರ್ಷವಿಡಿ ದುಡಿದ ಜಾನುವಾರುಗಳನ್ನು ಪೂಜಿಸುತ್ತಾರೆ. ಎತ್ತಿಗೆ ಅಲಂಕಾರ, ನೇಗಿಲು, ನೊಗಕ್ಕೆ ಆರತಿ ಎತ್ತಿ, ಜೋಡೆತ್ತು ಕಟ್ಟಿ ಓಡಿಸುತ್ತಾರೆ. ಈ ಬಾರಿ ಅಂತಹ ಉತ್ಸಾಹ ಕಾಣಿಸುತ್ತಿಲ್ಲ. 

‘ಯುಗಾದಿ ದಿನ ಮುಂಜಾನೆ ತ್ರಿವೇಣಿ ಸಂಗಮಗಳಿಗೆ ತೆರಳಿ ನದಿಯಲ್ಲಿ ಮಿಂದು, ಅರ್ಚನೆ, ಬೇವು-ಬೆಲ್ಲದ ಮಿಶ್ರಣ ಸೇವಿಸಲಾಗುತ್ತಿತ್ತು. ಮನೆಯಲ್ಲಿ ಸುಮಂಗಲೆಯರು ಒಬ್ಬಟ್ಟಿನ ಊಟ ತಯಾರಿ ನಡೆಸುತ್ತಿದ್ದರು. ಮಕ್ಕಳು ಹೊಸ ವಸ್ತ್ರ ಧರಿಸಿ ಗುರು ಹಿರಿಯರಿಂದ ಆಶೀರ್ವಾದ
ಪಡೆಯುತ್ತಿದ್ದರು. ಜನ ದಟ್ಟಣೆಗೆ ನಿಯಂತ್ರಣ ಹೇರಿರುವುದರಿಂದ ಗ್ರಾಮಗಳಲ್ಲಿ ಕಂಡಾಯ ಮೆರವಣಿಗೆ ನಿಂತಿದೆ. ದೇವಾಲಯಕ್ಕೆ ಮನೆಮಂದಿ ಒಟ್ಟಾಗಿ ಹೋಗುವುದಕ್ಕೆ ತೆರೆಬಿದ್ದಿದೆ’ ಎಂದು ಮಾಂಬಳ್ಳಿ ಮೂರ್ತಿ ಹೇಳುತ್ತಾರೆ.

ಚಾಂದ್ರಮಾನ, ಸೌರಮಾನ ಯುಗಾದಿ ವಿಶೇಷ

ಚಾಂದ್ರಮಾನ ಯುಗಾದಿಯನ್ನು ಚೈತ್ರ ಶುದ್ಧ ಪಾಡ್ಯದಂದು ಆಚರಿಸುತ್ತಾರೆ. ಹಿಂದೂ ಪಂಚಾಂಗ ಪದ್ಧತಿಯಂತೆ ಹೊಸ ವರ್ಷದ ಆರಂಭ. ನವ ವಸಂತದ ಗಾಳಿ ಬೀಸುತ್ತಲೇ ಪ್ರಕೃತಿಯ ಫಲ, ಚಿಗುರಿನ ತಂತುಗಳು ಮನೆ-ಮನ ತುಂಬಿಕೊಳ್ಳುತ್ತದೆ.

ಸೌರಮಾನದಲ್ಲಿ ಮೇಷ ಅಥವಾ ಚಿತ್ತಿರೈ ಯುಗಾದಿಯ ಮೊದಲ ದಿನ. ಸಾಮಾನ್ಯವಾಗಿ ಏಪ್ರಿಲ್ 14ರಂದು ಬರುತ್ತದೆ. ಶಾಲಿವಾಹನ ದೊರೆ ಅಭಿಷಿಕ್ತನಾದ ದಿನವೆಂದು ಕರೆಯಲಾಗಿದೆ. ಮನೆಯ ಅಧಿದೇವತೆಯ ಪೂಜೆ, ನವ ವಸ್ತ್ರಧಾರಣೆ, ಪಂಚಾಂಗ ಶ್ರವಣ, ದಾನ ಈ ದಿನದ ವಿಶೇಷತೆಗಳು. ಈ ದಿನವು ಬದುಕಿನಲ್ಲಿ ಅನಿವಾರ್ಯವಾಗಿ ಬರುವ ಸುಖ-ದಃಖಗಳ ಸಂಕೇತ. ಬೇವು ಬೆಲ್ಲ ಬದುಕನ್ನು ಸಮತೆ ಭಾವ
ಹೊಮ್ಮಿಸಿದರೆ, ಮಾವಿನ ಸವಿ ಸಮೃದ್ಧಿಯ ಸಾಂತ್ವನ ತುಂಬುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.