ಬುಧವಾರ, ಜೂನ್ 29, 2022
23 °C
ಜಿಲ್ಲೆಯ ಗ್ರಾಮಗಳಲ್ಲಿ ಹೆಚ್ಚಿದ ಕೀಳಾಗಿ ನೋಡುವ ಪ್ರವೃತ್ತಿ, ಕುಟುಂಬದವರಿಗೂ ಮಾನಸಿಕ ನೋವು

ಜನರ ವರ್ತನೆ; ಸೋಂಕಿತರ ಮನಸ್ಸು ಜರ್ಜರಿತ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ತಾಲ್ಲೂಕಿನ ಎಚ್‌.ಮೂಕಹಳ್ಳಿಯಲ್ಲಿ ರೈತ ಮಹಾದೇವಪ್ಪ ಹಾಗೂ ಪತ್ನಿ, ಇಬ್ಬರು ಮಕ್ಕಳು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿರುವುದಕ್ಕೆ ನಿಖರ ಕಾರಣ ಇನ್ನೂ ಬಹಿರಂಗವಾಗದಿದ್ದರೂ, ಕೋವಿಡ್‌ನಿಂದ ಬಳಲಿದ್ದ ಮಹಾದೇವಪ್ಪ ಅವರು ಹಾಗೂ ಕುಟುಂಬದ ಸದಸ್ಯರೊಂದಿಗೆ ನೆರೆಹೊರೆಯವರು, ಗ್ರಾಮಸ್ಥರು ಮುಕ್ತವಾಗಿ ಬೆರೆಯುತ್ತಿರಲಿಲ್ಲ; ಇದರಿಂದ ಅವರು ಮಾನಸಿಕವಾಗಿ ನೊಂದಿದ್ದರು ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ. 

ಏಪ್ರಿಲ್‌ 30ರಂದು ತಾಲ್ಲೂಕಿನ ದೇಶೀಗೌಡನಪುರ ಗ್ರಾಮದಲ್ಲಿ ಕೋವಿಡ್‌ ದೃಢಪಟ್ಟ ಶಿವಮ್ಮ ವೃದ್ಧೆಯೊಬ್ಬರು ಮನೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಪತಿಗೂ ಸೋಂಕು ದೃಢಪಟ್ಟು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರು ಹೋಂ ಐಸೊಲೇಷನ್‌ನಲ್ಲಿದ್ದರು. ನೆರೆಹೊರೆಯವರ ವರ್ತನೆಯಿಂದ ಶಿವಮ್ಮ ಬೇಸರಗೊಂಡಿದ್ದರು ಎಂದು ಹೇಳಲಾಗಿತ್ತು. 

ಇವು ಎರಡು ಉದಾಹರಣೆಗಳಷ್ಟೇ. ಆದರೆ, ಜಿಲ್ಲೆಯಲ್ಲಿ ಬಹುತೇಕ ಗ್ರಾಮೀಣ ಭಾಗಗಳಲ್ಲಿ ಕೋವಿಡ್‌ ಸೋಂಕಿತರನ್ನು ಕೀಳಾಗಿ ಕಾಣುವ ಪ್ರವೃತ್ತಿ ಕಾಣಿಸುತ್ತಿದೆ. ಇದು ಸೋಂಕಿತರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಊರಿನ ಜನರು, ನೆಂಟರಿಷ್ಟರಿಗೆ ಅಂಜಿ ಕೋವಿಡ್‌ ರೋಗ ಲಕ್ಷಣವನ್ನು ಮುಚ್ಚಿಟ್ಟು ಜೀವಕ್ಕೆ ಕುತ್ತು ತರುತ್ತಿದ್ದಾರೆ. ಇದೇ ಕಾರಣಕ್ಕೆ ಹಲವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. 

ಜಾಗೃತಿ ಕೊರತೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕೋವಿಡ್‌ ಬಗ್ಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದರೂ ಅದು ಜನರಿಗೆ ಸಂಪೂರ್ಣವಾಗಿ ತಲುಪಿದಂತೆ ಕಾಣುತ್ತಿಲ್ಲ. ಗ್ರಾಮೀಣ ಭಾಗಗಳಲ್ಲಿ ಕೋವಿಡ್‌ ದೃಢಪಟ್ಟವರನ್ನು ವಿಚಿತ್ರವಾಗಿ ಕಾಣಲಾಗುತ್ತಿದೆ. ಅವರ ಮನೆಯವರನ್ನೂ ದೂರ ಇಡಲಾಗುತ್ತಿದೆ. ಕೋವಿಡ್‌ ಬಗ್ಗೆ ಜನರಲ್ಲಿರುವ ಭಯ ಇದಕ್ಕೆ ಕಾರಣವಾಗಿರಬಹುದು. ಅದುವರೆಗೂ ಚೆನ್ನಾಗಿದ್ದ ಗ್ರಾಮಸ್ಥರು ಏಕಾಏಕಿ ದೂರವಾಗಿ ವಿಚಿತ್ರವಾಗಿ ವರ್ತಿಸಲು ಆರಂಭಿಸುವುದು ಸೋಂಕಿತರನ್ನು ಹಾಗೂ ಅವರ ಕುಟುಂಬದ ಸದಸ್ಯರನ್ನು ಮಾನಸಿಕವಾಗಿ ಕುಗ್ಗಿಸುತ್ತಿದೆ. 

ಹಲವು ಗ್ರಾಮಗಳಲ್ಲಿ ಸೋಂಕಿತರು ಊರಿನಲ್ಲಿ ಇರದೆ, ತಮ್ಮ ಜಮೀನುಗಳ ಶೆಡ್‌ಗಳಲ್ಲಿ ಅಥವಾ ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಿಕೊಂಡು ಅಲ್ಲಿ ಐಸೊಲೇಷನ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಾರೆ. ಸೋಂಕುಮುಕ್ತರಾದ ಬಳಿಕ ಊರಿಗೆ ತೆರಳುತ್ತಾರೆ. ಸೋಂಕು ಮುಕ್ತರಾಗಿ ಬಂದರೂ, ಜನರು, ಸಂಬಂಧಿಕರೊಂದಿಗೆ ಅವರೊಂದಿಗೆ ಮುಕ್ತವಾಗಿ ಬೆರೆಯುತ್ತಿಲ್ಲ. ಕೆಲವರು ಇದನ್ನು ಹಗುರವಾಗಿ ತೆಗೆದುಕೊಂಡರೆ, ಇನ್ನೂ ಕೆಲವರು ಗಂಭೀರವಾಗಿ ಪರಿಗಣಿಸಿ ಮಾನಸಿಕವಾಗಿ ದುಃಖ ಅನುಭವಿಸುತ್ತಿದ್ದಾರೆ. 

ಸಹಾಯಕ್ಕೆ ಯಾರೂ ಬರುವುದಿಲ್ಲ: ‘ಕೋವಿಡ್‌ ದೃಢಪಟ್ಟ ತಕ್ಷಣ ನೆರೆಹೊರೆಯವರು ಪಲಾಯನ ಮಾಡುವುದೇ ಹೆಚ್ಚು. ನನಗೆ ಪಾಸಿಟಿವ್ ಎಂದು ಗೊತ್ತಾದಾಗ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದೆ. ನನ್ನನ್ನು ಕೋವಿಡ್‌ ಸೆಂಟರ್ಗೆ ಕರೆದುಕೊಂಡು ಹೋಗಲು ಹೇಳಿದೆ. ಆದರೆ, ಈ ಮೊದಲೇ ನನಗೆ ಬಂದಿರುವುದನ್ನು ದೃಢಪಡಿಸಿಕೊಂಡ ಸ್ನೇಹಿತರು, ಸಂಬಂಧಿಗಳು ಮನೆಯತ್ತಲೂ ಬರಲಿಲ್ಲ. ನಾನೇ ನೇರವಾಗಿ ಆರೈಕೆ ಕೇಂದ್ರವನ್ನು ತಲುಪಿದೆ. ಈಗ ಚೇತರಿಸಿಕೊಂಡಿದ್ದೇನೆ’ ಎಂದು ಯಳಂದೂರಿನ ನಟರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಊರಿನವರು, ಸಂಬಂಧಿಕರು, ಸ್ನೇಹಿತರು ಧೈರ್ಯವಾಗಿ ಕೋವಿಡ್‌ ರೋಗಿಗಳ ಹತ್ತಿರ ಮಾತನಾಡಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಅವರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಬಾರದು. ಸೋಂಕಿತರನ್ನು ಕೀಳಾಗಿ ಕಾಣುವುದರಿಂದ ಅವರ ಕುಟುಂಬದರು ಮಾನಸಿಕವಾಗಿ ಜರ್ಜರಿತರಾಗುತ್ತಾರೆ’ ಎಂದು ಅವರು ಹೇಳಿದರು. 

ಗ್ರಾಮಗಳಲ್ಲಿ ನಿರಂತರ ಜಾಗೃತಿ: ಸಿಇಒ

ಈ ಸಮಸ್ಯೆ ನಗರ ಹಾಗೂ ಪಟ್ಟಣ ಪ್ರದೇಶಗಳನ್ನೂ ಬಿಟ್ಟಿಲ್ಲ. ಆದರೆ, ಗ್ರಾಮೀಣ ಪ್ರದೇಶಗಳಷ್ಟು ಇಲ್ಲ. ನಗರ ಪ್ರದೇಶದ ಕೆಲವು ಕಡೆಗಳಲ್ಲಿ ಸಹಾಯಕ್ಕೆ ಬರುವ ನೆರೆಹೊರೆಯವರು ಇದ್ದಾರೆ. ಸ್ನೇಹಿತರೂ, ಸಂಬಂಧಿಕರೂ ಇದ್ದಾರೆ. 

ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹರ್ಷಲ್‌ ಭೊಯರ್‌ ನಾರಾಯಣ ರಾವ್‌ ಅವರು, ‘ಕೋವಿಡ್‌ ಬಂದವರನ್ನು ಪ್ರತ್ಯೇಕವಾಗಿ ಕಾಣುತ್ತಿರುವುದು ಗಮನಕ್ಕೆ ಬಂದಿದೆ. ಜನರಲ್ಲಿರುವ ಭಯ ಇದಕ್ಕೆ ಕಾರಣ ಇರಬಹುದು. ಇದೇ ಕಾರಣಕ್ಕೆ ಗ್ರಾಮೀಣ ಜನರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ನಾವು ಈಗಾಗಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೂಲಕ ಜನರಲ್ಲಿ ತಿಳಿವಳಿಕೆ ನೀಡಲು ಕ್ರಮಗಳನ್ನು ಕೈಗೊಂಡಿದ್ದೇವೆ. ಕೋವಿಡ್‌ ಹರಡುವಿಕೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜನರಲ್ಲಿ ಪರೀಕ್ಷೆ ನಡೆಸುವ ಅಗತ್ಯದ ಬಗ್ಗೆಯೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು.  

––

ನಮ್ಮ ಕುಟುಂಬದ ಸದಸ್ಯರಿಗೆ ಕೋವಿಡ್‌ ಬಂದ ತಕ್ಷಣ, ಗ್ರಾಮದ ಜನರು ಯಾರೂ ನಮ್ಮ ಹತ್ತಿರ ಬರಲಿಲ್ಲ. ನಮ್ಮನ್ನು ಅಶೃಶ್ಯರಂತೆ ನೋಡುತ್ತಿದ್ದರು. ಇದರಿಂದ ನೋವಾಯಿತು
ರೂಪ, ಜಾಗೇರಿ ಗ್ರಾಮ, ಕೊಳ್ಳೇಗಾಲ

–––––––

ಕೆಲವು ಕಡೆಗಳಲ್ಲಿ ಇಂತಹ ಪ್ರವೃತ್ತಿ ಇರುವುದು ನಿಜ. ಕೋವಿಡ್‌ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸವನ್ನು ಗ್ರಾಮ ಪಂಚಾಯಿತಿ ಮೂಲಕ ಮಾಡುತ್ತೇವೆ
ಹರ್ಷಲ್‌ ಭೊಯರ್‌ ನಾರಾಯಣರಾವ್‌, ಜಿ.ಪಂ. ಸಿಇಒ

–––––––––

ನಮ್ಮ ಗ್ರಾಮದಲ್ಲೂ ಇಂತಹ ಬೆಳವಣಿಗೆ ನೋಡಿದ್ದೇನೆ. ಕಿರಿಕಿರಿ ಬೇಡ ಎಂದು ಹಲವು ಸೋಂಕಿತರು ತೋಟದ ಮನೆಗಳಲ್ಲಿ ಇದ್ದು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ
– ದೊರೆಸ್ವಾಮಿ, ಪುಣಜನೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು