ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗಳಲ್ಲಿ ಕೋವಿಡ್ ಪರೀಕ್ಷೆ ಆರಂಭ: ಮನೆ ಬಾಗಿಲಿಗೆ ಹೋಗಿ ತಪಾಸಣೆ

ತಡವಾಗಿ ಎಚ್ಚೆತ್ತ ಜಿಲ್ಲಾಡಳಿತ; ಹಳ್ಳಿಗರ ಮನೆ ಬಾಗಿಲಿಗೆ ತಪಾಸಣೆ
Last Updated 19 ಮೇ 2021, 4:14 IST
ಅಕ್ಷರ ಗಾತ್ರ

ಪ್ರಜಾವಾಣಿ ವರದಿ ಪರಿಣಾಮ

ಚಾಮರಾಜನಗರ: ಕೋವಿಡ್ ಪರೀಕ್ಷೆಯನ್ನು ಜಿಲ್ಲಾಡಳಿತ ಗ್ರಾಮೀಣರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ಕೆ ಕೈಹಾಕಿದೆ. ಇದರಿಂದ ವಾಹನ ಸೌಲಭ್ಯ ಇಲ್ಲದ ಗ್ರಾಮೀಣರ ಪರದಾಟ ಕೊನೆಗೂ ತಪ್ಪಿದಂತಾಗಿದೆ.

ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿರುವ ಕುದೇರು, ಅಮಚವಾಡಿ ಹಾಗೂ ಹರವೆ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಸೋಮವಾರ ಕೋವಿಡ್ ತಪಾಸಣೆ ಆರಂಭಿಸಿದೆ.

ಆಶಾ, ಅಂಗನವಾಡಿ ಹಾಗೂ ಆರೋಗ್ಯ ಇಲಾಖೆಯ ತಂಡವು ಇಲ್ಲಿಗೆ ಭೇಟಿ ನೀಡಿ, ಕೋವಿಡ್ ಲಕ್ಷಣ ಇರುವ ರೋಗಿಗಳ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ತೆಗೆದುಕೊಂಡರು.

ಇದುವರೆಗೂ ಗ್ರಾಮೀಣ ಜನರೇ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲವೇ ತಾಲ್ಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕಿತ್ತು. ಜಿಲ್ಲೆಯಲ್ಲಿ ಅಧಿಕೃತವಾಗಿಯೇ 40 ಸಾವಿರಕ್ಕೂ ಅಧಿಕ ಮಂದಿ ಕೂಲಿ ಕಾರ್ಮಿಕರಿದ್ದಾರೆ. ನೋಂದಣಿ ಮಾಡಿಸದ ಇನ್ನೂ ಸಾವಿರಾರು ಮಂದಿ ಕೂಲಿ ಮಾಡಿಯೇ ಬದುಕುತ್ತಿದ್ದಾರೆ. ಇವರ ಬಳಿ ದ್ವಿಚಕ್ರ ವಾಹನಗಳಿಲ್ಲ. ರೋಗ ಲಕ್ಷಣ ಕಾಣಿಸಿಕೊಂಡ ತಕ್ಷಣ ಇವರು ಆರೋಗ್ಯ ಕೇಂದ್ರಕ್ಕೆ ಹೋಗಲು ಬಸ್‌ ಹಾಗೂ ಖಾಸಗಿ ವಾಹನಗಳ ಸಂಚಾರವೂ ಲಾಕ್‌ಡೌನ್‌ನಿಂದ ಇಲ್ಲ. ಇದರಿಂದ ವಾಹನವುಳ್ಳವರ ನೆರವನ್ನು ಇವರು ಪಡೆಯಬೇಕಿತ್ತು.

ಅನೇಕ ಗ್ರಾಮಗಳಲ್ಲಿ ರೋಗ ಲಕ್ಷಣ ಕಾಣಿಸಿಕೊಂಡವರನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಲು ಜನರು ಹಿಂದೇಟು ಹಾಕಿದರು. ಇದರಿಂದ ರೋಗ ಲಕ್ಷಣಗಳು ಉಲ್ಬಣಗೊಂಡು ಆಂಬುಲೆನ್ಸ್‌ ಬರುವವರೆಗೂ ಇವರು ತಪಾಸಣೆಗೆ ಹೋಗುತ್ತಿರಲಿಲ್ಲ. ಇದರಿಂದ ಮರಣಪ್ರಮಾಣ ಹಾಗೂ ಹಳ್ಳಿಗಳಲ್ಲಿ ಸೋಂಕು ಹೆಚ್ಚಲು ಪ್ರಮುಖ ಕಾರಣವಾಗಿತ್ತು. ಇದೀಗ ಆರೋಗ್ಯ ಇಲಾಖೆ ಪ್ರಮುಖ ಗ್ರಾಮಗಳಿಗೆ ತೆರಳಿ ತಪಾಸಣೆ ಕಾರ್ಯ ಆರಂಭಿಸಿದೆ. ಸದ್ಯ, ಆರಂಭವಾಗಿರುವ ತಪಾಸಣೆ ಕಾರ್ಯವನ್ನು ಎಲ್ಲ ಗ್ರಾಮಗಳಿಗೆ ವಿಸ್ತರಿಸಲು ಒತ್ತಾಯ ಕೇಳಿ ಬಂದಿದೆ.

ಇದಲ್ಲದೇ ಜಿಲ್ಲೆಯಲ್ಲಿರುವ 50 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 3 ಸಮುದಾಯ ಆರೋಗ್ಯ ಕೇಂದ್ರಗಳು, 2 ನಗರ ಆರೋಗ್ಯ ಕೇಂದ್ರಗಳು, 3 ತಾಲ್ಲೂಕು ಆಸ್ಪತ್ರೆ ಮತ್ತು 1 ಜಿಲ್ಲಾಸ್ಪತ್ರೆಯಲ್ಲಿ ನಿತ್ಯ ಕೋವಿಡ್ ಪರೀಕ್ಷೆ ನಡೆಯುತ್ತಿದೆ.

ಮೇ 6ರಂದು ‘ಪ್ರಜಾವಾಣಿ’ ಕೋವಿಡ್ ಪರೀಕ್ಷೆಗೆ ತೆರಳಲು ಗ್ರಾಮೀಣ ಜನರ ಪರದಾಟದ ಕುರಿತು ವಿಶೇಷ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT