ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14‌ರವರೆಗೆ ಕೋವಿಡ್‌ ಲಸಿಕಾ ಮೇಳ

ಜಿಲ್ಲೆಯಲ್ಲಿ ಶೇ 86 ಮಂದಿಗೆ ಮೊದಲ ಡೋಸ್‌, ಶೇ 39ರಷ್ಟು ಮಂದಿಗೆ ಎರಡೂ ಡೋಸ್‌
Last Updated 11 ಅಕ್ಟೋಬರ್ 2021, 1:58 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಇನ್ನಷ್ಟು ತ್ವರಿತಗೊಳಿಸಲು ಇದೇ 14ರವರೆಗೆ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ನೇತೃತ್ವದಲ್ಲಿ ಗೂಗಲ್‌ ಮೀಟ್‌ ಮೂಲಕ ಭಾನುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಬಾಕಿ ಉಳಿದಿರುವ ಎಲ್ಲರೂ ತಪ್ಪದೇ ಲಸಿಕೆ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.

‘ಜಿಲ್ಲೆಯಲ್ಲಿ ಎರಡನೇ ಡೋಸ್ ಲಸಿಕೆಯನ್ನು ಇನ್ನೂ ಸಾಕಷ್ಟು ಮಂದಿ ಪಡೆದುಕೊಳ್ಳಬೇಕಿದೆ. ಇದುವರೆಗೆ ಮೊದಲನೇ ಡೋಸ್ ಲಸಿಕೆಯನ್ನು ಪಡೆಯದೇ ಇರುವವರು ಕೂಡ ಮೇಳದಲ್ಲಿ ಲಸಿಕೆ ಪಡೆಯಲು ಅವಕಾಶವಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ 86ರಷ್ಟು ಜನರು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಶೇ 39ರಷ್ಟು ಮಂದಿ ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಒಂದು ಲಕ್ಷ ಜನರು ಎರಡನೇ ಡೋಸ್ ಪಡೆಯುವುದು ಬಾಕಿ ಇದೆ. ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಮತ್ತು ಕೋವೀಶೀಲ್ಡ್ ಲಸಿಕೆ ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಇದೆ’ ಎಂದು ಜಿಲ್ಲಾಧಿಕಾರಿ ಅವರು ಹೇಳಿದ್ದಾರೆ.

ಪ್ರತಿ ತಾಲೂಕಿನಲ್ಲಿ ಕನಿಷ್ಠ 10 ಜನ ಸಿಬ್ಬಂದಿಯನ್ನು ನಿಯೋಜಿಸಿದ ಕಾಲ್ ಸೆಂಟರ್‌ಗಳನ್ನು ತೆರೆದು ಲಸಿಕೆ ಪಡೆಯಬೇಕಿರುವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ನೀಡಲು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಯಾವ ಗ್ರಾಮ, ವಾರ್ಡ್‌, ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಲಸಿಕೆ ಪಡೆಯಬೇಕಾದವರ ಸಂಖ್ಯೆ ಇನ್ನೂ ಹೆಚ್ಚು ಇದೆಯೋ ಅಂತಹ ಕಡೆ ವಿಶೇಷವಾಗಿ ಕೇಂದ್ರೀಕರಿಸಬೇಕು. ಮನೆಮನೆಗೆ ತೆರಳಿ ಇನ್ನೂ ಏಕೆ ಲಸಿಕೆ ಪಡೆದುಕೊಂಡಿಲ್ಲವೆಂಬ ಬಗ್ಗೆ ತಿಳಿದು ಮಾರ್ಗದರ್ಶನ ಮಾಡಿ ಲಸಿಕೆ ಹಾಕಿಸುವ ಕಾರ್ಯ ಪೂರ್ಣಗೊಳಿಸಬೇಕು’ ಎಂದು ಅವರು ಹೇಳಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಶ್ವೇಶ್ವರಯ್ಯ, ಆರ್.ಸಿ.ಎಚ್.ಅಧಿಕಾರಿ ಡಾ. ಅಂಕಪ್ಪ, ತಹಶೀಲ್ದಾರರಾದ ಚಿದಾನಂದ ಗುರುಸ್ವಾಮಿ, ಕೆ.ಕುನಾಲ್, ನಾಗರಾಜು, ರವಿಶಂಕರ್, ಜಯಪ್ರಕಾಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರೇಮ್‌ಕುಮಾರ್, ಶ್ರೀನಿವಾಸ್, ಮಹೇಶ್, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಗೋಪಾಲ್, ಡಾ.ಮಂಜುನಾಥ್, ಡಾ.ಪ್ರಕಾಶ್, ಡಾ.ರವಿಕುಮಾರ್ ಇತರೆ ವೈದ್ಯಾಧಿಕಾರಿಗಳು, ನೋಡೆಲ್ ಅಧಿಕಾರಿಗಳು ಸಭೆಯಲ್ಲಿದ್ದರು.

--

ಜನರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಉದಾಸೀನ, ತಾತ್ಸಾರ ತೋರದೆ ಹತ್ತಿರದ ಲಸಿಕಾ ಕೇಂದ್ರಕ್ಕೆ ತೆರಳಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು
ಡಾ.ಎಂ.ಆರ್.ರವಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT