ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರನ್ನು ತಾತ್ಸಾರದಿಂದ ಕಾಣಬೇಡಿ: ಕೊರೊನಾ ಜಯಿಸಿದ ಮಲ್ಲೇಶ್ ಮನವಿ

ಕೋವಿಡ್‌ ಗೆದ್ದವರ ಕಥೆಗಳು
Last Updated 2 ಆಗಸ್ಟ್ 2020, 14:19 IST
ಅಕ್ಷರ ಗಾತ್ರ

ಸಂತೇಮರಹಳ್ಳಿ:ಕೋವಿಡ್–19 ಮುಕ್ತರಾಗಿ ಮನೆಗೆ ಬಂದಿರುವ ಹೋಬಳಿಯ ಬಾಗಳಿ ನಿವಾಸಿ ಮಲ್ಲೇಶ್‌ ಅವರು ತಮ್ಮ ಅನುಭವಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಕೋವಿಡ್ ಪಾಸಿಟಿವ್ ಬಂದಿದ್ದು ನನಗೆ, ಈಗ ಗುಣಮುಖನಾಗಿದ್ದೇನೆ. ಆದರೆ, ಗ್ರಾಮದಲ್ಲಿ ಇಂದಿಗೂ ನನ್ನ ತಮ್ಮನ ಅಂಗಡಿಗೆ ಜನರು ಖರೀದಿಗೆ ಬರುತ್ತಿಲ್ಲ. ನಮ್ಮ ಬೀದಿಯವರಿಗೆ ಪ್ಲೋರ್ ಮಿಲ್‍ನಲ್ಲಿ ರಾಗಿಹಿಟ್ಟು ಮಾಡಿಕೊಡುತ್ತಿಲ್ಲ. ಇಂತಹ ಪರಿಸ್ಥಿತಿ ಯಾವ ಮನುಷ್ಯರಿಗೂ ಬರಬಾರದು. ಕೋವಿಡ್ ಬಂದು ಗುಣವಾದವರನ್ನು ಜನ ತಾತ್ಸಾರವಾಗಿ ಕಾಣುತ್ತಿದ್ದಾರೆ. ಇದು ಹೋಗಬೇಕು.

ಬೆಂಗಳೂರಿನಲ್ಲಿ ಕೂಲಿ ಮಾಡುತ್ತಿದ್ದ ನಾನು ಗ್ರಾಮಕ್ಕೆ ಬಂದೆ. ಕೋವಿಡ್‌–19 ಭಯದಿಂದ ರಾತ್ರಿ ಸಮಯದಲ್ಲಿ ಜ್ವರ ಬರುತಿತ್ತು. ಅನುಮಾನದಿಂದ ಚಾಮರಾಜನಗರದ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿ ಬಂದಿದ್ದೆ. ಮೂರು ದಿನಗಳ ನಂತರ ‘ನಿಮಗೆ ಕೋವಿಡ್ ಇದೆ’ ಎಂದು ಮನೆ ಬಾಗಿಲಿಗೆ ಆಸ್ಪತ್ರೆಯವರು ಬಂದರು. ಈ ಸಂದರ್ಭದಲ್ಲಿ ನನ್ನ ತಮ್ಮ, ಬಂಧು ಬಳಗದವರು ತುಂಬಾ ಧೈರ್ಯ ತುಂಬಿದರು.

ಆಸ್ಪತ್ರೆಯಲ್ಲಿ ಐದು ದಿನಗಳು ಮಾತ್ರ ಇದ್ದೆ. ಇರುವಷ್ಟು ದಿವಸ ಮಾತ್ರೆ ಕೊಡುತ್ತಿದ್ದರು. ಊಟ, ತಿಂಡಿ ಸರಿಯಾಗಿ ಕೊಡುತ್ತಿದ್ದರು. ವೈದ್ಯರು, ನರ್ಸ್‍ಗಳು ಭಯ ಹೋಗಲಾಡಿಸಿ ಧೈರ್ಯ ತುಂಬುತ್ತಿದ್ದರು. ಅಲ್ಲಿ ಯಾವುದೇ ಸಮಸ್ಯೆ ಉಂಟಾಗಲಿಲ್ಲ.

ನನಗೆಸಮಸ್ಯೆ ಎದುರಾಗಿರುವುದು ನಮ್ಮ ಗ್ರಾಮದಲ್ಲಿ. ನಮ್ಮ ಮನೆಯ ಸುತ್ತಲಿನ ಪ್ರದೇಶವನ್ನು ಸೀಲ್‍ಡೌನ್ ಮಾಡಿದ್ದರಿಂದ ಬೀದಿಯಲ್ಲಿರುವ ಎಲ್ಲರಿಗೂ ತೊಂದರೆಯಾಗಿದೆ. ನನ್ನಿಂದ ಅವರು ತೊಂದರೆ ಅನುಭವಿಸಬೇಕಾಯಿತಲ್ಲ ಎಂಬ ನೋವು ಇಂದಿಗೂ ಕಾಡುತ್ತಿದೆ. ಗ್ರಾಮದ ಜನರು ‘ಬೆಂಗಳೂರಿನಿಂದ ಯಾತಕ್ಕಾದರೂ ಇವನು ಬಂದ’ ಎಂದು ಇಂದಿಗೂ ಜರಿಯುತ್ತಿದ್ದಾರೆ. ಏಟು ಹೊಡೆಸಿಕೊಳ್ಳಬಹುದು. ಆದರೆ, ಈ ರೀತಿಯ ಮಾತುಗಳನ್ನು ಕೇಳಲು ಸಾಧ್ಯವಾಗುತ್ತಿಲ್ಲ. ಇದರಿಂದ ತುಂಬಾ ನೋವು ಅನುಭವಿಸುತ್ತಿದ್ದೇನೆ.

ಕೋವಿಡ್ ಬಂದವರನ್ನು ಕೇವಲವಾಗಿ ನೋಡಬೇಡಿ. ಅದು ಸಣ್ಣ ಕಾಯಿಲೆಯಂತೆ ಬಂದು ಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT