ಬುಧವಾರ, ಸೆಪ್ಟೆಂಬರ್ 30, 2020
23 °C
ಸೋಂಕು ಹೆಚ್ಚಳ: ರಾತ್ರಿ ವಾಸ್ತವ್ಯಕ್ಕೆ ಅನುಮತಿ ನಿರಾಕರಿಸಿದ ಜಿಲ್ಲಾಧಿಕಾರಿ

ಮಹದೇಶ್ವರ ಬೆಟ್ಟದಲ್ಲಿ ಬೆ. 7ರಿಂದ ಸಂ. 7ರವರೆಗೆ ಮಾತ್ರ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕುಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವುದು ಹಾಗೂ ಮಹದೇಶ್ವರ ಬೆಟ್ಟದ ಠಾಣೆಯ ಸಿಬ್ಬಂದಿಗೆ ಸೋಂಕು ತಗುಲಿರುವ ಕಾರಣದಿಂದ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ನಿರಾಕರಿಸಿದ್ದಾರೆ.

ಅಲ್ಲದೇ, ಮುಂದಿನ ಆದೇಶದವರೆಗೆ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಇದೆ ಎಂದು ಅವರು ಹೇಳಿದ್ದಾರೆ. 

ಲಾಕ್‌ಡೌನ್‌ ನಿಯಮಗಳು ಸಡಿಲಿಕೆಯಾಗಿರುವುದರಿಂದ ಬೆಳಿಗ್ಗೆ 4ರಿಂದ ರಾತ್ರಿ 10ರವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲು ಹಾಗೂ ಪ್ರಾಯೋಗಿಕವಾಗಿ ನಾಗಮಲೆ ವಸತಿಗೃಹದಲ್ಲಿ ಭಕ್ತರ ವಾಸ್ತವ್ಯಕ್ಕೆ ಅವಕಾಶ ನೀಡಲು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಿದ್ಧತೆ ನಡೆಸಿತ್ತು.

ಅನ್‌ಲಾಕ್‌–3 ಮಾರ್ಗ ಸೂಚಿಗಳ ಅನ್ವಯ, ದೇವಾಲಯವನ್ನು ಭಕ್ತರ ದರ್ಶನಕ್ಕೆ ಮುಕ್ತಗೊಳಿಸುವ ಹಾಗೂ ವಸತಿಗೃಹಗಳಲ್ಲಿ ಭಕ್ತರಿಗೆ ತಂಗಲು ಅವಕಾಶ ನೀಡಲು ಅನುಮತಿ ಕೋರಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ಆಗಸ್ಟ್‌ 1ರಂದು (ಶನಿವಾರ) ಪತ್ರ ಬರೆದಿದ್ದರು. 

ಇದಕ್ಕೆ ಪ್ರತಿಯಾಗಿ ಪ್ರಾಧಿಕಾರದ ಕಾರ್ಯದರ್ಶಿ ಅವರಿಗೆ ಸೋಮವಾರ ಪತ್ರ ಬರೆದಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕುಗಳಲ್ಲಿ ಸೋಂಕು ಪೀಡಿತರು ಹೆಚ್ಚಾಗುತ್ತಿರುವ ಕಾರಣ ಹಾಗೂ ಮಹದೇಶ್ವರದ ಬೆಟ್ಟದ ಹಲವು ಪೊಲೀಸ್ ಸಿಬ್ಬಂದಿ ಕೋವಿಡ್‌ಗೆ ತುತ್ತಾಗಿರುವುದರಿಂದ ಜೂನ್‌ 6ರಂದು ಹೊರಡಿಸಿರುವ ಆದೇಶವನ್ನೇ ಮುಂದಿನ ಆದೇಶದವರೆಗೂ ಮುಂದುವರೆಸಿದೆ’ ಎಂದು ಹೇಳಿದ್ದಾರೆ. 

ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ತಿಂಡಿ ವ್ಯವಸ್ಥೆ

‘ಜಿಲ್ಲಾಡಳಿತದ ಪತ್ರದ ಅನುಸಾರ, ಬೆಟ್ಟದಲ್ಲಿ ರಾತ್ರಿ ತಂಗುವ ಮತ್ತು ಪ್ರಾಧಿಕಾರದ ಅತಿಥಿ ಗೃಹದಲ್ಲಿ ಕೊಠಡಿಗಳನ್ನು ನೀಡುವ ವ್ಯವಸ್ಥೆ‌ ಇರುವುದಿಲ್ಲ. ದಾಸೋಹದಲ್ಲಿ ಊಟದ ವ್ಯವಸ್ಥೆ ಇರುವುದಿಲ್ಲ. ಆದರೆ ತಿಂಡಿ ವ್ಯವಸ್ಥೆ ಹಾಗೂ ಲಾಡು ಕೌಂಟರ್‌ನಲ್ಲಿ ಲಾಡು ಪ್ರಸಾದ ಮಾರಾಟ ಬೆಳಿಗ್ಗೆ‌ 7ರಿಂದ ಸಂಜೆ 7 ರವರೆಗೆ‌ ಇರಲಿದೆ’ ಎಂದು ಜಯವಿಭವಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

‘ಬೆಳಿಗ್ಗೆ 10.30ರ ಅಭಿಷೇಕಕ್ಕೆ‌ ಮಾತ್ರ ಟಿಕೇಟು ಖರೀದಿಸಲು ಅವಕಾಶವಿದೆ. ಬೆಳಿಗ್ಗೆ 4ರ ಅಭಿಷೇಕ ಹಾಗೂ ಸಂಜೆ 6.30ರ ಅಭಿಷೇಕದ‌ ಸಮಯದಲ್ಲಿ ಭಕ್ತಾದಿಗಳಿಗೆ ಅವಕಾಶವಿಲ್ಲ. ಸಂಜೆ 5.30ರ ನಂತರ ತಾಳಬೆಟ್ಟದಿಂದ ದೇವಾಲಯಕ್ಕೆ ಬರುವ ಭಕ್ತಾದಿಗಳ ವಾಹನಗಳಿಗೆ ಪ್ರವೇಶ ಇಲ್ಲ ಹಾಗೂ ಭಕ್ತಾದಿಗಳ ಕಾಲ್ನಡಿಗೆ ಪ್ರವೇಶಕ್ಕೂ ಅನುವು ಮಾಡುವುದಿಲ್ಲ. ಮುಡಿ ಸೇವೆ ಹಾಗೂ ಉತ್ಸವಗಳೂ ಇರುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು