ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಲ ಮಂಜೂರು ವಿಳಂಬ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ‘

ಆತ್ಮ ನಿರ್ಭರ್ ನಿಧಿ ಕಿರುಸಾಲ ಸೌಲಭ್ಯ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್ಚರಿಕೆ
Last Updated 18 ಡಿಸೆಂಬರ್ 2020, 16:06 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಬೀದಿ ಬದಿ ವ್ಯಾಪಾರಿಗಳು ಆತ್ಮ ನಿರ್ಭರ್ ನಿಧಿ ಯೋಜನೆಯಡಿ ಕಿರುಸಾಲಕ್ಕಾಗಿ ಸಲ್ಲಿಸಲಾಗಿರುವ ಅರ್ಜಿಗಳ ವಿಲೇವಾರಿಗೆ ವಿಳಂಬ ನೀತಿ ಅನುಸರಿಸುತ್ತಿರುವ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳ ವಿರುದ್ಧ ಮುನಿಸಿಪಾಲಿಟಿ ಕಾಯ್ದೆ ಅನುಸಾರ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಶುಕ್ರವಾರ ಎಚ್ಚರಿಕೆ ನೀಡಿದರು.

ಪ್ರಧಾನ ಮಂತ್ರಿ ಆತ್ಮ ನಿರ್ಭರ್ ನಿಧಿ ಕಿರುಸಾಲ ಸೌಲಭ್ಯ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ಈಗಾಗಲೇ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ 2,287 ಅರ್ಜಿಗಳು ಸಾಲ ಕೋರಿ ಸಲ್ಲಿಕೆಯಾಗಿವೆ. ಅರ್ಜಿದಾರರಿಗೆ ಕೂಡಲೇ ಸಾಲ ಮಂಜೂರಾತಿ ನೀಡಿ ಬಿಡುಗಡೆಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಆನ್‌ಲೈನ್ ಮೂಲಕ ಎಲ್ಲ ಪ್ರಕ್ರಿಯೆ ಪೂರ್ಣವಾಗಬೇಕು. ಅನಗತ್ಯ ಸಬೂಬು ಹೇಳುವುದನ್ನು ಸಹಿಸಲಾಗುವುದಿಲ್ಲ. ನಿಗದಿತ ಗುರಿ ಅನುಸಾರ ಆರ್ಥಿಕ ಸೌಲಭ್ಯ ಒದಗಿಸಲು ಹಿಂದೇಟು ಹಾಕುವ ಪ್ರವೃತ್ತಿ ಮುಂದುವರಿಸಿದರೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ’ ಎಂದರು.

‘ಸಾಲ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳು ಯಾವ ಹಂತದಲ್ಲಿವೆ? ಏನಾದರೂ ಪೂರಕ ಮಾಹಿತಿ ಅಥವಾ ದಾಖಲೆಯನ್ನು ಬ್ಯಾಂಕುಗಳಿಗೆ ನೀಡುವ ಅಗತ್ಯವಿದೆಯೇ ಎಂಬ ಬಗ್ಗೆ ನಗರಸ್ಥಳೀಯ ಸಂಸ್ಥೆ ಆಯುಕ್ತರು, ಮುಖ್ಯ ಅಧಿಕಾರಿಗಳು ಪರಿಶೀಲಿಸಿಕೊಳ್ಳಬೇಕು. ಬ್ಯಾಂಕಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಫಲಾನುಭವಿಗಳಿಗೆ ಆರ್ಥಿಕ ಪ್ರಯೋಜನ ತಲುಪಿಸಿಲು ಅಧಿಕಾರಿಗಳೂ ವಿಶೇಷ ಗಮನ ನೀಡಬೇಕು’ ಎಂದುಯ ಡಾ.ಎಂ.ಆರ್.ರವಿ ಅವರು ನಿರ್ದೇಶನ ನೀಡಿದರು.

ಲೀಡ್ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ವಿಜಯ್‌ಕುಮಾರ್ ಚೌರಾಸಿಯ ಅವರು ಮಾತನಾಡಿ, ‘ಪ್ರತಿ ಫಲಾನುಭವಿಯ ಅರ್ಜಿಗಳನ್ನು ಪರಿಶೀಲಿಸಿ ಕೂಡಲೇ ಮಂಜೂರಾತಿ ಹಾಗೂ ಬಿಡುಗಡೆಗೆ ಬ್ಯಾಂಕಿನ ಶಾಖಾ ಅಧಿಕಾರಿಗಳು ಮುಂದಾಗಬೇಕು. ಆಯಾ ತಾಲ್ಲೂಕುವಾರು ಪ್ರಗತಿಯನ್ನು ಪರಿಶೀಲಿಸಲಾಗಿದೆ. ಏನೇ ಸಮಸ್ಯೆಗಳು ಇದ್ದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದರು.

ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್, ಜಿಲ್ಲಾ ಕೌಶಲ್ಯ ಅಭಿವೃದ್ದಿ ಅಧಿಕಾರಿ ರವಿಶಂಕರ್, ಚಾಮರಾಜನಗರ ನಗರಸಭೆ ಆಯುಕ್ತ ಎಂ.ರಾಜಣ್ಣ, ಕೊಳ್ಳೇಗಾಲ ನಗರಸಭೆ ಆಯುಕ್ತ ವಿಜಯ್, ಗುಂಡ್ಲುಪೇಟೆ ಪುರಸಭೆ ಮುಖ್ಯಾಧಿಕಾರಿ ಎ.ರಮೇಶ್, ಹನೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೂರ್ತಿ, ಡೇನಲ್ಮ್ ಯೋಜನೆಯ ನಗರ ಅಭಿಯಾನ ಅಧಿಕಾರಿಗಳಾದ ಹಮ್ಜದ್ ಪಾಷ, ಡಾ.ಪುಟ್ಟಸ್ವಾಮಿ, ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT