ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಶಿಷ್ಟರಿಗೆ ಮೂಲ ಸೌಲಭ್ಯ ಒದಗಿಸಿ’

ಪರಿಶಿಷ್ಟ ಜಾತಿ ಕುಂದುಕೊರತೆ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ
Last Updated 3 ಸೆಪ್ಟೆಂಬರ್ 2021, 4:44 IST
ಅಕ್ಷರ ಗಾತ್ರ

ಚಾಮರಾಜನಗರ: ‘ಪರಿಶಿಷ್ಟ ಜಾತಿಯ ಜನರಿಗೆ ಮೂಲ ಸೌಕರ್ಯ, ಪರಿಹಾರ ಸೇರಿದಂತೆ ಇಲಾಖೆಯ ಸೌಲಭ್ಯಗಳನ್ನು ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸಬಾರದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಗುರುವಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪರಿಶಿಷ್ಟ ಜಾತಿ ಕುಂದು ಕೊರತೆ ಸಮಿತಿ ಸಭೆಯಲ್ಲಿ ವಿವಿಧ ಸಮಸ್ಯೆ–ಮನವಿ ಆಲಿಸಿದ ಜಿಲ್ಲಾಧಿಕಾರಿ, ‘ಬಗರ್‌ಹುಕುಂ ಸಾಗುವಳಿ ಸಂಬಂಧ ತಾಲ್ಲೂಕು ಸಮಿತಿಗಳಿವೆ. ತಹಶೀಲ್ದಾರರು ಆಯಾ ಭಾಗದ ಶಾಸಕರ ಅಧ್ಯಕ್ಷತೆಯಲ್ಲಿ ಕಾಲಕಾಲಕ್ಕೆ ಸಭೆ ನಡೆಸಿ ಸಾಗುವಳಿ ಪತ್ರವನ್ನು ಅರ್ಹ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ನೀಡಬೇಕು. ವಿಳಂಬ ಮಾಡದೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದರು.

ಎಚ್.ಡಿ ಫಾರೆಸ್ಟ್‌ನಲ್ಲಿ 205 ಜೀತ ವಿಮುಕ್ತರಿಗೆ ಜಮೀನು ಮಂಜೂರು ಮಾಡಿದ್ದು, ಈ ಪ್ರದೇಶದಲ್ಲಿ ಬೇರೆಯವರು ಇರುವ ಬಗ್ಗೆ ಗಮನ ಸೆಳೆದ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಮಂಜೂರಾತಿಯಾಗಿರುವ ಭೂಮಿಯನ್ನು ಜೀತ ವಿಮುಕ್ತರಿಗೆ ಕೊಡಿಸಬೇಕಿದೆ. ಈ ಬಗ್ಗೆ ಸರ್ವೆ ಮಾಡಿ ತಹಶೀಲ್ದಾರರು ವರದಿ ಸಲ್ಲಿಸುವಂತೆ ಆದೇಶಿಸಿದರು.

ರಾಷ್ಟ್ರೀಯ ಹೆದ್ದಾರಿಗಾಗಿ ಭೂ ಸ್ವಾಧೀನ ಮಾಡಿಕೊಂಡು ನೀಡಿರುವ ಪರಿಹಾರದಲ್ಲಿ ಪರಿಶಿಷ್ಟ ಜಾತಿಯ ಜನರಿಗೆ ತಾರತಮ್ಯ ಮಾಡಲಾಗಿದೆ. ಅವೈಜ್ಞಾನಿಕವಾಗಿ ಪರಿಹಾರ ನಿಗದಿ ಮಾಡಲಾಗಿದೆ ಎಂಬ ವಿಷಯಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ‘ಜಿಲ್ಲಾ ವ್ಯಾಪ್ತಿಯಲ್ಲಿಯೂ ಹೆಚ್ಚಿನ ಬೆಲೆ ನಿಗದಿ ಮಾಡುವ ಸಂಬಂಧ ನೋಂದಣಿ ಅಧಿಕಾರಿಗಳ ಸಭೆ ಕರೆದು ಸೂಚಿಸಲಾಗಿದೆ. ಪರಿಹಾರದಲ್ಲಿ ತಾರತಮ್ಯವಾಗಿದ್ದಲ್ಲಿ ಪರಿಶೀಲಿಸಿ ಕ್ರಮ ವಹಿಸಬೇಕು’ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಗುಂಡ್ಲುಪೇಟೆ ತಾಲ್ಲೂಕಿನ ಸೋಮಹಳ್ಳಿ, ಕೊಳ್ಳೇಗಾಲ ತಾಲ್ಲೂಕಿನ ಬಸ್ತೀಪುರ, ಚಾಮರಾಜನಗರ ತಾಲ್ಲೂಕಿನ ಬಸವನಪುರ, ಕೆಸ್ತೂರು, ಮಲೆಮಹದೇಶ್ವರ ಬೆಟ್ಟ ಸೇರಿದಂತೆ ಇತರೆಡೆ ಸ್ಮಶಾನ ಸಂಬಂಧ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು. ಕೆಲವೆಡೆ ಕಾಮಗಾರಿ ಈಗಾಗಲೇ ಕೈಗೊಂಡಿದ್ದು ವೇಗವಾಗಿ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.

‘ಅನುದಾನ ದುರುಪಯೋಗಪಡಿಸಿಕೊಂಡಿರುವವರ ವಿರುದ್ಧ ಕ್ರಮವಾಗಲಿದೆ. ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನ ರಾಮ್ ಸಮುದಾಯ ಭವನಗಳ ನಿರ್ವಹಣೆ ಸಂಬಂಧ ತಹಶೀಲ್ದಾರರು ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ನೋಡಿಕೊಳ್ಳಲಿದ್ದಾರೆ. ಈ ಸಮಿತಿಗಳಲ್ಲಿ ಸಂಘಟನೆಗಳ ಪ್ರತಿನಿಧಿಗಳಿಗೂ ಅವಕಾಶ ಇರಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.

ಸಿಇಒ ಹರ್ಷಲ್ ಭೊಯರ್ ನಾರಾಯಣ ರಾವ್, ಎಎಸ್‌ಪಿ ಕೆ.ಎಸ್.ಸುಂದರ್ ರಾಜ್, ಉಪ ವಿಭಾಗಾಧಿಕಾರಿ ಡಾ.ಗಿರಿಶ್ ದಿಲೀಪ್ ಬದೋಲೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಅಕ್ರಮ ಮದ್ಯ ಮಾರಾಟ ನಿಯಂತ್ರಿಸಿ

ಅಕ್ರಮ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡುವ ಬಾರ್, ವೈನ್‌ಶಾಪ್‌ಗಳ ವಿರುದ್ಧವೂ ಕ್ರಮವಾಗಬೇಕು ಎಂದು ಮುಖಂಡರು ಒತ್ತಾಯಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಮಾತನಾಡಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಪಟ್ಟಣ ವ್ಯಾಪ್ತಿಯ ರಸ್ತೆಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಮಹನೀಯರ ಹೆಸರು ನಾಮಕರಣ ಮಾಡುವ ಸಂಬಂಧ, ಗಂಗಾ ಕಲ್ಯಾಣ ಯೋಜನೆ ಅನುಷ್ಠಾನ, ಅಂಗನವಾಡಿ ಸಹಾಯಕಿಯರು ಕಾರ್ಯಕರ್ತೆಯರ ನೇಮಕ, ವಸತಿ ಸೌಲಭ್ಯ, ರಸ್ತೆ ಸಂಪರ್ಕ, ಕಾಮಗಾರಿಗಳ ಗುತ್ತಿಗೆ, ದೌರ್ಜನ್ಯ ಪ್ರಕರಣಗಳು ಸೇರಿದಂತೆ ಇತರೆ ವಿಷಯಗಳ ಕುರಿತು ಸುದೀರ್ಘವಾಗಿ ಸಭೆಯಲ್ಲಿ ಚರ್ಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT