ಬುಧವಾರ, ಮಾರ್ಚ್ 29, 2023
32 °C

ಉಮ್ಮತ್ತೂರು ಕೆರೆಗೆ 15ರೊಳಗೆ ನೀರು: ಡಿ.ಸಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಉಮ್ಮತ್ತೂರು ದೊಡ್ಡಕೆರೆಗೆ ನೀರು ಹರಿಸಲು ಗ್ರಾಮಸ್ಥರು ಈ ತಿಂಗಳ 30 ಗಡುವು ವಿಧಿಸಿರುವ ಬೆನ್ನಲ್ಲೇ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಧಿಕಾರಿಗಳ ಸಭೆ ನಡೆಸಿ ಇದೇ 15ರ ಒಳಗಾಗಿ ಕೆರೆಗೆ ನೀರು ಹರಿಸುವಂತೆ ಸೂಚನೆ ನೀಡಿದ್ದಾರೆ. 

ಜಿಲ್ಲೆಯ ಕೆರೆಗಳಿಗೆ ಸುತ್ತೂರು ಗ್ರಾಮದ ಬಳಿ ಕಬಿನಿ ನದಿಯಿಂದ ನೀರು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆಯನ್ನು ಶನಿವಾರ ನಡೆಸಿದ ಅವರು, ‘ಉಮ್ಮತ್ತೂರು ಕೆರೆಗೆ ನೀರು ತುಂಬಿಸಲು ಬಾಕಿ ಇರುವ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಈಗಾಗಲೇ 34 ಕಿ.ಮೀ ಪೈಪ್‌ಲೈನ್ ಕಾಮಗಾರಿ ಪೈಕಿ ಗ್ರ್ಯಾವಿಟಿ ಲೈನ್ ಕಾಮಗಾರಿಯು 20 ಕಿ.ಮೀ ಪೂರ್ಣಗೊಂಡಿದೆ. ರೈಸಿಂಗ್ ಮೆನ್ ಲೈನ್ ಕಾಮಗಾರಿಯನ್ನು 14 ಕಿ.ಮೀ ಪೂರ್ಣಗೊಳಿಸಲಾಗಿದೆ. ಬಾಕಿ 900 ಮೀಟರ್‌ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಬಳಿ ಆಗಬೇಕಿದೆ. ಈ ಸಂಬಂಧ ಇರುವ ತೊಡಕುಗಳನ್ನು ಪರಿಹರಿಸಿಕೊಂಡು ತುರ್ತಾಗಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯನ್ನು ಆರಂಭಿಸಿ ಪೂರ್ಣಗೊಳಿಸಬೇಕು’ ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

‘ಉಮ್ಮತ್ತೂರು ಕೆರೆ ತುಂಬಿಸುವ ಸಂಬಂಧ ಬಾಕಿ ಇರುವ ಎಲ್ಲ ಕೆಲಸಗಳನ್ನು ತಕ್ಷಣವೇ ಪೂರೈಸಬೇಕು. ಯಾವುದೇ ಸಬೂಬು ಹೇಳದೆ ಕಾಮಗಾರಿಯನ್ನು ಪೂರೈಸಬೇಕು. ಕಾಮಗಾರಿ ನಿರ್ವಹಣೆಯಲ್ಲಿ ಯಾವುದೇ ವಿಳಂಬ, ನಿರ್ಲಕ್ಷ್ಯ ವಹಿಸುವುದನ್ನು ಸಹಿಸಲಾಗುವುದಿಲ್ಲ’ ಎಂದು ಹೇಳಿದರು. 

ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ಸಹಾಯಕ ಎಂಜಿನಿಯರ್ ಮಹದೇವಸ್ವಾಮಿ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭಾಸ್ಕರ್‌ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು