ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ಹಾಸಿಗೆಗಳ ವ್ಯವಸ್ಥೆಗೆ ಸೂಚನೆ

ಕೋವಿಡ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭೇಟಿ, ಅಧಿಕಾರಿಗಳೊಂದಿಗೆ ಸಭೆ
Last Updated 30 ಸೆಪ್ಟೆಂಬರ್ 2020, 14:23 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ನಗರದಲ್ಲಿರುವಕೋವಿಡ್-19 ಆಸ್ಪತ್ರೆಯಲ್ಲಿ ಇನ್ನೂ 100 ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಳ ಮಾಡಬೇಕಿದ್ದು, ತುರ್ತಾಗಿ 60 ಹಾಸಿಗೆಗಳ ವ್ಯವಸ್ಥೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೂಚನೆ ನೀಡಿದ್ದಾರೆ.

ನಗರದ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಅಲ್ಲಿನ ವ್ಯವಸ್ಥೆಗಳ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಚಾಮರಾಜನಗರ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆಯ ಡೀನ್‌ ಡಾ.ಸಂಜೀವ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಂ.ಸಿ.ರವಿ ಸೇರಿದಂತೆ ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು.

‘ಕೋವಿಡ್ ಆಸ್ಪತ್ರೆಯ ಮಹಡಿಯ ಮೂಳೆ ರೋಗಿಗಳ ವಿಭಾಗದಲ್ಲಿ ತುರ್ತಾಗಿ 60 ಹಾಸಿಗೆಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿಯೇ ಮೀಸಲಿಡಲು ವ್ಯವಸ್ಥೆ ಮಾಡಬೇಕು’ ಎಂದು ಅವರು ತಿಳಿಸಿದರು.

‘ಈಗಿರುವ ಮೂಳೆ ರೋಗಿಗಳ ವಿಭಾಗವನ್ನು ಜೆಎಸ್ಎಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲು ಈಗಾಗಲೇ ಸೂಚಿಸಲಾಗಿದ್ದು, ಪ್ರಕ್ರಿಯೆ ನಡೆಯುತ್ತಿದೆ. ಮುಂದೆ ಬರಬಹುದಾದ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಆಸ್ಪತ್ರೆಯಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೋವಿಡ್ ಆರೈಕೆಗಾಗಿ ಬಳಸಿಕೊಳ್ಳಬೇಕಾಗುತ್ತದೆ. ಈಗಿರುವ ತಾಯಿ ಮಕ್ಕಳ ಆಸ್ಪತ್ರೆಯನ್ನು ಸಂತೇಮರಹಳ್ಳಿಯ ಆಸ್ಪತ್ರೆಗೆ ಹಂತ ಹಂತವಾಗಿ ಸ್ಥಳಾಂತರ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

‘ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲ ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ಅಳವಡಿಸುವ ವ್ಯವಸ್ಥೆ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಗಂಭೀರ ಪ್ರಕರಣಗಳಲ್ಲಿ ಚಿಕಿತ್ಸೆ ನೀಡಲು ತೀವ್ರ ನಿಗಾ ಘಟಕವನ್ನು ಇನ್ನಷ್ಟು ಸುಧಾರಿಸುವ ಕಾರ್ಯವನ್ನು ಕೈಗೊಳ್ಳಬೇಕು. ಕೋವಿಡ್ ಪ್ರಕರಣಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಅತ್ಯತ್ತಮ ಚಿಕಿತ್ಸೆ ಆರೈಕೆ ಕ್ರಮಗಳನ್ನು ವಹಿಸಬೇಕು’ ಎಂದು ಹೇಳಿದರು

‘ಕೋವಿಡ್ ಆಸ್ಪತ್ರೆ ನಿರ್ವಹಣೆಗೆ ಇನ್ನೂ ಅಗತ್ಯವಿರುವ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಯಾವುದೇ ಕೊರತೆ ಬಾರದ ಹಾಗೆ ಸೋಂಕಿತರ ಸೇವೆಗೆ ಸದಾ ಸಿದ್ಧರಿರಬೇಕು. ದೂರುಗಳಿಗೆ ಆಸ್ಪದವಾಗದ ಹಾಗೆ ಕೋವಿಡ್ ಆಸ್ಪತ್ರೆಯನ್ನು ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಸರ್ಜನ್‌ ಡಾ.ಪಿ.ವಿ.ಮುರಳಿಕೃಷ್ಣ, ಡಾ.ಮಹೇಶ್, ಇತರೆ ವೈದ್ಯಕೀಯ ತಜ್ಞರು, ಹಿರಿಯ ವೈದ್ಯಾಧಿಕಾರಿಗಳು ಇದ್ದರು.

113 ಪ್ರಕರಣ, 67 ಮಂದಿ ಗುಣಮುಖ

ಜಿಲ್ಲೆಯಲ್ಲಿ ಬುಧವಾರ 113 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. 67 ಮಂದಿ ಸೋಂಕು ಮುಕ್ತರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ.

ಕೊಳ್ಳೇಗಾಲದ ನಿವಾಸಿ 67 ವರ್ಷದ ಮಹಿಳೆ ಸೆ.26ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ.

ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ 4,098 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. 3,272 ಮಂದಿ ಗುಣಮುಖರಾಗಿದ್ದಾರೆ. 732 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ, 310 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. 39 ಮಂದಿ ಐಸೊಲೇಷನ್‌ನಲ್ಲಿದ್ದಾರೆ.

ಬುಧವಾರ 1,088 ಮಂದಿಯ ಗಂಟಲು ದ್ರವ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಆರ್‌ಟಿಪಿಸಿಆರ್‌ ಮೂಲಕ 724, ರ‍್ಯಾಪಿಡ್‌ ಆ್ಯಂಟಿಜೆನ್‌ ಮೂಲಕ 364 ಪರೀಕ್ಷೆಗಳನ್ನು ಮಾಡಲಾಗಿದೆ. 977 ಮಂದಿಯ ವರದಿ ನೆಗೆಟಿವ್‌ ಬಂದಿದೆ. 111 ಮಂದಿಗೆ ಸೋಂಕು ಖಚಿತವಾಗಿದೆ. ಇನ್ನೆರಡು ಪ್ರಕರಣ ಮೈಸೂರಿನಲ್ಲಿ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT