ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಚಿಕಿತ್ಸೆ: 1000 ಹಾಸಿಗೆಗೆ ವ್ಯವಸ್ಥೆ

ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಿಲ್ಲ: ಸ್ಥಳೀಯ ಜನರಲ್ಲಿ ದೃಢ–ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ
Last Updated 8 ಜುಲೈ 2020, 16:15 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕೋವಿಡ್‌–19 ದೃಢಪಟ್ಟವರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಜಿಲ್ಲೆಯಲ್ಲಿ ಸದ್ಯ 750 ಹಾಸಿಗೆಗಳ ವ್ಯವಸ್ಥೆಯಿದ್ದು, ಇದನ್ನು 1000 ಹಾಸಿಗೆಗೆ ವಿಸ್ತರಿಸುವುದಕ್ಕೆ ಅವಕಾಶವಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.

ಕೋವಿಡ್‌–19ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿನ ಸದ್ಯದ ಸ್ಥಿತಿ ಹಾಗೂ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಬುಧವಾರ ವಿವರಣೆ ನೀಡಿದರು.

‘ಕೋವಿಡ್‌ ಆಸ್ಪತ್ರೆಯಲ್ಲಿ34 ಐಸಿಯು ಹಾಸಿಗೆಗಳು ಸೇರಿದಂತೆ 100 ಹಾಸಿಗೆಗಳಿವೆ. ಇಲ್ಲಿ, ತೀವ್ರ ರೋಗ ಲಕ್ಷಣ ಇರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗ ಲಕ್ಷಣಗಳಿಲ್ಲದ ಸೋಂಕಿತರು ಹಾಗೂ ಚಿಕಿತ್ಸೆ ಪಡೆದು ಚೇತರಿಸಿಕೊಂಡವರನ್ನು ಕೋವಿಡ್‌ ಕೇರ್ ಕೇಂದ್ರಗಳಲ್ಲಿ ಇರಿಸಿ ಆರೈಕೆ ಮಾಡಲಾಗುತ್ತದೆ. ಈಗಾಗಲೇ ಇದನ್ನು ಕಾರ್ಯರೂಪಕ್ಕೆ ತರಲಾಗಿದೆ. ವೈದ್ಯಕೀಯ ಕಾಲೇಜಿನಲ್ಲಿ 100 ಹಾಸಿಗೆಗಳು, ಎಂಜಿನಿಯರಿಂಗ್‌ ಕಾಲೇಜಿನಲ್ಲಿ 100 ಹಾಸಿಗೆಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

‘ವೈದ್ಯಕೀಯ ಕಾಲೇಜಿನಲ್ಲಿ ಇನ್ನೂ 150 ಹಾಸಿಗೆಗಳನ್ನು ಹಾಕುವುದಕ್ಕೆ ಸಾಧ್ಯವಿದೆ. ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ 100 ಹಾಸಿಗೆಗಳಿಗೆ ವ್ಯವಸ್ಥೆ ಮಾಡಬಹುದಾಗಿದೆ. ಇದರ ಜೊತೆಗೆ ಬಸವರಾಜೇಂದ್ರ ಆಸ್ಪತ್ರೆಯಲ್ಲಿ 100, ಕಾಮಗೆರೆಯ ಹೋಲಿಕ್ರಾಸ್‌ ಆಸ್ಪತ್ರೆಯಲ್ಲಿ 100 ಹಾಸಿಗೆಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಜೆಎಸ್‌ಎಸ್‌ ಆಸ್ಪತ್ರೆಯೊಂದಿಗೆ ‌ಒಪ್ಪಂದವಾದರೆ ಜಿಲ್ಲಾಸ್ಪತ್ರೆಯಲ್ಲಿರುವ ಇತರ ರೋಗಿಗಳನ್ನು ಅಲ್ಲಿಗೆ ವರ್ಗಾಯಿಸಿ, ಇಡೀ ಆಸ್ಪತ್ರೆಯನ್ನೇ ಕೋವಿಡ್‌ ಆಸ್ಪತ್ರೆಯನ್ನಾಗಿ ಮಾಡಲಾಗುವುದು. ಆಗ ಹೆಚ್ಚುವರಿಯಾಗಿ 150 ಹಾಸಿಗೆ ಲಭ್ಯವಾಗುತ್ತವೆ’ ಎಂದು ಅವರು ವಿವರಿಸಿದರು.

‘ಸಂತೇಮರಹಳ್ಳಿಯ ತಾಯಿ ಮಗು ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸುವುದಕ್ಕೆ ನಿರ್ಧಾರ ಕೈಗೊಳ್ಳಲಾಗಿದ್ದು, ಸದ್ಯ ಅಲ್ಲಿ 60 ಹಾಸಿಗೆಗಳಿವೆ. ಇದನ್ನು 100ಕ್ಕೆ ವಿಸ್ತರಣೆ ಮಾಡಬಹುದು. ಇದರಲ್ಲಿ 10 ಹಾಸಿಗೆಗಳ ಐಸಿಯು ಸ್ಥಾಪಿಸಲಾಗುವುದು. ವೆಂಟಿಲೇಟರ್‌ ಸೇರಿದಂತೆ ಎಲ್ಲ ಸೌಕರ್ಯಗಳು ಅಲ್ಲಿಗೆ ಬರಲಿವೆ. ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಸುವ ಪೈಪ್‌ ಅಳವಡಿಕೆ ಕಾಮಗಾರಿ ಆರಂಭವಾಗಿದೆ’ ಎಂದು ಡಾ.ಎಂ.ಆರ್.ರವಿ ಹೇಳಿದರು.

‘ಕೋವಿಡ್‌ ಕೇರ್‌ ಕೇಂದ್ರಗಳು ಹೆಚ್ಚಾದರೆ, ಮಾನವ ಸಂಪನ್ಮೂಲ ಕೊರತೆ ಎದುರಾಗಬಹುದು. ಎಲ್ಲ ಕೋವಿಡ್‌ ಕೇಂದ್ರಗಳಿಗೂ ಒಬ್ಬ ವೈದ್ಯರನ್ನು ನಿಯೋಜಿಸಲಾಗುವುದು. ನರ್ಸ್‌ಗಳು, ಗ್ರೂಪ್‌ ಡಿ ನೌಕರರು ಬೇಕಾಗುತ್ತಾರೆ. 40 ನರ್ಸ್‌ಗಳನ್ನು ಆರು ತಿಂಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಕೋವಿಡ್‌–19 ಕರ್ತವ್ಯಕ್ಕೆ ಎಂಬ ಕಾರಣಕ್ಕೆ ಕೆಲವರು ಹಿಂಜರಿಯುತ್ತಿದ್ದಾರೆ. ಇದೂವರೆಗೆ 15 ಜನರು ಬಂದಿದ್ದಾರೆ’ ಎಂದು ಹೇಳಿದರು.

‘ಹೆಚ್ಚು ಕೋವಿಡ್‌ ಪರೀಕ್ಷೆ ನಡೆಸಲು ಒತ್ತು ನೀಡಲಾಗಿದೆ. ಇದಕ್ಕಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯ ತಂಡವನ್ನು ರಚಿಸಲಾಗಿದೆ. ಸಂಪರ್ಕಿತರ ಪತ್ತೆ ಹಚ್ಚುವುದಕ್ಕಾಗಿ ಜಿಲ್ಲಾ ಪಂಚಾಯಿತಿ ಸಿಇಒ ನೇತೃತ್ವದಲ್ಲಿ ತಂಡ ರಚಿಸಲಾಗಿದೆ’ ಎಂದು ಡಾ.ಎಂ.ಆರ್.ರವಿ ಮಾಹಿತಿ ನೀಡಿದರು.

ಕ್ರಮ: ‘ಮನೆ ಕ್ವಾರಂಟೈನ್‌ ನಿಯಮವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಇದೂವರೆಗೆ 28 ಮಂದಿ ಉಲ್ಲಂಘಿಸಿದ್ದಾರೆ. ಮೊದಲಿಗೆ ಎಚ್ಚರಿಕೆ ನೀಡುತ್ತೇವೆ. ನಂತರ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸುತ್ತೇವೆ. ಅದಕ್ಕೂ ಬಗ್ಗದಿದ್ದರೆ ಎಫ್‌ಐಆರ್‌ ದಾಖಲಿಸುತ್ತೇವೆ’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ ಇದ್ದರು.

ಸ್ಥಳೀಯ ಮಟ್ಟದಲ್ಲಷ್ಟೇಸೋಂಕು

‘ಜಿಲ್ಲೆಯಲ್ಲಿ ಮಂಗಳವಾರದವರೆಗೆ ದಾಖಲಾದ 120 ಪ್ರಕರಣಗಳನ್ನು ವಿಶ್ಲೇಷಣೆ ಮಾಡಿದರೆ, ಕೊರೊನಾ ವೈರಸ್‌ ಸೋಂಕು ಸ್ಥಳೀಯ ಮಟ್ಟದಲ್ಲಿ ಮಾತ್ರ ಹರಡಿದೆ ಎಂಬುದು ತಿಳಿಯುತ್ತದೆ. ಬೆಂಗಳೂರಿನಿಂದ ಬಂದ 31 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಇವರಿಂದ 27 ಮಂದಿಗೆ ಹರಡಿದೆ‘ ಎಂದು ಡಾ.ಎಂ.ಆರ್.ರವಿ ಹೇಳಿದರು.

‘ತಮಿಳುನಾಡಿನಿಂದ ಬಂದಿದ್ದ ಏಳು ಮಂದಿಯಿಂದ 14 ಜನರಿಗೆ, ಮೈಸೂರಿಗೆ ಹೋಗಿ ಬಂದಿದ್ದ ಎಂಟು ಮಂದಿಯಿಂದ ಎಂಟು ಜನರಿಗೆ ಸೋಂಕು ತಗುಲಿದೆ. ಕಂಟೈನ್‌ಮೆಂಟ್‌ ವಲಯಗಳಲ್ಲಿರುವ ನಾಲ್ವರಲ್ಲಿ ಸೋಂಕು ಕಂಡು ಬಂದಿದ್ದು, ಇವರಿಂದಾಗಿ 17 ಜನರಿಗೆ ಸೋಂಕು ತಗುಲಿದೆ. ಇದೂವರೆಗೂ ಸೋಂಕಿತರ ಕುಟುಂಬ, ಆಸುಪಾಸಿನಲ್ಲೇ ಸೋಂಕು ಹರಡಿದೆ’ ಎಂದು ತಿಳಿಸಿದರು.

ಇಬ್ಬರು ಗರ್ಭಿಣಿಯರು: ‘ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಇಬ್ಬರು ಗರ್ಭಿಣಿಯರಿದ್ದಾರೆ. ಒಬ್ಬರಿಗೆ ಇದೇ ತಿಂಗಳ 17ರಂದು ಹೆರಿಗೆ ನಿಗದಿಯಾಗಿದೆ’ ಎಂದರು.

‘ಎಲ್ಲ ಸೋಂಕಿತರಿಗೆ 10 ದಿನ ಚಿಕಿತ್ಸೆ ನೀಡಿ, ಮತ್ತೆ ಪರೀಕ್ಷೆ ನಡೆಸಿ ವರದಿ ನೆಗೆಟಿವ್‌ ಬಂದರೆ, ಮನೆಗೆ ಕಳುಹಿಸಲಾಗುವುದು’ ಎಂದು ಹೇಳಿದರು.

ಅಂತ್ಯ ಸಂಸ್ಕಾರ: ಎರಡು ಎಕರೆ ಜಾಗ ಗುರುತು

‘ನಮ್ಮಲ್ಲಿ ಇದೂವರೆಗೆ ಕೋವಿಡ್‌ನಿಂದಾಗಿ ಯಾರೂ ಮೃತಪಟ್ಟಿಲ್ಲ. ಹಾಗಿದ್ದರೂ, ಅಂತಹ ಪರಿಸ್ಥಿತಿ ಬಂದರೆ ನಿಭಾಯಿಸಲು ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಶಿಷ್ಟಾಚಾರದಂತೆ ಮೃತದೇಹವನ್ನು ಕುಟುಂಬಕ್ಕೆ ನೀಡಲು ಸಾಧ್ಯವಿಲ್ಲ. ನಾಲ್ಕು ಮೀಟರ್‌ ದೂರ ನಿಂತುಕೊಂಡು ಕುಟುಂಬ ಸದಸ್ಯರು ಅಂತಿಮ ದರ್ಶನ ಪಡೆಯುವುದಕ್ಕೆ ಅವಕಾಶ ಇದೆ. ನಾಲ್ಕು ಮೀಟರ್‌ ದೂರದಲ್ಲಿ ಅಂತ್ಯಸಂಸ್ಕಾರದ ಕ್ರಿಯೆಗಳನ್ನು ನಡೆಸುವುದಕ್ಕೂ ಅವಕಾಶ ಇದೆ’ ಎಂದು ಡಾ.ರವಿ ತಿಳಿಸಿದರು.

‘ಆಯಾ ಸಮುದಾಯಕ್ಕೆ ಸೇರಿದ ಸ್ಮಶಾನಗಳಲ್ಲಿ ಶಿಷ್ಟಾಚಾರದಂತೆ ಅಂತ್ಯಸಂಸ್ಕಾರ ನಡೆಸಬಹುದು. ಇದಕ್ಕೆ ಎಲ್ಲ ಸಮುದಾಯದವರೂ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು’ ಎಂದರು.

‘ಒಂದು ವೇಳೆ ಮೃತಪಟ್ಟ ವ್ಯಕ್ತಿಗೆ ಯಾರೂ ಇಲ್ಲದಿದ್ದರೆ, ಅಂತಹವರ ಅಂತ್ಯಸಂಸ್ಕಾರವನ್ನು ನೆರವೇರಿಸುವುದಕ್ಕಾಗಿ ಎರಡು ಎಕರೆ ಸರ್ಕಾರಿ ಜಾಗವನ್ನು ಗುರುತಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT