ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ದೇಖೋ ಅಪ್ನಾ ದೇಶ್‌ ಪೀಪಲ್ಸ್‌ ಚಾಯ್ಸ್‌’ ಅಭಿಯಾನ: ವೋಟಿಂಗ್ ಮಾಡುವುದು ಹೇಗೆ?

ಅಭಿಯಾನದಲ್ಲಿ ಚಾಮರಾಜನಗರ ಜಿಲ್ಲೆಯ 16 ಪ್ರವಾಸಿ ತಾಣಗಳ ಆಯ್ಕೆ
Published : 5 ಸೆಪ್ಟೆಂಬರ್ 2024, 6:22 IST
Last Updated : 5 ಸೆಪ್ಟೆಂಬರ್ 2024, 6:22 IST
ಫಾಲೋ ಮಾಡಿ
Comments

ಚಾಮರಾಜನಗರ: ಹುಲಿಗಳ ನಾಡು, ಮಲೆ ಮಾದಪ್ಪನ ನೆಲೆಬೀಡು, ಚೆಲುವ ಚಾಮರಾಜನಗರವು ಪ್ರಾಕೃತಿಕವಾಗಿ ಶ್ರೀಮಂತ ಜಿಲ್ಲೆ. ಹುಲಿ ಸಂರಕ್ಷಿತ ಅರಣ್ಯ, ವನ್ಯಧಾಮಗಳನ್ನು ಹೊಂದಿರುವ, ಅಪರೂಪದ ವನ್ಯಜೀವಿಗಳ ಆವಾಸಸ್ಥಾನ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ವಿಫುಲ ಅವಕಾಶಗಳಿದ್ದು ಈ ಕಾರ್ಯಕ್ಕೆ ಜಿಲ್ಲೆಯ ಜನರೂ ಭಾಗೀಧಾರರಾಗುವ ಅವಕಾಶ ದೊರೆತಿದೆ.

2047ರೊಳಗೆ ವಿಕಸಿತ ಭಾರತ ನಿರ್ಮಾಣ ಮಾಡುವ ಗುರಿ ಹೊಂದಿರುವ ಕೇಂದ್ರ ಸರ್ಕಾರ ದೇಶದ ಪ್ರವಾಸೋದ್ಯಮದ ಚಿತ್ರಣ ಬದಲಿಸಲು ವಿಶಿಷ್ಟ ಯೋಜನೆ ರೂಪಿಸಿದೆ. ‘ದೇಖೋ ಅಪ್ನಾ ದೇಶ್‌ ಪೀಪಲ್ಸ್‌ ಚಾಯ್ಸ್‌–2024’ ಶೀರ್ಷಿಕೆಯಡಿ ಅಭಿಯಾನ ಆರಂಭಿಸಿದೆ.

ಮಾರ್ಚ್‌ 7ರಿಂದ ಸೆ.15ರವರೆಗೆ ಏಕಕಾಲದಲ್ಲಿ ದೇಶದಾದ್ಯಂತ ನಡೆಯುವ ಅಭಿಯಾನದಲ್ಲಿ ಸಾರ್ವಜನಿಕರು ಭಾಗವಹಿಸಿ ನೆಚ್ಚಿನ ಪ್ರವಾಸಿತಾಣಗಳನ್ನು ಆಯ್ಕೆ ಮಾಡಿ ಮತ ಹಾಕಬಹುದು. https://innovateindia.mygov.in/dekho-apna-desh/ ಲಿಂಕ್ ಬಳಸಿ ಒಬ್ಬರು ಕನಿಷ್ಠ ಒಂದರಿಂದ ಗರಿಷ್ಠ ಮೂರು ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿ ಮತ ಹಾಕಬಹುದು.

ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪೂರಕವಾಗಿ ಸಲಹೆಗಳನ್ನೂ ನೀಡಲು ಅವಕಾಶವಿದೆ. ನಿರ್ಧಿಷ್ಟವಾಗಿ ಸ್ವಚ್ಛತೆ, ಸಾರಿಗೆ ಸೌಲಭ್ಯ, ಸುರಕ್ಷತೆ ಹಾಗೂ ಭದ್ರತೆ, ವಸತಿ ಸೌಲಭ್ಯ, ಹೋಟೆಲ್ ರೆಸ್ಟೋರೆಂಟ್‌ ಹಾಗೂ ಇತರೆ ಸೌಲಭ್ಯಗಳು ಬೇಕು ಎನಿಸಿದರೆ ಬೇಡಿಕೆ ಸಲ್ಲಿಸಬಹುದು.

ಐದು ವಿಭಾಗಗಳಲ್ಲಿ ಆಯ್ಕೆಗೆ ಅವಕಾಶ: ಧಾರ್ಮಿಕ, ಸಾಂಸ್ಕೃತಿಕ ಮತ್ತು ಪಾರಂಪರಿಕ, ಪ್ರಕೃತಿ ಮತ್ತು ವನ್ಯಜೀವಿ, ಅಡ್ವೆಂಚರ್ ಹಾಗೂ ಇತರೆ ತಾಣಗಳು ಸೇರಿದಂತೆ ಐದು ವಿಭಾಗಗಳಲ್ಲಿ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿ ವೋಟ್ ಮಾಡಬಹುದು. ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಸ್ಥಳೀಯರೂ ಭಾಗಿಧಾರಿಗಳಾಗಬಹುದು.

 ಜಿಲ್ಲೆಯಿಂದ 15 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದ್ದು ಇಲ್ಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಿಲ್ಲೆಯ  ತಾಣಗಳಿಗೆ ಮತ ಹಾಕಬೇಕು. ಪಟ್ಟಿಯಲ್ಲಿ ಇಲ್ಲದ ಕೆಲವು ಸ್ಥಳಗಳನ್ನು ಸೇರಿಸುವ ಕಾರ್ಯ ನಡೆದಿದೆ ಎಂದು  ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ (ಪ್ರಭಾರ) ವಿಜಯ್‌ ಕುಮಾರ ಮಾಹಿತಿ ನೀಡಿದರು.

ಧಾರ್ಮಿಕ ವಿಭಾಗದಲ್ಲಿ ದೇವಸ್ಥಾನ, ಚರ್ಚ್‌, ಮಸೀದಿ, ಪ್ರಸಿದ್ಧ ಯಾತ್ರಾಸ್ಥಳಗಳಿದ್ದರೆ, ಸಾಂಸ್ಕೃತಿಕ ಮತ್ತು ಪಾರಂಪರಿಕ ವಿಭಾಗದಲ್ಲಿ ಐತಿಹಾಸಿಕ ಕೋಟೆ, ಸ್ಮಾರಕ, ಅರಮನೆ, ಗುಹೆ, ಪ್ರತಿಮೆ, ಪಾರಂಪರಿಕ ಸ್ಥಳಗಳು ಇವೆ. ಪ್ರಕೃತಿ ಹಾಗೂ ವನ್ಯಜೀವಿ ವಿಭಾಗದಲ್ಲಿ ಬೀಚ್‌, ನದಿ, ಜಲಪಾತ, ಬೆಟ್ಟಗುಡ್ಡ, ರಾಷ್ಟ್ರೀಯ ಉದ್ಯಾನ, ವನ್ಯಜೀವಿ ಸಂರಕ್ಷಿತ ಅರಣ್ಯ, ಮೃಗಾಲಯ, ದ್ವೀಪಗಳ ಆಯ್ಕೆಗೆ ಅವಕಾಶ ನೀಡಲಾಗಿದೆ.‌

ಅಡ್ವೆಂಚರ್ ವಿಭಾಗದಲ್ಲಿ ಚಾರಣ, ಪಾದಯಾತ್ರೆ ತಾಣಗಳು, ಸ್ಕೂಬಾ ಡೈವಿಂಗ್‌, ಕಯಾಕಿಂಗ್‌ ಮಾಡುವ ಸ್ಥಳಗಳಿವೆ. ಇತರೆ ವಿಭಾಗದಲ್ಲಿ ಸುಂದರ ಹಾಗೂ ವಿಶೇಷವಾದ ಹಳ್ಳಿಗಳು, ವೆಲ್‌ನೆಸ್‌ ಕೇಂದ್ರಗಳು, ಧ್ಯಾನ ಮಂದಿರಗಳು ಸೇರಿದಂತೆ ಪ್ರವಾಸೋದ್ಯಮ ಸರ್ಕ್ಯೂಟ್‌ಗಳನ್ನು ಆಯ್ಕೆಮಾಡಿಕೊಳ್ಳುವ ಅವಕಾಶವಿದೆ.

ಪ್ರಯೋಜನ ಏನು? ಅಭಿಯಾನದಲ್ಲಿ ಅತಿಹೆಚ್ಚು ಮತಗಳನ್ನು ಪಡೆಯುವ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕೇಂದ್ರ ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಳ್ಳಲಿದೆ. ಆಯ್ಕೆಯಾದ ಪ್ರವಾಸಿ ತಾಣಗಳು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಹೊಂದಲಿದ್ದು ಸ್ಥಳೀಯವಾಗಿ ಉದ್ಯೋಗಗಳು ಸೃಷ್ಟಿಯಾಗಲಿವೆ ಎನ್ನುತ್ತಾರೆ ವಿಜಯ್‌ ಕುಮಾರ.

ಆಯ್ಕೆಯಾಗಿರುವ ಪ್ರವಾಸಿ ತಾಣಗಳು

ಮಲೆ ಮಹದೇಶ್ವರ ಬೆಟ್ಟ l ಹೊನ್ನಮಟ್ಟಿ ಅತ್ತಿಕಾಣೆ

ಅಮೃತೇಶ್ವರ ದೇವಸ್ಥಾನ l ಹೋಗೆನಕಲ್ ಫಾಲ್ಸ್‌

ಬಸವನಹಳ್ಳಿ ಕೆರೆ l ಭರಚುಕ್ಕಿ ಜಲಪಾತ

ಬಿಳಿಗಿರಿ ರಂಗನಬೆಟ್ಟ l ದೇವಿರಮ್ಮ ಬೆಟ್ಟ

ಚಿಕ್ಕಹೊಳೆ ಜಲಾಶಯ l ಆನೆ ಕ್ಯಾಂಪ್‌

ಬಂಡಿಪುರ ರಾಷ್ಟ್ರೀಯ ಉದ್ಯಾನ l ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ

ಗೋಪಿನಾಥಂ ಮಿಸ್ಟರಿ ಟ್ರೆಕ್ಕಿಂಗ್ ಕ್ಯಾಂಪ್‌

ದೊಂಡೆನ್ಲಿಂಗ್ ಟಿಬೇಟಿಯನ್ ಸೆಟಲ್‌ಮೆಟ್‌ ಒಡೆಯರ ಪಾಳ್ಯ

ಹಿಮವದ್ ಗೋಪಾಲಸ್ವಾಮಿ ಬೆಟ್ಟ

ವೋಟಿಂಗ್ ಮಾಡುವುದು ಹೇಗೆ ?

https://innovateindia.mygov.in/dekho-apna-desh/ ವೆಬ್‌ಸೈಟ್‌ಗೆ ಭೇಟಿನೀಡಿದ ಬಳಿಕ ಹೆಸರು, ಮೊಬೈಲ್ ಸಂಖ್ಯೆ, ಲಿಂಗ, ಇ ಮೇಲ್ ಐಡಿ, ರಾಜ್ಯ ಹಾಗೂ ಜಿಲ್ಲೆಯ ಮಾಹಿತಿ ನಮೂದಿಸಿ ಮೂರು ಪ್ರವಾಸಿತಾಣಗಳನ್ನು ಆಯ್ಕೆ ಮಾಡಿ ಮತ ಹಾಕಬಹುದು. ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಡಿಜಿಟಲ್ ರೂಪದ ಪ್ರಮಾಣಪತ್ರ ಲಭ್ಯವಾಗಲಿದ್ದು ಡೌನ್‌ ಲೋಡ್ ಮಾಡಿಕೊಳ್ಳಬಹುದು.

ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ‘ದೇಖೋ ಅಪ್ನಾ ದೇಶ್‌ ಪೀಪಲ್ಸ್‌ ಚಾಯ್ಸ್‌–2024 ಅಭಿಯಾನದಲ್ಲಿ ಭಾಗವಹಿಸಿ, ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ದಿಯಲ್ಲಿ ಪಾಲುದಾರರಾಗಲು ಇದು ಉತ್ತಮ ಅವಕಾಶ.
ವಿಜಯ್‌ ಕುಮಾರ ವಿ., ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ (ಪ್ರಭಾರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT