ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಕ್ಕೆಜೋಳ ಈಗ ಬೆಲೆ ಬಾಳುವ ಬೆಳೆ!

ಬರ: ಮೇವಿಗೆ ಬೇಡಿಕೆ, ಅನುಪಯುಕ್ತ ತೆನೆಗೂ ಉತ್ತಮ ಧಾರಣೆ
ನಾ.ಮಂಜುನಾಥಸ್ವಾಮಿ
Published 28 ಏಪ್ರಿಲ್ 2024, 5:44 IST
Last Updated 28 ಏಪ್ರಿಲ್ 2024, 5:44 IST
ಅಕ್ಷರ ಗಾತ್ರ

ಯಳಂದೂರು: ಬರದ ತೀವ್ರತೆ ಇನ್ನಿಲ್ಲದಂತೆ ಕಾಡುತ್ತಿದೆ. ಜಾನುವಾರು ಸಾಕಣೆದಾರರು ನೀರು ಮತ್ತು ಮೇವಿಗಾಗಿ ಪರದಾಡಬೇಕಾದ ಸ್ಥಿತಿಯಲ್ಲಿ ಇದ್ದಾರೆ. ಮಳೆ ಮತ್ತು ಅಂತರ್ಜಲ ಕೊರತೆಯಿಂದ ನೀರಾವರಿ ಪ್ರಮಾಣ ಕುಸಿದು, ಮೇವಿಗೆ ಈ ಸಲ ಹೆಚ್ಚು ಹಣ ಕೊಟ್ಟು ಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.  ಹೀಗಾಗಿ, ತ್ವರಿತಗತಿಯಲ್ಲಿ ಬೆಳೆಯುವ ದ್ವಿದಳ ಧಾನ್ಯದ ಬೆಳೆ ಮೆಕ್ಕೆಜೋಳದ ಫಸಲಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.

ತಾಲ್ಲೂಕಿನ ಸುಮಾರು 3000 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಕಡಿಮೆ ನೀರು ಮತ್ತು ಶೀಘ್ರ ಬೆಳವಣಿಗೆ ಇರುವ ತಳಿಗಳತ್ತ ರೈತರು ಹೆಚ್ಚಿನ ಒತ್ತು ನೀಡಿದ್ದಾರೆ. ಮೂರು ತಿಂಗಳಿಗೂ ಮೊದಲು ಕಟಾವಿಗೆ ಬರುವ ಜೋಳದ ತಾಕನ್ನು ಪಶು ಆಹಾರಕ್ಕೆ ಮಾರಾಟ ಮಾಡುವ ಮೂಲಕ ಕೃಷಿಕರು ಅಲ್ಪ ಆದಾಯ ಪಡೆಯುತ್ತಿದ್ದಾರೆ.  

‘ಗ್ರಾಮೀಣ ಆರ್ಥಿಕತೆಯ ಮೂಲವಾದ ಜಾನುವಾರುಗಳಿಗೆ ಹಸಿರು ಮೇವು ಅತ್ಯಗತ್ಯ. ಮಳೆ ಇಲ್ಲದ ಕಾರಣ ಹುಲ್ಲು, ಕಬ್ಬಿನ ಸೋಗೆ ಅಷ್ಟಾಗಿ ಒದಗುತ್ತಿಲ್ಲ. ಹಾಗಾಗಿ,  ಸುತ್ತಮುತ್ತಲ ಜಿಲ್ಲೆಗಳ ಬರಪೀಡಿತ ಪ್ರದೇಶಗಳ ಪಶುಪಾಲಕರು, ಸಾಗುವಳಿ ದಾರರಿಂದ ನೇರವಾಗಿ ಖರೀದಿಗೆ ಮುಂದಾಗಿದ್ದು, ಎರಡು ಇಲ್ಲವೇ ಮೂರು ತಿಂಗಳ ಬೆಳೆಯನ್ನು ಖರೀದಿಸುತ್ತಿದ್ದಾರೆ’ ಎಂದು ಕೃಷಿಕ ಮಲ್ಲಿಗೆಹಳ್ಳಿ ನಂಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. 

ಫೆಬ್ರುವರಿ-ಏಪ್ರಿಲ್ ನಡುವೆ ಮೇವಿಗೆ ಬೇಡಿಕೆ ಹೆಚ್ಚಾಗಿದೆ. ಈ ಅವಧಿಯಲ್ಲಿ ವಾತಾವರಣದಲ್ಲಿ ಹಸಿರು ಪರಿಸರ ಕಡಿಮೆಯಾಗಿದೆ. ಒಣ ಮೇವು ಮತ್ತು ಹಸಿರು ಹುಲ್ಲು ಸಂಗ್ರಹಿಸುವ ಅಂತರದಲ್ಲಿ ವ್ಯತ್ಯಯವಾಗಿದೆ. ಭತ್ತದ ವಿಸ್ತೀರ್ಣವೂ ಕುಗ್ಗಿದೆ. ಏಕದಳ ಬೆಳೆ ಕಡಿಮೆಯಾಗಿ, ವಾಣಿಜ್ಯ ಕೃಷಿಗೆ ಒತ್ತು ನೀಡಿದ ಪರಿಣಾಮ ಮೇವು ಸಂಗ್ರಹವೂ ಕುಸಿದಿದೆ. ವಿದ್ಯುತ್ ವ್ಯತ್ಯಯದಿಂದ ಬೆಳೆ ಗುಣಮಟ್ಟವೂ ಕಡಿಮೆಯಾಗಿದೆ. ಹಾಗಾಗಿ, ಮೇವಿನ ಸಂಗ್ರಹ ಕಡಿಮೆ ಇದ್ದು, ಜಾನುವಾರುಗಳಿಗೆ ಹೆಚ್ಚಿನ ಹಣ ಕೊಟ್ಟು ಕೊಳ್ಳಬೇಕಾದ ಸ್ಥಿತಿ ತಲುಪಿದೆ’ ಎಂದು ಪ್ರಗತಿಪರ ಕೃಷಿಕ ಪ್ರದೀಪನಾಯಕ್ ತಿಳಿಸಿದರು. 

ತೆನೆಗೂ ಬೇಡಿಕೆ

ಒಂದು ಟನ್ ಮೆಕ್ಕೆಜೋಳಕ್ಕೆ ಧಾರಣೆ ₹1800 ರಿಂದ ₹2300ರವರೆಗೆ ಇದೆ. ಬೆಳೆಯಲ್ಲಿ ಹಸಿರು ಹೆಚ್ಚಿದ್ದರೆ ಬೆಲೆ ಏರುತ್ತದೆ. ಈಗ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಸುತ್ತಮುತ್ತಲ ಪಶುಪಾಲಕರು ಹೆಚ್ಚಿನ ಮೇವು ಖರೀದಿಸುತ್ತಿದ್ದು ಬೆಲೆ ಮತ್ತು ಬೇಡಿಕೆ ಹೆಚ್ಚಲು ಕಾರಣವಾಗಿದೆ. ಈಚೆಗೆ ಜೋಳಕ್ಕೂ ಬೆಲೆ ಇದೆ. ಕೆಲ ರೈತರು ಸಸಿಗಳು ಬಲಿಯುವ ತನಕ ಕಾಯ್ದಿದ್ದು ಜೋಳ ಕಟಾವು ಮಾಡುತ್ತಾರೆ. ನಂತರ ಕಾಳು ತೆಗೆದ ತೆನೆಯನ್ನು ಮಾರಾಟ ಮಾಡುತ್ತಾರೆ. ಎಕರೆ ಪ್ರದೇಶದಲ್ಲಿನ ಅನುಪಯುಕ್ತ ತೆನೆಗಳಿಗೆ ₹2000ದಿಂದ ₹3000ವರೆಗೂ ಬೆಲೆ ಇದೆ’ ಎಂದು ವ್ಯಾಪಾರಿ ಪಾಂಡುಪುರದ ನಾರಾಯಣ ‘ಪ್ರಜಾವಾಣಿ’ಗೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT