ಸೋಮವಾರ, ಜೂನ್ 21, 2021
29 °C
ಬೇಸಿಗೆಯಲ್ಲಿ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವ ಜನ

ಕೊಳ್ಳೇಗಾಲ: ಬಿಸಿಲಿನ ಝಳ- ಮಡಕೆಗೆ ಹೆಚ್ಚಿದ ಬೇಡಿಕೆ

ಅವಿನ್ ಪ್ರಕಾಶ್ ವಿ. Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಬೇಸಿಗೆಯಲ್ಲಿ ಬಿಸಿಲಿನ ಝಳ ಹೆಚ್ಚಾಗುತ್ತಿದ್ದಂತೆಯೇ, ಮಣ್ಣಿನ ಮಡಕೆಗಳಿಗೆ ಬೇಡಿಕೆ ಬಂದಿದೆ.

ಮಡಕೆಯನ್ನು ಬಡವರ ಫ್ರಿಡ್ಜ್ ಎಂದು ಕರೆಯುವ ರೂಢಿ ಇದೆ. ಜನರು ಮಣ್ಣಿನ ಪಾತ್ರೆಗಳಲ್ಲಿ ನೀರನ್ನು ಸಂಗ್ರಹಿಸುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಮಡಕೆಯಲ್ಲಿಟ್ಟ ನೀರು ತಂಪಾಗಿರುವುದರಿಂದ ಬೇಸಿಗೆಯ ಆಯಾಸ ನೀಗಬಲ್ಲದು. ಈ ಉದ್ದೇಶಕ್ಕಾಗಿಯೇ ಜನರು ಮಣ್ಣಿನ ಹೂಜಿ, ಮಡಕೆಗಳನ್ನು ಖರೀದಿಸುತ್ತಿದ್ದಾರೆ.

ನಗರದ ದೊಡ್ಡ ಮಸೀದಿ ರಸ್ತೆ, ಚಿಕ್ಕ ಅಂಗಡಿ ಬೀದಿ, ಗಾಣಿಗರ ಬೀದಿಗಳಲ್ಲಿ ಮಡಕೆ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಒಂದು ಮಡಕೆಗೆ ₹100 ರಿಂದ ₹200 ವರೆಗೂ ಬೆಲೆ ಇದೆ.

ತಾಲ್ಲೂಕಿನ ಮುಳ್ಳೂರು, ಉತ್ತಂಬಳ್ಳಿ, ಧನಗೆರೆ ಸೇರಿದಂತೆ ಅನೇಕ ಅಕ್ಕ ಪಕ್ಕದ ಹಳ್ಳಿಗಳಲ್ಲಿ ಈ ಮಡಕೆಗಳು ತಯಾರಾಗುತ್ತವೆ.

ಬೇಸಿಗೆಯಲ್ಲಿ ನೀರನ್ನು ತಣ್ಣಗೆ ಇಡಬಲ್ಲ ಸಾಂಪ್ರದಾಯಕ ಸಾಧನ ಮಡಕೆ. ಹಿಂದಿನ ಕಾಲದಲ್ಲಿ ಪ್ರತಿಯೊಂದು ಹಳ್ಳಿಗಳಲ್ಲೂ ಕುಂಬಾರಿಕೆ ನಡೆಯುತ್ತಿತ್ತು. ಆಗ ಮನೆಗೆ ಅಗತ್ಯವಿರುವ ಮಣ್ಣಿನ ಪಾತ್ರೆಗಳನ್ನು ಕುಂಬಾರರಿಂದ ನೇರವಾಗಿ ಖರೀದಿಸಿ ತಂದು ಬಳಸಲಾಗುತ್ತಿತ್ತು. ಬದಲಾದ ಪರಿಸ್ಥಿತಿಯಲ್ಲಿ ಕುಂಬಾರಿಕೆ ವೃತ್ತಿ ಮಹತ್ವ ಕಳೆದುಕೊಂಡಿದೆ. ಹಾಗಿದ್ದರೂ, ಬೇಸಿಗೆಯಲ್ಲಿ ಮಡಕೆಗಳ ಬೇಡಿಕೆ ಕಡಿಮೆಯಾಗುವುದಿಲ್ಲ. ಬಿಸಿಲು ಹೆಚ್ಚಾಗಿರುವುದರಿಂದ ಮಡಕೆ ಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ’ ಎಂದು ಮಡಕೆ ವ್ಯಾಪಾರಿ ಸಮೀಉಲ್ಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಹಿಂದಿನ ಕಾಲದಲ್ಲಿ ತಟ್ಟೆ, ಲೋಟ, ಮುಚ್ಚಳ ಸೇರಿದಂತೆ ಅಡುಗೆ ಮಾಡಲು ಮಣ್ಣಿನ ಪಾತ್ರೆಗಳನ್ನೇ ಬಳಸುತ್ತಿದ್ದರು. ಈಗ ಇವುಗಳನ್ನು ಬಳಸುವವರು ಬೆರಳೆಣಿಯಕಷ್ಟು ಜನರು ಮಾತ್ರ. ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿ ತಿಂದರೆ ಅನಾರೋಗ್ಯ ಬರುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಆದರೆ ಈಗ ಯಾರೂ ಬಳಸುವುದಿಲ್ಲ. ಕೆಲವರು ಈಗಲೂ ಮಣ್ಣಿನ ಮಡಕೆಯಲ್ಲೇ ರಾಗಿ ಮುದ್ದೆ ಮಾಡುತ್ತಾರೆ’ ಎಂದು ಹೇಳುತ್ತಾರೆ ವ್ಯಾಪಾರಿಗಳು.  

‘ಬೇಸಿಗೆಯಲ್ಲಿ ಮಾತ್ರ ಮಡಕೆಗಳಿಗೆ ಬೇಡಿಕೆ ಬರುತ್ತದೆ. ಉಳಿದಂತೆ ದೇವರ ಗುಡ್ಡ ಬಿಡಿಸುವ ಸಂದರ್ಭ ಹೊಸ ಮನೆಗೆ ತೆರಳುವ ಸಂದರ್ಭ ಸೇರಿದಂತೆ ಕೆಲ ಹಬ್ಬಗಳಿಗೆ ಮಾತ್ರ ಜನರು ಮಡಕೆ ಕೇಳುತ್ತಾರೆ’ ಎಂದು ವ್ಯಾಪಾರಿ ಗೌರಮ್ಮ ಅವರು ಹೇಳಿದರು. 

‘ನಮ್ಮ ಮನೆಯಲ್ಲಿ ಫ್ರಿಡ್ಜ್ ಇದೆ. ಆದರೂ ಬೇಸಿಗೆ ಕಾಲದಲ್ಲಿ ನಾವು ಮಡಕೆಯಲ್ಲಿಟ್ಟ ನೀರನ್ನೇ ಸೇವಿಸುತ್ತೇವೆ’ ಎಂದು ದೇವಾಂಗ ಪೇಟೆ ನಿವಾಸಿ ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು