ಮಂಗಳವಾರ, ಮಾರ್ಚ್ 28, 2023
22 °C

ಚಾಮರಾಜನಗರ: ರಸ್ತೆಗೆ ಪುನೀತ್‌ ಹೆಸರಿಡಲು ಒತ್ತಾಯಿಸಿ ಮೌನ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಡೀವಿಯೇಷನ್‌ ರಸ್ತೆಗೆ ಇತ್ತೀಚೆಗೆ ನಿಧನರಾಗಿರುವ ನಟ, ಚೆಲುವ ಚಾಮರಾಜನಗರ ರಾಯಭಾರಿ ಪುನೀತ್ ರಾಜ್ ಕುಮಾರ್ ಅವರ ಹೆಸರು ಹಾಗೂ ಜಿಲ್ಲಾಡಳಿತ ಭವನದ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಕಲಾಮಂದಿರಕ್ಕೆ ಡಾ.ರಾಜ್ ಕುಮಾರ್ ಅವರ ಹೆಸರು ಇಡುವಂತೆ ಒತ್ತಾಯಿಸಿ ಒತ್ತಾಯಿಸಿ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಗರದಲ್ಲಿ ಮೌನ ಮೆರವಣಿಗೆ ನಡೆಯಿತು. 

ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಸೇರಿದ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗ, ಆಜಾದ್ ಹಿಂದೂ ಸೇನೆ, ಅಂಬೇಡ್ಕರ್ ಸೇನೆ, ವೀರಶೈವ ಮಹಾಸಬಾ, ಭಾರತೀಯ ಪರಿವರ್ತನಾ ಸಂಘ, ಅಪ್ಪುಬ್ರಿಗೇಡ್, ಶಿವಸೈನ್ಯ, ಕನ್ನಡಪರ ಸಂಘಟನೆಗಳ ಒಕ್ಕೂಟ, ಡಾ.ರಾಜ್ ಅಭಿಮಾನಿಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಭುವನೇಶ್ವರಿ ವೃತ್ತ ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನದವರೆಗೆ ಮೌನ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರಿ ಸಂಸ್ಥೆಯ ಸಿ.ಎಂ.ವೆಂಕಟೇಶ್‌, ಸಿಂಹ ಮೂವಿಪ್ಯಾರೆಡೈಸ್‌ನ ಮಾಲೀಕ ಜಯಸಿಂಹ, ‌ಆಜಾದ್‌ ಹಿಂದೂ ಸೇನೆಯ ಅಧ್ಯಕ್ಷ ಎಂ.ಎಸ್‌.ಪೃಥ್ವಿರಾಜ್‌ ಸೇರಿದಂತೆ ಇತರರು, ‘ಪುನೀತ್‌ ರಾಜ್‌ಕುಮಾರ್‌ ಅವರು ಚಾಮರಾಜನಗರದ ಸುಪುತ್ರ. ಚೆಲುವ ಚಾಮರಾಜನಗರದ ರಾಯಭಾರಿಯಾಗಿದ್ದರು.  ಒಬ್ಬ ನಟರಾಗಿ ಸಮಾಜಸೇವಕರಾಗಿ ಜನ ಮನ್ನಣೆ ಪಡೆದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಮೈಸೂರಿನ ಶಕ್ತಿಧಾಮ ಸೇರಿದಂತೆ ಅನೇಕ ವೃದ್ಧಾಶ್ರಮ, ಅನಾಥಾಶ್ರಮ, ಸೇವಾ ಸಂಸ್ಥೆಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿಯೇ ನಡೆಸಿಕೊಂಡು ಬಂದಿದ್ದಾರೆ. 1826 ವಿದ್ಯಾರ್ಥಿಗಳ ವಿದ್ಯಾಬ್ಯಾಸದ ಹೊಣೆಯನ್ನೂ ಹೊತ್ತುಕೊಂಡಿದ್ದರು.  ರೈತರಿಗೆ ಅನುಕೂಲವಾಗಲೆಂದು ಉಚಿತವಾಗಿ ಕೆಎಂಎಫ್ ಪ್ರಚಾರ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ. ಅನೇಕ ಮಂದಿಗೆ ಶಸ್ತ್ರಚಿಕಿತ್ಸೆಗಳಿಗಾಗಿ ಹಣಕಾಸಿನ ನೆರವನ್ನೂ ನೀಡಿದ್ದಾರೆ’ ಎಂದರು. 

‘ಎಡಗೈಲಿ ಕೊಟ್ಟದ್ದು, ಬಲಗೈಗೆ ತಿಳಿಯಬಾರದು ಎಂಬಂತೆ ಪುನೀತ್‌ ರಾಜ್‌ಕುಮಾರ್‌ ಅವರು ಜೀವನದುದ್ದಕ್ಕೂ ನಡೆದುಕೊಂಡು ಬಂದಿದ್ದಾರೆ. ಅವರು ಜಿಲ್ಲೆಯವರಾಗಿರುವುದು ನಮ್ಮ ಹೆಮ್ಮೆ. ಅವರ ಹೆಸರನ್ನು ಅಜರಾಮರವಾಗಿಸಲು, ಮೈಸೂರು ರಸ್ತೆಯ ಸ್ವಾಗತ ಕಮಾನಿನಿಂದ ಡೀವಿಯೇಷನ್ ರಸ್ತೆಯ ಮೂಲಕ ಸುಲ್ತಾನ್ ಷರೀಫ್ ವೃತ್ತದಿಂದ ಸೋಮವಾರಪೇಟೆ ನಗರಸಭೆ ಕಮಾನಿನವರೆಗೆ ಇರುವ ರಸ್ತೆಯನ್ನು ಪುನೀತ್ ರಾಜ್‍ಕುಮಾರ್ ಹೆದ್ದಾರಿ ಎಂದು ನಾಮಕರಣ ಮಾಡಬೇಕು’ ಎಂದು ಒತ್ತಾಯಿಸಿದರು. 

ಕಲಾಮಂದಿರಕ್ಕೆ ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು. 

ನಂತರ ನಗರಸಭೆ ಕಚೇರಿಯಲ್ಲಿ ನಗರಸಭೆ ಅಧ್ಯಕ್ಷೆ ಆಶಾ ಹಾಗೂ ಆಯುಕ್ತ ಕರಿಬಸಯ್ಯ ಅವರನ್ನು ಭೇಟಿಯಾಗಿಯೂ ಮನವಿ ಸಲ್ಲಿಸಿದರು. 

ನಗರಸಭಾ ಸದಸ್ಯ ಶಿವರಾಜ್, ಮುಖಂಡರಾದ ಸುರೇಶ್ ನಾಯಕ, ಸಿ.ಎ.ಮಹದೇವಶೆಟ್ಟಿ, ಗಾಯಕ ಸಿ.ಎಂ.ನರಸಿಂಹಮೂರ್ತಿ, ಭಾರತೀಯ ಪರಿವರ್ತನಾ ಸಂಘದ ಅಧ್ಯಕ್ಷ ಆಲೂರುಮಲ್ಲು, ಮಾರ್ಕೆಟ್ ಗಿರೀಶ್, ಅಜಾದ್ ಹಿಂದೂ ಸೇನೆಯ ಜಿಲ್ಲಾಧ್ಯಕ್ಷ  ಶಿವುವಿರಾಟ್, ಗೌರವ ಅಧ್ಯಕ್ಷ ಚಂದ್ರಶೇಖರ್, ಟೌನ್ ಅಧ್ಯಕ್ಷ ಶಿವು, ಅಭಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಪುನೀತ್ ಅಭಿಮಾನಿ ಬಳಗದ ನವೀನ್ ಕ್ವಾಲಿಟಿ,  ಅಜಯ್, ನಟರಾಜು, ಬುಲೆಟ್ ಚಂದ್ರು, ನಗು, ಬಾಬು, ವಾಸು, ಅಂಬೇಡ್ಕರ್ ಸೇನೆಯ ಅಧ್ಯಕ್ಷ ಗಣೇಶ್ ಪ್ರಸಾದ್ , ನಟ, ವೆಂಕಿ, ಮಹೇಶ್ ಮಾರ್ ಕಟ್, ಕ್ಯಾಂಟೀನ್ ಮಂಜು, ನಟರಾಜು ಇತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು