ಸೋಮವಾರ, ಜನವರಿ 18, 2021
27 °C

ಚಾಮುಲ್ ಸೂಪರ್ ಸೀಡ್‌ಗೆ ಸಿ.ಎಂಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲಾ ಹಾಲು ಒಕ್ಕೂಟದಲ್ಲಿ (ಚಾಮುಲ್) ಇತ್ತೀಚೆಗೆ ನಡೆಸಲಾಗಿರುವ ನೇಮಕಾತಿಯಲ್ಲಿ ಕೊಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವುದರಿಂದ ಒಕ್ಕೂಟವನ್ನು ಸೂಪರ್ ಸೀಡ್ ಮಾಡಬೇಕು ಎಂದು ಜಿಲ್ಲಾ ಅಭಿವೃದ್ದಿ ಹೋರಾಟ ಸಮಿತಿಯು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದೆ.

ಇತ್ತೀಚೆಗೆ ಮುಖ್ಯಮಂತ್ರಿ ಅವರು ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಮಿತಿಯ ಗೌರವ ಅಧ್ಯಕ್ಷ ವೆಂಕಟರಮಣ ಸ್ವಾಮಿ (ಪಾಪು) ಹಾಗೂ ಅಧ್ಯಕ್ಷ ಕೆ.ವೀರಭದ್ರಸ್ವಾಮಿ ಅವರು ಮನವಿ ಸಲ್ಲಿಸಿದ್ದಾರೆ.

‘ಕುದೇರಿನಲ್ಲಿರುವ ಹಾಲು ಒಕ್ಕೂಟದಲ್ಲಿ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳದೆ ₹10 ಕೋಟಿಗೂ ಹೆಚ್ಚು ಅವ್ಯವಹಾರ ನಡೆಸಲಾಗಿದೆ. ಆನ್ ಲೈನ್ ಮೂಲಕ 4,892 ಅರ್ಜಿಗಳನ್ನು ಸ್ವೀಕರಿಸಿ 3,124 ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ 72 ಹುದ್ದೆಗಳನ್ನು ತುಂಬಲು ಒಬ್ಬರಿಂದ ₹30ರಿಂದ ₹40 ಲಕ್ಷ ಹಣ ಪಡೆದು ನೇಮಕಾತಿ ಮಾಡಲಾಗಿದೆ. ಇದರಿಂದ ಸಾವಿರಾರು ಜನ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಹಿಂದಿನ ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ತನಿಖೆ ನೆಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ ಈವರೆಗೂ ತಪ್ಪಿತಸ್ಥರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ' ಎಂದು ಮನವಿಯಲ್ಲಿ ದೂರಲಾಗಿದೆ. 

‘ಲಿಖಿತ ಪರೀಕ್ಷೆಯನ್ನು ಜಿಲ್ಲಾ ಕೇಂದ್ರದಲ್ಲಿ ನಡೆಸದೇ ಮಂಗಳೂರು ವಿವಿಯಲ್ಲಿ ನಡೆಸಿದ್ದು, ಅಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರಲಿಲ್ಲ. ಮೀಸಲಾತಿಗೆ ಅನುಗುಣವಾಗಿ ನೇಮಕಾತಿ ನಡೆಸದೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲರಿಗೆ ವಂಚನೆ ಮಾಡಲಾಗಿದೆ’ ಸಮಿತಿ ಆರೋಪಿಸಿದೆ. 

‘ಚಾಮುಲ್‌ನಲ್ಲಿ ಕಾಂಗ್ರೆಸ್‌ ಆಡಳಿತ ನಡೆಸುತ್ತಿದ್ದು, ಭ್ರಷ್ಟಾಚಾರ ನಡೆಸುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಹಾಗೂ ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕು’ ಸಮಿತಿ ಮನವಿ ಮಾಡಿದೆ. 

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಯಡಿಯೂರಪ್ಪ ಅವರು ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದು ಸಮಿತಿ ತಿಳಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು