ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಡೆಂಗಿ ಹಾವಳಿಗೆ ಜನ ಭಯಭೀತ

Published 6 ಅಕ್ಟೋಬರ್ 2023, 5:20 IST
Last Updated 6 ಅಕ್ಟೋಬರ್ 2023, 5:20 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿದೆ

ಹೆಚ್ಚು ಮಳೆಯಾಗದ ಕಾರಣ ಸೊಳ್ಳೆಗಳು ಹಾವಳಿ ತೀವ್ರವಾಗಿದ್ದು, ಸೊಳ್ಳೆ ಕಾಟ ಹೆಚ್ಚಿರುವ ಪ್ರದೇಶಗಳಲ್ಲಿ ಡೆಂಗಿ ಪ್ರಕರಣಗಳು ವರದಿಯಾಗುತ್ತಿವೆ. ಮಕ್ಕಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದೆ. 

ಹತ್ತು ದಿನಗಳ ಅವಧಿಯಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಗರದ ಉಪವಿಭಾಗ ಆಸ್ಪತ್ರೆ ಹಾಗೂ ನಗರದ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳ ಮುಂದೆ ಜನರ ಸಾಲು ಕಂಡು ಬರುತ್ತಿದ್ದಾರೆ. 

ಮಂಗಳವಾರ ಒಂದೇ ದಿನ ಉಪವಿಭಾಗ ಆಸ್ಪತ್ರೆಯಲ್ಲಿ ಮೂರು ಡೆಂಗಿ ಪ್ರಕರಣಗಳು ವರದಿಯಾಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ದೃಢಪಟ್ಟ ಪ್ರಕರಣಗಳು ಮಾತ್ರ ಸಿಗುತ್ತಿದ್ದು, ಖಾಸಗಿ ಆಸ್ಪತ್ರೆಗಳ ಪ್ರಕರಣಗಳು ವರದಿಯಾಗುತ್ತಿಲ್ಲ.

ಮನೆ ಮನೆಗಳಲ್ಲಿ ಜ್ವರ: ನಗರಸಭೆ ವ್ಯಾಪ್ತಿಯ ಅನೇಕ ವಾರ್ಡ್‌ಗಳಲ್ಲಿ ಮನೆ ಮನೆಗಳಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ಜ್ವರ, ಶೀತ, ಕೆಮ್ಮು ನೆಗಡಿಯಿಂದ ಬಳಲುತ್ತಿದ್ದಾರೆ.

ಕೆಲವರು ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಬರುತ್ತಿದ್ದರೆ, ಇನ್ನೂ ಕೆಲವರು ಕ್ಲಿನಿಕ್‌, ಖಾಸಗಿ ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ.

ಗ್ರಾಮೀಣಾ ಭಾಗಗಳಲ್ಲೂ ಇದೇ ಪರಿಸ್ಥಿತಿ ಇದೆ. ಜ್ವರ ಬಂದೊಡನೆಯೇ ಜ್ವರ ಮಾತ್ರೆ ತೆಗೆದುಕೊಂಡು ವಿಶ್ರಾಂತಿ ಪಡೆಯುತ್ತಿದ್ದಾರೆ.

‘ಆರೋಗ್ಯ ಇಲಾಖೆಯವರು ಪ್ರತಿ ಮನೆಮನೆಗೂ ಹೋಗಿ ಅಥವಾ ಬಡಾವಣೆಗಳಿಗೆ ಹೋಗಿ ಡೆಂಗಿ ಬಗ್ಗೆ ಜಾಗೃತಿ ಮೂಡಿಸಬೇಕು. ಆ ಕೆಲಸ ಆಗುತ್ತಿಲ್ಲ. ನಗರದ ನೂರ್  ಮೋಹಲ್ಲಾ  ಬಡಾವಣೆಯಲ್ಲಿ 9  ವರ್ಷದ ಮಗು ಡೆಂಗಿಯಿಂದ ಮೃತಪಟ್ಟಿದೆ ಎಂದು ಬಡಾವಣೆಯ ನಿವಾಸಿಗಳು ಹೇಳುತ್ತಿದ್ದಾರೆ. ಆದರೆ ಆರೋಗ್ಯ ಇಲಾಖೆ ಇದನ್ನು ದೃಢಪಡಿಸುತ್ತಿಲ್ಲ’ ಎಂದು ಬಡಾವಣೆಯ ನಿವಾಸಿ ಎಜಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರಸಭೆ ನಿರ್ಲಕ್ಷ್ಯ: ನಗರದ ನೂರ್‌ ಮೊಹಲ್ಲಾ, ಭೀಮನಗರ, ಮೋಳೆ ಸೇರಿದಂತೆ ಇನ್ನೂ ಕೆಲವು ಕಡೆಗಳಲ್ಲಿ ಡೆಂಗಿ ಪ್ರಕರಣಗಳು ದೃಢಪಟ್ಟಿವೆ. 

ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ನಗರ ವ್ಯಾಪ್ತಿಯಲ್ಲಿ ಅನೈರ್ಮಲ್ಯ ಇರುವುದರಿಂದ ಸೊಳ್ಳೆ ಉತ್ಪತ್ತಿ ಜಾಸ್ತಿಯಾಗಿದೆ. ಸ್ವಚ್ಛತೆ ಕಾಪಾಡಲು, ಸೊಳ್ಳೆಗಳ ಉತ್ಪತ್ತಿಯಾಗದಂತೆ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಮತ್ತು ನಗರಸಭೆ ವಿಫಲವಾಗಿದೆ ಎಂಬುದು ಸಾರ್ವಜನಿಕರ ದೂರು. 

‘ನಗರದ ಬಡಾವಣೆಗಳು ಸ್ವಚ್ಛವಾಗಿಲ್ಲ. ಹಲವು ಕಡೆ ಕಸಗಳು ಬಿದ್ದಿವೆ. ಇನ್ನೂ ಕೆಲವೆಡೆ ತ್ಯಾಜ್ಯಗಳು ಕೊಳೆತು ಗಬ್ಬುನಾರುತ್ತಿವೆ. ಇದರಿಂದ ಸೊಳ್ಳೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ಸ್ವಚ್ಛ ಮಾಡುವಲ್ಲಿ ನಗರಸಭೆ ವಿಫಲವಾಗಿದೆ. ಸೊಳ್ಳೆ ನಿಯಂತ್ರಿಸಬೇಕಾದರೆ ನಗರಸಭೆಯವರು ಫಾಗಿಂಗ್ ಮಾಡಿಸಲು ಮುಂದಾಗಬೇಕು. ಇಲ್ಲದಿದ್ದರೆ ಪ್ರಕರಣ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ’ ಎಂದು ನೂರ್ ಮೊಹಲ್ಲ ಬಡಾವಣೆಯ ನಿವಾಸಿ ಮಹಮ್ಮದ್ ಮನ್ಸೂರ್ ಪ್ರಜಾವಾಣಿಗೆ ತಿಳಿಸಿದರು.

ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಔಷಧಿಗಳೂ ಇವೆ. ಜನರು ಆತಂಕ ಪಡಬೇಕಾಗಿಲ್ಲ.
ಡಾ.ರಾಜಶೇಖರ್ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ
‘ಭಯಪಡುವ ಅಗತ್ಯವಿಲ್ಲ’
ಡೆಂಗಿ ಬಗ್ಗೆ ಜನರು ಭಯಪಡಬೇಕಾಗಿಲ್ಲ. ಮುನ್ನೆಚ್ಚರಿಕೆ ವಹಿಸಬೇಕು. 7ರಿಂದ 10 ದಿನಗಳ ಕಾಲ ಜ್ವರ ಕಾಡಬಹುದು. ಡೆಂಗಿಗೆ ಈಗ ಔಷಧಿ ಇದೆ. ಹೆಚ್ಚು ವಿಶ್ರಾಂತಿ ಪಡೆಯಬೇಕು. ಜ್ವರ ಇದ್ದವರು ಹೆಚ್ಚು ನೀರು ಮೃದು ಆಹಾರವನ್ನು ಸೇವಿಸಬೇಕು ಎಂದು ಸರ್ಕಾರಿ ಉಪವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಜ್ವರಕ್ಕೆ ತುತ್ತಾದ ಪ್ರಾರಂಭದ ದಿನಗಳಲ್ಲಿ ರೋಗ ಲಕ್ಷಣಗಳು ಕಂಡುಬರುವುದಿಲ್ಲ. 4ರಿಂದ 7 ದಿನಗಳ ನಂತರ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ. ತಲೆನೋವು ಮೈ-ಕೈ ನೋವು ಕೀಲುನೋವು ವಾಂತಿ ಕಣ್ಣುಗಳ ಹಿಂಭಾಗದಲ್ಲಿ ನೋವು ಮತ್ತು ದೇಹದ ಮೇಲೆ ಕಲೆಗಳು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣ. ಈ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು.  ಮನೆಗಳಲ್ಲಿ  ಸೊಳ್ಳೆಗಳನ್ನು ನಿಯಂತ್ರಿಸಿ ಸೊಳ್ಳೆ ಕಚ್ಚದಂತೆ ಎಚ್ಚರವಹಿಸಿಬೇಕು. ಎಲ್ಲ ಸಮಯದಲ್ಲೂ ಶುದ್ಧ ಹಾಗೂ ಬಿಸಿ ನೀರನ್ನು ಕುಡಿಯಬೇಕು’ ಎಂದು ಅವರು ಸಲಹೆ ನೀಡಿದರು.  
ಡೆಂಗಿ ಪ್ರಕರಣಗಳು ಹೆಚ್ಚಾಗಿರುವುದು ನಿಜ. ಯಾರೂ ಭಯಪಡುವ ಅಗತ್ಯವಿಲ್ಲ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು.
ಡಾ.ಗೋಪಾಲ್ ತಾಲ್ಲೂಕು ವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT