ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ರೈತರ ಸಂಘಟಿಸಿದ ಕೀರ್ತಿ ಪ್ರೊ.ಎಂಡಿಎನ್‌ಗೆ: ರವಿವರ್ಮಕುಮಾರ್‌

ಚಾಮರಾಜನಗರ: ರಾಜ್ಯದ ರೈತ ಚಳವಳಿ, ರೈತನಾಯಕನ ಯಶೋಗಾಥೆ ತೆರೆದಿಟ್ಟ ‘ಡೈರೆಕ್ಸ್‌ ಆಕ್ಷನ್‌’
Published 4 ಫೆಬ್ರುವರಿ 2024, 15:41 IST
Last Updated 4 ಫೆಬ್ರುವರಿ 2024, 15:41 IST
ಅಕ್ಷರ ಗಾತ್ರ

ಚಾಮರಾಜನಗರ: ‘ಪ್ರಪಂಚದಲ್ಲಿ ರೈತರು ಸಂಘಟಿತರಾಗಿದ್ದಾರೆ ಎಂದರೆ, ಅದರ ಕೀರ್ತಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರಿಗೆ ಸಲ್ಲಬೇಕು. ಅವರಿಗೆ ಹೋರಾಟವನ್ನು ರೂಪಿಸುವ ಶಕ್ತಿ ಇತ್ತು’ ಎಂದು ಹೈಕೋರ್ಟ್‌ ವಕೀಲ ಹಾಗೂ ನಂಜುಂಡಸ್ವಾಮಿಯವರ ಒಡನಾಡಿ ಪ್ರೊ.ರವಿವರ್ಮಕುಮಾರ್‌ ಹೇಳಿದರು. 

ನಗರದ ವರನಟ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಶನಿವಾರ ಸಂಹೆ ರಂಗತರಂಗ ಟ್ರಸ್ಟ್‌, ಶಾಂತಲಾ ಕಲಾವಿದರು, ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 20ನೇ ಸಂಸ್ಮರಣೆ, ‘ಡೈರೆಕ್ಟ್ ಆಕ್ಷನ್’ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಸಂಘಟನೆ ಬೇಕು ಎಂದು ಮೊಟ್ಟ ಮೊದಲು ಕರೆಕೊಟ್ಟವರು ನಂಜುಂಡಸ್ವಾಮಿಯವರು. ಸ್ವಪ್ರಯತ್ನದಿಂದ ಅವರು ಹೋರಾಟ ರೂಪಿಸಿದ್ದರು. ರೈತ ಸಂಘ ವೈಚಾರಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ತಾತ್ವಿಕವಾಗಿ ಮುನ್ನಡೆಯಿತು. ಗುರಿ ಮತ್ತು ಮಾರ್ಗದ ಬಗ್ಗೆ ಸ್ಪಷ್ಟತೆ ಇರಬೇಕು ಎಂಬುದು ಅವರ ನಿಲುವಾಗಿತ್ತು’ ಎಂದರು.  

‘ಅವತ್ತು ರಾಜ್ಯ ರೈತ ಸಂಘ ಎಷ್ಟು ಪ್ರಬುದ್ಧವಾಗಿ ಬೆಳೆದಿತ್ತು ಎಂದರೆ, ಚುನಾವಣೆಗಳಲ್ಲೂ ಸಂಘ ನಿರ್ಣಾಯಕ ಪಾತ್ರ ವಹಿಸುತ್ತಿತ್ತು. ಅವತ್ತು ರೈತ ಸಂಘ ಚುನಾವಣೆಗೆ ಧುಮುಕಿದ್ದರೆ, ಸಂಘದ ಬಾವುಟ ವಿಧಾನಸೌಧದ ಮೇಲೆ ಹಾರಾಡುತ್ತಿತ್ತು. ಆದರೆ, ನಂಜುಂಡಸ್ವಾಮಿಯವರು ಹಳ್ಳಿಗಳನ್ನು ಒಗ್ಗೂಡಿಸಲು ನಾವು ಚುನಾವಣೆಗೆ ಹೊಗುವುದಿಲ್ಲ ಎಂದು ಹೇಳಿದ್ದರು’ ಎಂದು ಸ್ಮರಿಸಿದರು. 

‘ಎಂಡಿಎನ್‌ ಕಾಲವಾಗಿ 20 ವರ್ಷಗಳಾಗಿದ್ದು, ಆಗಿನ ಮತ್ತು ಈಗಿನ ಕರ್ನಾಟಕವನ್ನು ಹೋಲಿಸಿದಾಗ ನಗೆಪಾಟಲಿನ ಸನ್ನಿವೇಶಗಳು ಕಾಣಿಸುತ್ತವೆ. ಹನುಮ ಧ್ವಜ ಹಾರಿಸಲು ಬಿಡಲಿಲ್ಲ ಎಂಬ ಚಳವಳಿ ಈಗ ನಡೆಯುತ್ತಿವೆ. ನಂಜುಂಡಸ್ವಾಮಿಯವರು ಇದಕ್ಕೆಲ್ಲ ಅವಕಾಶ ಕೊಡುತ್ತಿರಲಿಲ್ಲ. ವಿರೋಧ ಪಕ್ಷಗಳೂ ಅವರ ಮಾರ್ಗದರ್ಶನ ಪಡೆಯುತ್ತಿದ್ದವು’ ಎಂದರು.  

‘ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವರು ಹನುಮ ಧ್ವಜ ವಿಚಾರವಾಗಿ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ರೈತ ಸಂಘಟನೆಗಳು ಮತೀಯ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಸಿದ್ದರಾಗಬೇಕು’ ಎಂದು ಪ್ರೊ.ರವಿವರ್ಮಕುಮಾರ್‌ ಹೇಳಿದರು. 

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎ.ಎಂ.ಮಹೇಶ್ ಪ್ರಭು, ಸಾಮೂಹಿಕ ನಾಯಕತ್ವದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಮುಖಂಡ ಹೊನ್ನೂರು ಪ್ರಕಾಶ್, ಪ್ರೊ.ಎಂಡಿಎನ್‌ ಮಗಳು, ರೈತ ನಾಯಕಿ  ಚುಕ್ಕಿ ನಂಜುಂಡಸ್ವಾಮಿ, ಪಚ್ಚೆ ನಂಜುಂಡಸ್ವಾಮಿ, ಶಾಂತಲಾ ಕಲಾವಿದರು ಅಧ್ಯಕ್ಷ ಅಬ್ರಹಾಂ ಡಿಸಿಲ್ವಾ, ಅಂಬಳೆ ಸಿದ್ದರಾಜು, ರಂಗತರಂಗ ಟ್ರಸ್ಟ್‌ ಅಧ್ಯಕ್ಷ ಸೋಮಶೇಖರ ಬಿಸಲವಾಡಿ ಇತರರು ಇದ್ದರು. 

ರೈತ ಚಳವಳಿಯ ಯಶೋಗಾಥೆ ನಟರಾಜ್‌ ಹುಳಿಯಾರ್‌ ಅವರು ರಚಿಸಿ  ಕಬಡ್ಡಿ ನರೇಂದ್ರ ಬಾಬು ನಿರ್ದೇಶಿಸಿರುವ ‘ಡೈರೆಕ್ಟ್‌ ಆಕ್ಷನ್‌’ ನಾಟಕವನ್ನು ಬೆಂಗಳೂರಿನ ನಗ್ನ ಥಿಯೇಟರ್ ಕಲಾವಿದರು ಅಭಿನಯಿಸಿದರು.  ಒಂದೂವರೆ ಗಂಟೆ ಅವಧಿಯ ನಾಟಕವು ಮೂರು ದಶಕಗಳ ರೈತ ಹೋರಾಟವನ್ನು ಪ್ರೊ.ನಂಜುಂಡಸ್ವಾಮಿ ಅವರ ಹೋರಾಟದ ಯಶೋಗಾಥೆಯನ್ನು ಪ್ರೇಕ್ಷಕರ ಮುಂದೆ ತೆರದಿಟ್ಟಿತು. ಕಲಾವಿದ ಅಭಿನಯವು ರೈತ ಸಂಘಟನೆಗಳ ಮುಖಂಡರು ರೈತರು ರಂಗಾಸಕ್ತರ ಗಮನ ಸೆಳೆಯಿತು. ನಂಜುಂಡಸ್ವಾಮಿಯವರ ಪಾತ್ರದಲ್ಲಿ ಸಂಪತ್‌ ಮೈತ್ರೇಯ ಮನೋಜ್ಞವಾಗಿ ಅಭಿನಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT