ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವ‌ರಿಗೆಲ್ಲರಿಗೂ ಸೂರು ನಮ್ಮ ಆದ್ಯತೆ: ಸೋಮಣ್ಣ

ಗುಂಡ್ಲುಪೇಟೆ: 670 ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಣೆ
Last Updated 25 ಫೆಬ್ರುವರಿ 2023, 16:33 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ‘ದೇಶಕ್ಕೆ ಸ್ವಾತಂ‌ತ್ರ್ಯ ಬಂದು 75 ವರ್ಷ ಆದರೂ ಇನ್ನೂ ಹಲವು ಜನರಿಗೆ ಮನೆ ಇಲ್ಲ ಎಂಬುದು ಬೇಸರದ ಸಂಗತಿ. ಬಡವರಿಗೆ ನಿವೇಶನ ಸಿಗಬೇಕು, ಕನಸಿನ ಮನೆ ನಿರ್ಮಿಸಿಕೊಳ್ಳಬೇಕು. ಬಡತನಕ್ಕೆ ಜಾತಿ, ಕುಲ, ಪಕ್ಷ ಇಲ್ಲ. ಎಲ್ಲ ಬಡವರಿಗೂ ಸೂರು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆ’ ಎಂದು ವಸತಿ, ಮೂಲಸೌಕರ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

ಪಟ್ಟಣದಲ್ಲಿ ಜಿಲ್ಲಾಡಳಿತ, ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ಗುಂಡ್ಲುಪೇಟೆ ಪುರಸಭೆ ವತಿಯಿಂದ ಮುಖ್ಯಮಂತ್ರಿ ನಗರ ನಿವೇಶನ ಯೋಜನೆಯಡಿ ಪುರಸಭೆ ವ್ಯಾಪ್ತಿಯಲ್ಲಿ 670 ಫಲಾನುಭವಿಗಳಿಗೆ ನಿವೇಶನಗಳ ಹಕ್ಕುಪತ್ರ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಡವನಿಗೆ ನಿವೇಶನ ಕೊಡುವುದರ ಜೊತೆಗೆ ಮನೆ ನಿರ್ಮಾಣಕ್ಕೂ ಹಣಕಾಸಿನ ನೆರವು ಕೊಡುತ್ತಿದ್ದೇವೆ. ಶೇ 6 ಬಡ್ಡಿ ದರದಲ್ಲಿ ಸಾಲ ಕೊಡಲು ಕಾರ್ಮಿಕ ಇಲಾಖೆಯಿಂದ ಅನುಮೋದನೆಯೂ ಸಿಕ್ಕಿದೆ. ನಿವೇಶನ ಪಡೆದವರು ಅದನ್ನು ಮಾರಬಾರದು. ರಾಜ್ಯದಲ್ಲಿ 3.5 ಲಕ್ಷ ಕುಟುಂಬಗಳಿಗೆ 745 ಎಕರೆಯಲ್ಲಿ ನಿವೇಶನ ನೀಡಲಾಗಿದೆ. ಬೆಂಗಳೂರಿನಲ್ಲಿ 493 ಎಕರೆಯಲ್ಲಿ 52 ಸಾವಿರ ಮನೆ ಕಟ್ಟಿದ್ದೇನೆ’ ಎಂದರು.

‘ಇವತ್ತು ಹಕ್ಕುಪತ್ರ ಪಡೆದ ಎಲ್ಲ 670 ಫಲಾನುಭವಿಗಳ ಪಟ್ಟಿಯನ್ನು ನನಗೆ ಕಳುಹಿಸಿಕೊಡಿ. ಎಸ್‌ಸಿ, ಎಸ್‌ಟಿ, ಇತರ ಹಿಂದುಳಿದ ವರ್ಗಗಳು ಮತ್ತು ಸಾಮಾನ್ಯ ವರ್ಗದವರಿಗೆ ನಿಗದಿಯಾಗಿರುವಂತೆ ಮನೆ ನಿರ್ಮಾಣಕ್ಕೆ ಹಣ ಮಂಜೂರು ಮಾಡಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಪುರಸಭೆ ವ್ಯಾಪ್ತಿಯಲ್ಲಿ ಇನ್ನು 400 ನಿವೇಶನಗಳನ್ನು ವಾರದೊಳಗೆ ನೀಡಬೇಕು. ನಿವೇಶನ ಹಂಚಿಕೆ ಮಾಡಿರುವ ಬಡಾವಣೆಗೆ ಪುರಸಭೆ ಮಾಜಿ ಅಧ್ಯಕ್ಷ, ಹಿರಿಯ ರಾಜಕಾರಣಿ ಎಂ.ಪುಟ್ಟರಂಗನಾಯಕರ ಹೆಸರಿಡಬೇಕು’ ಎಂದು ಸೋಮಣ್ಣ ಸಲಹೆ ನೀಡಿದರು.

ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಮಾತನಾಡಿ, ‘ಪುರಸಭೆ ವ್ಯಾಪ್ತಿಯ ಬಡವರಿಗೆ ನಿವೇಶನ ಹಂಚಿಕೆ ಮಹತ್ವಾಕಾಂಕ್ಷೆ ಯೋಜನೆ ಮೂರ್ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಶಾಸಕ ನಿರಂಜನಕುಮಾರ್ ಹಾಗೂ ಸಚಿವ ವಿ.ಸೋಮಣ್ಣ ಸಹಕಾರದಿಂದ ಇದೀಗ ಮೊದಲ ಹಂತದಲ್ಲಿ 670 ಹಕ್ಕು ಪತ್ರಗಳ ವಿತರಣೆ ಮಾಡಲಾಗುತಿದ್ದು, ಎರಡನೇ ಹಂತದಲ್ಲಿ 390 ನಿವೇಶನ ಹಕ್ಕು ಪತ್ರ ವಿತರಣೆ ನೀಡಲಾಗುವುದು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಂ.ವಿ.ಸುಧಾ, ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಅಧಿಕಾರಿ ಅರುಣ್‍ಕುಮಾರ್ ಹಡಗಲಿ, ಪುರಸಭೆ ಉಪಾಧ್ಯಕ್ಷೆ ದೀಪಿಕಾ ಅಶ್ವಿನ್, ಸದಸ್ಯರಾದ ನಾಗೇಶ್, ಪಿ.ಶಶಿಧರ್ , ಅಣ್ಣಯ್ಯಸ್ವಾಮಿ, ಕುಮಾರ್, ರಂಗಸ್ವಾಮಿ, ಶ್ರೀನಿವಾಸನಾಯಕ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ಮುಖ್ಯಾಧಿಕಾರಿ ಆರ್.ಹೇಮಂತರಾಜು ಇದ್ದರು.

‘ಸೋಮಣ್ಣ ಶರವೇಗದ ಸರದಾರ’

ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಮಾತನಾಡಿ, ‘ಈ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು. 670 ನಿವೇಶನ ಹಂಚಿಕೆ ಮಾಡಿರುವುದು ಮಾತ್ರವಲ್ಲದೆ, ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಪಟ್ಟಣದಲ್ಲಿ 200 ಮನೆ ಕಟ್ಟಿಕೊಡಲಾಗುತ್ತಿದೆ. ಸೋಮಣ್ಣನವರು ಶರವೇಗದ ಸರದಾರ’ ಎಂದರು.

‘ಸೋಮಣ್ಣ ಉಸ್ತುವಾರಿ ಸಚಿವರಾದ ನಂತರ ಜಿಲ್ಲೆಯ ಹಲವು ಕೆಲಸಗಳಿಗೆ ವೇಗ ಸಿಕ್ಕಿದೆ. ಪಟ್ಟಣ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ, ಅನೇಕ ರಸ್ತೆ ಕಾಂಕ್ರಿಟೀಕರಣ ಮುಖ್ಯಮಂತ್ರಿ ನಗೋತ್ಥಾನ ಯೋಜನೆಯಡಿ 18 ಕೋಟಿ ವೆಚ್ಚದಲ್ಲಿ ಆಗಿದೆ. ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸಲು ₹150 ಕೋಟಿ ವೆಚ್ಚದಲ್ಲಿ ಪಟ್ಟಣಕ್ಕೆ ಎಕ್ಸ್‌ಪ್ರೆಸ್‌ ಪೈಪ್‍ಲೈನ್ ಹಾಕಲಾಗುತ್ತಿದೆ. ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದರು.

ನಗರೋತ್ಥಾನ: ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಚಾಮರಾಜನಗರ: ಇಲ್ಲಿನ ನಗರಸಭಾ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಹಂತ -4 ರ ಯೋಜನೆಯಡಿ ₹18.50 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನಗರದ ಮೂಡ್ಲುಪುರ ಹಾಗೂ ಮಾರುಕಟ್ಟೆ ಬಳಿ ಚಾಲನೆ ನೀಡಿದರು.

‘ಮುಖ್ಯಮಂತ್ರಿಗಳ ನಗರೋತ್ಥಾನ ಹಂತ 4 ರ ಅಡಿ ಚಾಮರಾಜನಗರ ನಗರಸಭೆಗೆ ₹ 40 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಶೇ 85ರಷ್ಟು ಅಂದರೆ ₹ 34 ಕೋಟಿಯನ್ನು ಅಭಿವೃದ್ಧಿ ಕಾಮಗಾರಿ ಹಾಗೂ ಇತರೆ ಕಾರ್ಯಕ್ರಮಗಳಿಗೆ ವೆಚ್ಚ ಮಾಡಲಾಗುತ್ತಿದೆ’ ಎಂದು ಸಚಿವರು ಹೇಳಿದರು.

ನಗರಸಭೆ ಆಯುಕ್ತ ರಾಮದಾಸ್‌ ಮಾತನಾಡಿ, ‘ಬಿಡುಗಡೆಯಾದ ಅನುದಾನದಲ್ಲಿ ಶೇ 15 ರಷ್ಟು ಅಂದರೆ ₹ 6 ಕೋಟಿ ಮೀಸಲು ನಿಧಿಯಲ್ಲಿರುತ್ತದೆ’ ಎಂದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ,ನಗರಸಭಾ ಅಧ್ಯಕ್ಷೆ ಸಿ.ಎಂ.ಆಶಾ, ಕಾಡಾ ಅಧ್ಯಕ್ಷ ಜಿ.ನಿಜಗುಣ ರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿ ದೇವಿ, ನಗರಸಭಾ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT