ಶುಕ್ರವಾರ, ಮೇ 14, 2021
21 °C
ಆಶ್ರಮ ಶಾಲೆಗಳ ಕಟ್ಟಡ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌

ಹನೂರು: ₹13 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ₹13.34 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ವಿವಿಧ ಕಾಮಗಾರಿಗಳನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಶುಕ್ರವಾರ ಉದ್ಘಾಟಿಸಿದರು.

ಲೊಕ್ಕನಹಳ್ಳಿ ಸಮೀಪದ ಶಿರಗೋಡು ಬಳಿ ₹4.63 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 66/11 ಕೆ.ವಿ ವಿದ್ಯತ್ ಉಪಕೇಂದ್ರದ ಶಂಕುಸ್ಥಾಪನೆ , ₹1.95 ಕೋಟಿ ವೆಚ್ಚದಲ್ಲಿ ಲೊಕ್ಕನಹಳ್ಳಿ ಗ್ರಾಮದಲ್ಲಿ ಪ್ರಗತಿ ಹಂತದಲ್ಲಿರುವ ಪಬ್ಲಿಕ್ ಶಾಲೆ ಕಟ್ಟಡ ನಿರ್ಮಾಣದ ಕಾಮಗಾರಿ ಪರಿಶೀಲನೆ, ₹2 ಕೋಟಿ ವೆಚ್ಚದಲ್ಲಿ ಒಡೆಯರಪಾಳ್ಯ ಟಿಬೆಟಿಯನ್ ಕಾಲೋನಿ ರಸ್ತೆಗೆ ಭೂಮಿಪೂಜೆ ನಡೆಸಿದರು. 

₹1.99 ಕೋಟಿ ವೆಚ್ಚದಲ್ಲಿ ಹಿರಿಯಂಬಲ ಗ್ರಾಮದಲ್ಲಿ ನಿರ್ಮಿಸಿರುವ ಗಿರಿಜನ ಆಶ್ರಮ ಶಾಲೆ, ₹1.99 ಕೋಟಿ ವೆಚ್ಚದಲ್ಲಿ ಅರ್ಧನಾರೀಪುರ ಗ್ರಾಮದಲ್ಲಿ ನಿರ್ಮಿಸಿರುವ ಗಿರಿಜನ ಆಶ್ರಮ ವಸತಿ ಶಾಲೆ ಹಾಗೂ ₹78 ಲಕ್ಷ ವೆಚ್ಚದಲ್ಲಿ ಬೈಲೂರು ಗ್ರಾಮದಲ್ಲಿ ನಿರ್ಮಿಸಿರುವ ಮಾಧ್ಯಮಿಕ ಶಾಲಾ ಕಟ್ಟಡಗಳನ್ನೂ ಅವರು ಉದ್ಘಾಟಿಸಿದರು.

ಶಿರಗೋಡು ಗ್ರಾಮದಲ್ಲಿ 66/11 ಕೆ.ವಿ ವಿದ್ಯತ್ ಉಪಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಲೊಕ್ಕನಹಳ್ಳಿ ವ್ಯಾಪ್ತಿಯ ಶಿರಗೋಡು, ಚಿಕ್ಕಮಾಲಾಪುರ, ಕಂಡಯ್ಯನಪಾಳ್ಯ, ಬೂದಿಪಡಗ ಮುಂತಾದ ಗ್ರಾಮಗಳಿಗೆ ವಿದ್ಯುತ್ ಪೂರೈಸಲು ಇದರಿಂದ ಸಹಾಯವಾಗಲಿದೆ. ಯಾವುದೇ ಅಡಚಣೆಯಿಲ್ಲದೇ ಗ್ರಾಮೀಣ ಭಾಗಕ್ಕೆ ವಿದ್ಯುತ್ ಪೂರೈಸಬೇಕು ಉದ್ದೇಶದಿಂದ ಈ ಭಾಗದಲ್ಲಿ ಉಪ ಕೇಂದ್ರ ಸ್ಥಾಪಿಸಲಾಗುತ್ತಿದೆ’ ಎಂದರು. 

ಲೊಕ್ಕನಹಳ್ಳಿನ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಇಂಗ್ಲಿಷ್ ಪಬ್ಲಿಕ್ ಶಾಲಾ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ಶೀಘ್ರವಾಗಿ ಕಾಮಗಾರಿಯನ್ನು ಮುಗಿಸುವುದರ ಮೂಲಕ ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಮಕ್ಕಳೊಂದಿಗೆ ಸಂವಾದ: ಕಟ್ಟಡ ಕಾಮಗಾರಿ ಪರಿಶೀಲನೆ ಬಳಿಕ ಸಚಿವರು ಕಾಲೇಜು ಮಕ್ಕಳೊಂದಿಗೆ ಕೆಲ ಕಾಲ ಸಂವಾದ ನಡೆಸಿದರು. ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಬೇಕೇ ಬೇಡವೇ ಎಂದು ವಿದ್ಯಾರ್ಥಿಗಳ ಅಭಿಪ್ರಾಯ ಕೇಳಿದರು. 

‘ತಾಲ್ಲೂಕಿನ ಅರ್ಧನಾರಿಪುರ ಮತ್ತು ಹಿರಿಯಂಬಲ ಗ್ರಾಮಗಳಲ್ಲಿ ತಲಾ ₹2 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಗಿರಿಜನ ಬುಡಕಟ್ಟು ಆಶ್ರಮ ಶಾಲೆಗಳ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ 120 ಆಶ್ರಮ ಶಾಲೆಗಳಿದ್ದು, ಅದರಲ್ಲಿ ತಾಲ್ಲೂಕಿನಲ್ಲಿ ಮೂರು ಆಶ್ರಮ ಶಾಲೆ ಹಾಗೂ 10 ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮದಲ್ಲಿ ಹಲವಾರು ವಿದ್ಯಾರ್ಥಿಗಳು ಪಿಯುಸಿ, ಬಿ.ಎ, ಎಂ.ಎಸ್‌ಸಿ ಓದಿ ಈಗಾಗಲೇ ಉತ್ತಮ ಶಿಕ್ಷಣ ಪಡೆಯುವತ್ತ ಗಿರಿಜನರು ಹೆಜ್ಜೆಹಾಕಿದ್ದು ಮುಂದಿನ ವರ್ಷಗಳಲ್ಲಿ ಗಿರಿಜನ ಗ್ರಾಮಗಳು ಶೇ 100  ಸಾಕ್ಷರ ಗ್ರಾಮಗಳಾಗಲಿವೆ. ಪೋಷಕರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಅರ್ಥದಲ್ಲೇ ಶಿಕ್ಷಣವನ್ನು ಮುಟುಕುಗೊಳಿಸಿ ಮದುವೆ ಮಾಡಬಾರದು’ ಎಂದು ಸಲಹೆ ನೀಡಿದರು.

ಶಾಸಕ ಆರ್.ನರೇಂದ್ರ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ, ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಸದಸ್ಯೆ ಮರಗದಮಣಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷೆ ರುಕ್ಮಿಣಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಗೌರಿ, ಉಪಾಧ್ಯಕ್ಷೆ ಮೇಘ, ತಹಸೀಲ್ದಾರ್  ನಾಗರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ ಇ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.