ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಆತ್ಮಹತ್ಯೆ: ಮಹಾದೇವಪ್ಪ ಪುತ್ರಿಗೆ ಸಚಿವರ ಸಾಂತ್ವನ

Last Updated 7 ಜೂನ್ 2021, 17:03 IST
ಅಕ್ಷರ ಗಾತ್ರ

ಚಾಮರಾಜನಗರ: ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡ ತಾಲ್ಲೂಕಿನ ಎಚ್.ಮೂಕಹಳ್ಳಿ ಗ್ರಾಮದ ಮಹಾದೇವಪ್ಪ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಅವರುಸೋಮವಾರ ಭೇಟಿ ನೀಡಿ, ಮಹಾದೇವಪ್ಪ ಅವರ ಹಿರಿಯ ಮಗಳು ಜ್ಯೋತಿ ಹಾಗೂ ಅಳಿಯ ಸುರೇಶ್‌ಗೆ ಸಾಂತ್ವನ ಹೇಳಿದರು.

ಜ್ಯೋತಿ ಅವರೊಂದಿಗೆ ಮಾತನಾಡಿದ ಸಚಿವರು, ಕುಟುಂಬದ ಬಗ್ಗೆ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ಜ್ಯೋತಿ ಅವರು ತಾವು ಎದುರಿಸುತ್ತಿರುವ ಕಷ್ಟ ಹಾಗೂ ವಿವಿಧ ನೆರವನ್ನು ಕೇಳಿ ಮನವಿ ಸಲ್ಲಿಸಿದರು. ಮಹಾದೇವಪ್ಪ ಅವರ ಆತ್ಮೀಯರು ಹಾಗೂ ಗೆಳೆಯರೊಂದಿಗೂ ಮಾತನಾಡಿದರು. ಪೊಲೀಸ್‌ ಅಧಿಕಾರಿಗಳನ್ನು ತನಿಖೆಯ ಬಗ್ಗೆ ವಿಚಾರಿಸಿದರು.

ನೆರವಿನ ಭರವಸೆ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಇದೊಂದು ದುರಂತ. ಸ್ವಾಭಿಯಾನಿಯಾಗಿದ್ದ ಮಹಾದೇವಪ್ಪ ಹಾಗೂ ಕುಟುಂಬದ ಸಾವು ದುಃಖ ತಂದಿದೆ. ಅವರ ಸ್ನೇಹಿತರು ಹಾಗೂ ಆತ್ಮೀಯರೊಂದಿಗೆ ಮಾತನಾಡಿದ್ದೇನೆ. ಆತ್ಮಹತ್ಯೆಗೆ ಕಾರಣವೇ ಗೊತ್ತಗುತ್ತಿಲ್ಲ ಎಂದು ಹೇಳಿದ್ದಾರೆ. ಪೊಲೀಸರೂ ವಿಚಾರಣೆ ನಡೆಸುತ್ತಿದ್ದಾರೆ’ ಎಂದರು.

‘ಅವರ ಹಿರಿಯ ಮಗಳು ಕೆಲವು ಸಹಾಯವನ್ನು ಕೇಳಿದ್ದಾರೆ. ಜಮೀನಿಗೆ ಕೊಳವೆಬಾವಿ ಸೌಲಭ್ಯ, ಮನೆ ದುರಸ್ತಿ ಹಾಗೂ ನೌಕರಿ ನೀಡುವಂತೆ ಮನವಿ ಮಾಡಿದ್ದಾರೆ. ಈ ಮೂರೂ ವಿಷಯದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ನಿಶ್ಚಯಿಸಲಾಗಿದೆ’ ಎಂದು ಸಚಿವರು ಹೇಳಿದರು.

ಶಾಸಕ ಎನ್‌.ಮಹೇಶ್‌,‌ ಬಿಜೆಪಿ ಮುಖಂಡ ಜಿ.ಎನ್.ನಂಜುಂಡಸ್ವಾಮಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಇತರರು ಇದ್ದರು.

ಹಲವು ಮುಖಂಡರಿಂದ ಆರ್ಥಿಕ ನೆರವು

ಈ ಮಧ್ಯೆ, ಮಹಾದೇವಪ್ಪ ಹಾಗೂ ಕುಟುಂಬ ಆತ್ಮಹತ್ಯೆ ಮಾಡಿಕೊಂಡ ನಂತರ ವಿವಿಧ ಪಕ್ಷಗಳ, ಸಮುದಾಯಗಳ ಮುಖಂಡರು ಎಚ್‌.ಮೂಕಹಳ್ಳಿಗೆ ಭೇಟಿ ನೀಡಿ ಹಿರಿಯ ಮಗಳಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

‌ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮರಿಸ್ವಾಮಿ, ಮುಖಂಡ ಕೆ.ಪಿ.ಸದಾಶಿವಮೂರ್ತಿ, ವೀರಶೈವ ಲಿಂಗಾಯತ ಮಠಾಧೀಶರು, ಮುಖಂಡರು ಈಗಾಗಲೇ ವೈಯಕ್ತಿಕವಾಗಿ ಆರ್ಥಿಕ ಸಹಾಯ ಮಾಡಿದ್ದಾರೆ. ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಕೂಡ ಹಣಕಾಸಿನ ನೆರವು ನೀಡಿದ್ದಾರೆ.

ಇದಲ್ಲದೇ ನವೀನ್‌ ಮಲ್ಲಗಹಳ್ಳಿ ಗೆಳೆಯರ ಬಳಗ ₹35 ಸಾವಿರ,‌ಬಿಜೆಪಿ ಮುಖಂಡ ಮಲ್ಲೇಶ್‌ ₹10 ಸಾವಿರ, ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ₹20 ಸಾವಿರ ವೈಯಕ್ತಿಕ ಧನ ಸಹಾಯ ಮಾಡಿದ್ದಾರೆ. ಇದಲ್ಲದೇ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ₹25 ಸಾವಿರ ನೆರವು ಕುಟುಂಬಕ್ಕೆ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT