ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುವಶಕ್ತಿ ದೇಶದ ಸಂಪತ್ತು: ಗೀತಾ ಹುಡೇದ

ಜಿಲ್ಲಾ ಮಟ್ಟದ ಯುವಜನೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಕಾಡಿದ ಪ್ರೇಕ್ಷಕರ ಕೊರತೆ
Published 5 ಡಿಸೆಂಬರ್ 2023, 16:07 IST
Last Updated 5 ಡಿಸೆಂಬರ್ 2023, 16:07 IST
ಅಕ್ಷರ ಗಾತ್ರ

ಚಾಮರಾಜನಗರ: ಯುವಶಕ್ತಿ ರಾಷ್ಟ್ರದ ಸಂಪತ್ತು. ಯುವಜನತೆಗೆ ದೇಶ ಕಟ್ಟುವ ಶಕ್ತಿ ಇದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮಂಗಳವಾರ ಹೇಳಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಯುವಜನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಭಾರತವು ಅಪಾರವಾದ ಯುವಶಕ್ತಿ, ಸಂಪನ್ಮೂಲಗಳನ್ನು ಹೊಂದಿದ್ದು, ಯುವಶಕ್ತಿಯನ್ನು ಬಡಿದೆಚ್ಚರಿಸಿ ಜಾಗೃತಗೊಳಿಸಿದ ಸ್ವಾಮಿ ವಿವೇಕಾನಂದರ ಜಯಂತಿಯನ್ನು 2024ರ ಜನವರಿ 12ರಂದು ಆಚರಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ನಡೆಯುತ್ತಿರುವ ಯುವಜನೋತ್ಸವದ ಹಬ್ಬದಲ್ಲಿ ಎಲ್ಲ ಯುವಕ, ಯುವತಿಯರು ಉತ್ಸಾಹದಿಂದ ಪಾಲ್ಗೊಳ್ಳಬೇಕು’ ಎಂದರು.

‘ಯುವಜನರು ತಮ್ಮಲ್ಲಿರುವ ಕಲಾ ಪ್ರತಿಭೆಗಳನ್ನು ಅಭಿವ್ಯಕ್ತಪಡಿಸಿ ಜಿಲ್ಲೆಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ಕೀರ್ತಿ ತರಬೇಕು’ ಎಂದು ಗೀತಾ ಹುಡೇದ ಹೇಳಿದರು.

ಉಪನ್ಯಾಸಕ ಸುರೇಶ್ ಋಗ್ವೇದಿ ಮಾತನಾಡಿ, ‘ಯುವಜನೋತ್ಸವ ಅದ್ಭುತ ಪ್ರತಿಭೆಗಳನ್ನು ಹೊರತರಲು ಸಹಕಾರಿಯಾಗಲಿದೆ. ಕಲೆ, ವಾಸ್ತುಶಿಲ್ಪ, ಸಂಗೀತ, ನೃತ್ಯ, ನಂದಿಧ್ವಜ ಕುಣಿತ, ಗೊರಕನ ಕುಣಿತ, ವೀರಗಾಸೆ, ಲಂಬಾಣಿ ಕಲೆಗಳು ಭಾರತದ ಸಾಂಸ್ಕೃತಿಕ ಶ್ರೇಷ್ಠತೆಯನ್ನು ಸಾರುತ್ತವೆ. ಈ ಶ್ರೇಷ್ಠತೆಗೆ ಯುವಜನರು ಶಕ್ತಿ ತುಂಬಬೇಕು. ಸ್ವಾಮಿ ವಿವೇಕಾನಂದರು ರಾಷ್ಟ್ರದ ಯುವಜನರ ಸ್ಪೂರ್ತಿ, ಶಕ್ತಿಯಾಗಿದ್ದು, ಅವರ ಆದರ್ಶ ಚಿಂತನೆಗಳನ್ನು ಯುವ ಜನತೆ ಮೈಗೂಡಿಸಿಕೊಳ್ಳಬೇಕು’ ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ದ ಶ್ರೀನಿವಾಸಪ್ರಸಾದ್ ಮಾತನಾಡಿ, ‘ಚಾಮರಾಜನಗರ ಜಿಲ್ಲೆಯು ಜನಪದ ಕಲೆಗಳ ಬೀಡು. ತಮ್ಮಲ್ಲಿರುವ ಅಗಾಧ ಪ್ರತಿಭೆಗಳನ್ನು ಅನಾವರಣಗೊಳಿಸಲು ಯುವಜನೋತ್ಸವ ಉತ್ತಮ ವೇದಿಕೆ’ ಎಂದರು.

ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ‘ಯುವಜನೋತ್ಸವದಲ್ಲಿ ಯುವಜನರು ಹೆಚ್ಚಾಗಿ ಭಾಗವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಯುವಜನತೆ ಮೊಬೈಲ್ ಮೋಡಿಗೆ ಒಳಗಾಗಿದ್ದು, ಯುವಜನೋತ್ಸವದಂತಹ ದೊಡ್ಡ ಉತ್ಸವಗಳಲ್ಲಿ ಸ್ಪರ್ಧಾಳುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಜಿಲ್ಲೆಯಲ್ಲಿ ಬುಡಕಟ್ಟು ಜನಜೀವನ ಕುರಿತ ಸಂಶೋಧನಾ ಅಧ್ಯಯನಕ್ಕಾಗಿ ಬುಡಕಟ್ಟು ಹಾಗೂ ಅಲೆಮಾರಿ ಸಮುದಾಯ ಭವನ ನಿರ್ಮಾಣವಾಗಬೇಕು’ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಸ್ವಾಮಿ, ಕ್ರೀಡಾ ತರಬೇತುದಾರರಾದ ಗಣೇಶ್, ಜಿ. ಬಂಗಾರು ಇತರರು ಇದ್ದರು.

ವೇದಿಕೆ ಕಾರ್ಯಕ್ರಮದ ಬಳಿಕ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾಡಿದ ಪ್ರೇಕ್ಷಕರ ಕೊರತೆ: ಕಾರ್ಯಕ್ರಮದಲ್ಲಿ ಹೆಚ್ಚು ಜನರು ಭಾಗವಹಿಸಲಿರಲ್ಲ. ಅಧಿಕಾರಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಿದ್ದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕಲಾವಿದರಷ್ಟೇ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT