ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು: ಜಲಮೂಲಗಳಲ್ಲಿ ಪಟ್ಟೆ ತಲೆ ಹೆಬ್ಬಾತುಗಳ ರಂಗೋಲಿ

ರಷ್ಯಾ, ಮಂಗೋಲಿಯಾ, ಲಡಾಖ್‌ ಮೂಲಕ ಭಾರತಕ್ಕೆ ಪ್ರವೇಶ
Last Updated 6 ಫೆಬ್ರುವರಿ 2023, 6:55 IST
ಅಕ್ಷರ ಗಾತ್ರ

ಯಳಂದೂರು: ಬಿಆರ್‌ಟಿ ಕಾನನ ಚಳಿಗಾಲದಲ್ಲಿ ಹಸಿರುಟ್ಟು ನಳನಳಿಸುತ್ತದೆ. ನೀರಿನ ಬುಗ್ಗೆ ಪುಟಿಯುತ್ತದೆ. ಸ್ವರ್ಗ ಸದೃಶ್ಯ ಗಿರಿ ಶಿಖರಗಳ ಹಿತಕರ ಹವಾಮಾನ ವನ್ಯ ಜೀವಿಗಳಿಗೆ ಪುಳಕ ತಂದರೆ, ಬಣ್ಣದ ಪಕ್ಷಿಗಳನ್ನು ಇನ್ನಿಲ್ಲದಂತೆ ಸೆಳೆಯುತ್ತದೆ. ಖಗ ಮೃಗಗಳು ತರುಲತೆಗಳ ಝೇಂಕಾರಕ್ಕೆ ಹಾತೊರೆದರೆ, ವಿದೇಶಿ ಬಾನಾಡಿಗಳು ನಮ್ಮ ಸ್ವಚ್ಛಂದ ಪರಿಸರದಲ್ಲಿ ಧುತ್ತೆಂದು ಪ್ರತ್ಯಕ್ಷವಾಗುತ್ತವೆ.

ಕಾನನದಲ್ಲಿ ತಮ್ಮ ಮಧುಚಂದ್ರ ಮುಗಿಸಿ, ತಮ್ಮ ಪುಟ್ಟ ಮರಿಗಳೊಂದಿಗೆ ತವರಿಗೆ ಹಾರುತ್ತವೆ. ಹೀಗೆ ಬಾನಾಗಡಿಗಳನ್ನು ಮೀರಿ ವಿಶ್ವ ಭ್ರಾತೃತ್ವ ಸಾರುವ ಹಕ್ಕಿ ಜಗತ್ತಿನ ಹೆಬ್ಬಾತುಗಳಿಗೆ ವಿಶಿಷ್ಟ ಸ್ಥಾನ ಇದೆ. ಖಗಲೋಕದ ಇಂತಹ ವಿಶಿಷ್ಟ ಹಕ್ಕಿಗಳು ಈಗ ನಮ್ಮ ಪ್ರಕೃತಿಯ ಅತಿಥಿಗಳಾಗಿವೆ.

ಮಳೆ ಋತುವಿನಲ್ಲಿ ತಾಲ್ಲೂಕಿನ ಕಣಿವೆ, ಕಾಡು, ಹೆಬ್ಬಳ್ಳ, ನದಿ, ಅಣೆಕಟ್ಟೆ ತುಂಬಿವೆ. ಡ್ಯಾಂಗಳ ಜಲಾನಯನ ಪ್ರದೇಶಗಳಲ್ಲಿ ಪಕ್ಷಿ ಸಂಕುಲಗಳು ವಿಹಾರಕ್ಕೆ ತೆರೆದುಕೊಂಡಿದೆ. ಅವುಗಳಲ್ಲಿ ಪಟ್ಟೆತಲೆ ಹೆಬ್ಬಾತು ವರ್ಷದ ಆರಂಭದಲ್ಲಿ ಬೀಡುಬಿಟ್ಟು ವಂಶಾಭಿವೃದ್ಧಿಯಲ್ಲಿ ತೊಡಗಿವೆ. ನೀರಿನ ಅಲೆಗಳೊಡನೆ ಚಿನ್ನಾಟ ಆಡುವ ಪುಟ್ಟ ಹಕ್ಕಿಗಳ ಕಲರವ, ಮುಂಜಾನೆ ಜಲಾವರದಲ್ಲಿ ರಂಗೋಲಿ ಇಟ್ಟಂತೆ ತೇಲುವ ಇವು, ಸರಸ ಸಲ್ಲಾಪದ ಸಮಯದಲ್ಲಿ ಹೆಣ್ಣುಗಳನ್ನು ಓಲೈಸಲು ಗಂಡು ಹೆಬ್ಬಾತುಗಳ ಕಲರವ ಕಾಡಿನ ನಿಶಬ್ಧತೆಗೆ ಕಚಗುಳಿ ಇಡುತ್ತವೆ.

ಹೆಬ್ಬಾತು ಬದುಕಿಗೆ ಕಂಟಕ: ಬಿಳಿಗಿರಿಬನದ ಗುಂಡಾಲ್, ಸುವರ್ಣಾವತಿ ನದಿತಟದಲ್ಲಿ ಹೆಬ್ಬಾತು ಸಂಚಾರ ಹೆಚ್ಚು. ಆರಂಭದಲ್ಲಿ 50 ಹೆಬ್ಬಾತು ಸಂಸಾರ ಕಂಡುಬಂದಿತ್ತು.

‘ಫೆ.4ರಂದು 160 ಹಕ್ಕಿಗಳ ಗುಂಪು ಇತ್ತು. ಇನ್ನು 3 ವಾರಗಳಲ್ಲಿ ಇವು ಸ್ವದೇಶಕ್ಕೆ ವಾಪಸ್ ಆಗಲಿವೆ. ಗುಂಡಾಲ್ ಎದಿನಿಬೆಟ್ಟ, ಗಗ್ಗಲಗುಂಡಿ ಹಾಗೂ ಬುರುಡೆಬೆಟ್ಟ ಹೆಬ್ಬಾತುಗಳಿಗೆ ಹೇಳಿ ಮಾಡಿಸಿದ ಸ್ಥಳ. ಜನದಟ್ಟಣೆ ಒಲ್ಲದ, ತುಸು ನಾಚಿಕೆ ಸ್ವಭಾವದ ಇವು ಜನರನ್ನು ಕಂಡೊಡನೆ ವಿಚಿತ್ರ ಶಬ್ಧ ಮಾಡುತ್ತ ಮರೆಯಾಗುತ್ತವೆ. ರಾತ್ರಿ ವೇಳೆ ಹಿಂಡಿನಲ್ಲಿ ಹೊಲ, ಗದ್ದೆಗಳಲ್ಲಿ ಸಿಗುವ ಭತ್ತ, ಕಡಲೆ ಸೇವಿಸುತ್ತವೆ. ಕೆಸರಿನಲ್ಲಿ ಒಂಟಿ ಕಾಲಿನಲ್ಲಿ ನಿಂತು ನಿದ್ದೆ ಮಾಡುತ್ತವೆ. ಮೀನಿನ ಬಲೆ, ಉರುಳು ಹೆಬ್ಬಾತು ಬದುಕಿಗೆ ಕಂಟಕವಾಗಿವೆ’ ಎಂದು ಪಕ್ಷಿಪ್ರಿಯ ನವೀನ್ ಜಗಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯುರೋಪ್, ಮಂಗೋಲಿಯಾ ದೇಶಗಳಿಂದ ಈ ಹಕ್ಕಿಗಳು ಬಿಆರ್‌ಟಿಗೆ ವಲಸೆ ಬರುತ್ತವೆ. ವಿದೇಶಿ ಹಕ್ಕಿಗಳು ಸಂತಾನೋತ್ಪತಿಗಾಗಿ ಲಡಾಖ್‌ ಪ್ರಾಂತ್ಯಕ್ಕೆ ಬರುತ್ತವೆ. ಅಲ್ಲಿಗೆ ತೆರಳುವ ಮೊದಲು ಚಳಿಗಾಲದ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿ ಆಶ್ರಯಿಸುತ್ತವೆ. ನಸುಕಿನಲ್ಲಿ ಹೆಚ್ಚು ಸಂಖ್ಯೆಯಲ್ಲಿ ವೀಕ್ಷಿಸಬಹುದು’ ಎಂದು ಆರ್‌ಎಫ್‌ಒ ವಾಸು ಹಾಗೂ ಡಿಆರ್‌ಎಫ್‌ಒ ಪ್ರಭುಸ್ವಾಮಿ ಮಾಹಿತಿ ನೀಡಿದರು.

‘ಗೌಜು ಗದ್ದಲಗಳಿಂದ ದೂರ’

ಇತ್ತೀಚೆಗೆ ಬಿಆರ್‌ಟಿಯಲ್ಲಿ ನಡೆದ ಪಕ್ಷಿ ಸಮೀಕ್ಷೆ ವೇಳೆ ಈ ಹೆಬ್ಬಾತುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿವೆ.

‘ಜನವರಿ-ಮಾರ್ಚ್ ನಡುವೆ ವಿದೇಶಿ ಬಾನಾಡಿಗಳು ಶೀತ ವಾತಾವರಣದಿಂದ ತಪ್ಪಿಸಿಕೊಂಡು ಬಿಆರ್‌ಟಿ ಸುತ್ತಮುತ್ತ ಬೀಡು ಬಿಡುತ್ತವೆ. ವಿದೇಶದ 130ಕ್ಕೂ ಹೆಚ್ಚಿನ ಸಂಕುಲಗಳಲ್ಲಿ 20 ಜಾತಿ ಹಕ್ಕಿಗಳು ವಿಶೇಷವಾಗಿ ಕಂಡುಬರುತ್ತವೆ. ಅವುಗಳಲ್ಲಿ ಕೊಕ್ಕರೆ ಕುಟುಂಬಕ್ಕೆ ಸೇರಿದ ಗೀರು ತಲೆಯ ಬಾತು ಕೋಳಿಗಳು ವಿಭಿನ್ನ ಹಾಗೂ ವಿಶಿಷ್ಟವಾಗಿವೆ. ಸೂಕ್ಷ್ಮ ಸಂವೇದನೆಯ, ಗೌಜು ಗದ್ದಲಗಳಿಲ್ಲದ ಆವಾಸದಲ್ಲಿ ಜೀವಿಸುತ್ತವೆ. ಇತರೆ ಪಕ್ಷಿಗಳ ನಡುವೆಯೂ ಸಹಬಾಳ್ವೆ ನಡೆಸುತ್ತವೆ. ಬ್ರಾಹ್ಮಿಣಿ ಡಕ್, ಬ್ಲ್ಯಾಕ್‌ ಐಬೀಸ್, ಸ್ಟಾರ್ಕ್ ಹಾಗೂ ಸ್ಪೂನ್‌ ಬಿಲ್‌ ಪ್ರಭೇದದ ಪಕ್ಷಿಗಳು ಬಿಆರ್‌ಟಿಯ ದಟ್ಟ ಕಾನನದ ನೀರಿನ ಒರತೆಗಳ ಬಳಿ ಆಗಾಗ ಕಂಡುಬಂದರೆ, ಕೇರಳದ ನಾರ್ದನ್ ಶೊವೆಲರ್‌, ಲಿಟ್ಲ್ ಕಾರ್ಪೋರಲ್, ಪ್ಲೋವರ್, ಪೈಪರ್, ಗ್ರೀವನ್ ಟೇಲ್, ಬ್ಲಾಕ್ ಡ್ರಾಂಗೋ, ರೆಡ್ ಥ್ರೋಟ್ ಹಕ್ಕಿಗಳು ಕಡಿಮೆ ಸಂಖ್ಯೆಯಲ್ಲಿ ನಾಡಿಗೆ ಆಗಮಿಸುತ್ತವೆ’ ಎಂದು ನವೀನ್ ಜಗಲಿ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT