ಶುಕ್ರವಾರ, ಮೇ 27, 2022
23 °C
ಹಂಗಳ ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಕೊರತೆ ತೀವ್ರ, ತಾಲ್ಲೂಕು ಕೇಂದ್ರದಲ್ಲೂ ಜೀವ ಜಲದ ಸಮಸ್ಯೆ

ಗುಂಡ್ಲುಪೇಟೆ: ಕುಡಿಯುವ ನೀರಿಗಾಗಿ ಪರದಾಟ

ಮಲ್ಲೇಶ ಎಂ.‌ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಅಂತರ್ಜಲ ಮಟ್ಟ ತೀವ್ರವಾಗಿ ಕುಸಿತ ಕಂಡಿರುವ ತಾಲ್ಲೂಕಿನ ಕೆಲವು ಕಡೆ ಈ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. 

ಅದರಲ್ಲೂ ಹಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೀವ್ರ ಕೊರತೆ ಉಂಟಾಗಿದ್ದು, ಗ್ರಾಮ ಪಂಚಾಯಿತಿ ಪೂರೈಸುವ ಟ್ಯಾಂಕರ್‌ ನೀರನ್ನೇ ಅಷ್ಟೋ ಇಷ್ಟೋ ಸಂಗ್ರಹಿಸಿ, ಜನರು ದಿನ ದೂಡುತ್ತಿದ್ದಾರೆ. ತಾಲ್ಲೂಕು ಕೇಂದ್ರವಾದ ಗುಂಡ್ಲುಪೇಟೆಯ ಪುರಸಭೆ ವ್ಯಾಪ್ತಿಯಲ್ಲೂ ಜೀವ ಜಲಕ್ಕಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.  

ಕೋವಿಡ್‌ ಹಾವಳಿಯ ನಡುವೆಯೇ ನೀರಿನ ಸಮಸ್ಯೆ ಬೃಹದಾಕಾರವಾಗಿ ತಲೆ ದೋರಿದ್ದು, ತಾಲ್ಲೂಕು ಹಾಗೂ ಪಟ್ಟಣದ ಪುರಸಭೆ ಆಡಳಿತ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. 

ಹಂಗಳ ಹೋಬಳಿ ಕೇಂದ್ರವಾಗಿದ್ದು ಅಂದಾಜು 10 ಸಾವಿರದಷ್ಟು ಜನಸಂಖ್ಯೆ ಇದೆ. ಬಡಾವಣೆಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ಇಡೀ ಹೋಬಳಿ ಕೇಂದ್ರ ಕುಡಿಯುವ ನೀರಿಗಾಗಿ ಎರಡು ಕೊಳವೆ ಬಾವಿಗಳನ್ನು ಅವಲಂಬಿಸಿತ್ತು. ಈ ಬೇಸಿಗೆಯಲ್ಲಿ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿತವಾಗಿರುವುದರಿಂದ ವಾರಕ್ಕೊಮ್ಮೆ ಅಥವಾ ಹತ್ತು ದಿನಗಳಿಗೊಮ್ಮೆ ನೀರು ಬರುತ್ತಿದೆ. ಗ್ರಾಮ ಪಂಚಾಯಿತಿಯು ಟ್ಯಾಂಕರ್‌ ಮೂಲಕ ನೀರು ಪೂರೈಸಲು ಪ್ರಯತ್ನಿಸುತ್ತಿದೆ. ಕೆಲವೊಂದು ಬಡಾವಣೆಗಳಿಗೆ 20 ದಿನಗಳಾದರೂ ನೀರು ಬಿಟ್ಟಿಲ್ಲ. ಕೆಲವರು ತಮ್ಮ ಜಮೀನುಗಳಿಂದ ನೀರು ತರುತ್ತಿದ್ದಾರೆ. 

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಹಂಗಳ ಗ್ರಾಮ ಸೇರಿಲ್ಲ. ಕಬಿನಿ ನೀರು ಸರಬರಾಜು ಆಗುತ್ತಿಲ್ಲ. ಈ ಕಾರಣದಿಂದ ಬೇಸಿಗೆಯಲ್ಲಿ ನೀರಿನ ಅಭಾವ ಹೆಚ್ಚಾಗಿದೆ. 

‘ಹಂಗಳ ಗ್ರಾಮ ವ್ಯಾಪ್ತಿಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಕುಸಿತವಾಗಿರುವುದರಿಂದಾಗಿ ನೀರಿನ ಅಭಾವ ಎದುರಾಗಿದೆ. ಪ್ರತಿ ದಿನ ಬಡಾವಣೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದರೆ 20ರಿಂದ 30 ಟ್ಯಾಂಕರ್‌ಗಳು ಬೇಕು. ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಪಿಡಿಒ ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಹಂಗಳ ಗ್ರಾಮದಲ್ಲಿ ಟ್ಯಾಂಕರ್ ಮ‌ೂಲಕ ನೀರು ಸರಬರಾಜು ಮಾಡಲು ಪ್ರತಿ ದಿನ 20ರಿಂದ 30 ಟ್ಯಾಂಕರ್ ನೀರಿನ ಅವಶ್ಯಕತೆ ಇದೆ. ಪ್ರತಿ ಟ್ಯಾಂಕರ್‌ಗೆ ₹ 1200ರಿಂದ ₹ 1400 ಹಣ ನೀಡಬೇಕಿದೆ’ ಎಂದು ಅವರು ಮಾಹಿತಿ ನೀಡಿದರು. 

‘ಖಾಸಗಿಯಾಗಿ ಟ್ಯಾಂಕರ್ ನೀರು ಪಡೆಯಬೇಕಾದರೆ ಸಾವಿರ ರೂಪಾಯಿ ನೀಡಬೇಕಿದೆ. ಈ ರೀತಿಯಲ್ಲಿ ನೀರಿನ ಸಮಸ್ಯೆ ಎದುರಾದರೆ ಮಹಿಳೆಯರ ಗತಿ ಏನು?’ ಎಂದು ಪಂಚಾಯಿತಿ ಸದಸ್ಯೆಯೊಬ್ಬರು ಪ್ರಶ್ನಿಸಿದರು. 

ಬೊಮ್ಮನಹಳ್ಳಿ ಪಂಚಾಯಿತಿಯ ಉಪಕಾರ ಕಾಲೊನಿ, ಬೊಮ್ಮಲಪುರ, ಕಗ್ಗಳ, ಬಸವಪುರ ಗ್ರಾಮದಲ್ಲಿ ಸ್ವಲ್ಪ ಮಟ್ಟಿಗೆ ನೀರಿನ ಸಮಸ್ಯೆ ಇದೆ. ಉಪಕಾರ ಕಾಲೊನಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದೆ.

***

ಹಂಗಳ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಒದಗಿಸಲು ಅಸಾಧ್ಯ. ಶಾಶ್ವತ ಪರಿಹಾರ ಆಗುವಂತೆ ಹೊಸ ಕೊಳವೆಬಾವಿ ಕೊರೆದು ನೀರಿನ ಸಮಸ್ಯೆ ಬಗೆ ಹರಿಸಬೇಕು
- ಮಹಾದೇವಪ್ಪ ಹಂಗಳ ನಿವಾಸಿ

****

ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಮಾತ್ರ ಹೆಚ್ಚಿನ ನೀರಿನ ಸಮಸ್ಯೆ ಕಂಡುಬಂದಿದೆ. ಭೂ ಗರ್ಭ ಶಾಸ್ತ್ರಜ್ಞರನ್ನು ಕರೆಸಿ ಕೊಳವೆ ಬಾವಿ ಕೊರೆಯಲು ಸ್ಥಳ ಗುರುತಿಸಲಾಗಿದೆ

- ಶ್ರೀಕಂಠೇರಾಜೇ ಅರಸ್, ತಾಲ್ಲೂಕು ಪಂಚಾಯತಿ ಇಒ

ತಾಲ್ಲೂಕು ಕೇಂದ್ರದಲ್ಲೂ ನೀರಿನ ಸಮಸ್ಯೆ

ಗುಂಡ್ಲುಪೇಟೆ ಪಟ್ಟಣದ ಹಲವು ವಾರ್ಡ್‍ಗಳಿಗೆ 15 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗಿಲ್ಲ. ಇದರಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. 

1, 2, 3, 4, 6, 7, 9, 10, 11, 15, 16, 17, 21ನೇ ವಾರ್ಡ್‍ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಪಟ್ಟಣಕ್ಕೆ ನೀರು ಪೂರೈಸಲು ಕಬಿನಿ ಪ್ರಮುಖ ಜಲ ಮೂಲವಾಗಿದ್ದರೂ, ಜನರಿಗೆ ಇನ್ನೂ ಅದರ ಪ್ರಯೋಜನ ದೊರಕಿಲ್ಲ.

ಪುರಸಭೆ ವತಿಯಿಂದ ಹೊಸದಾಗಿ ಒಂಬತ್ತು ಕೊಳವೆಬಾವಿ ಕೊರೆಸಲಾಗಿದೆ. ಅದರಲ್ಲಿ ಆರರಲ್ಲಿ ಮಾತ್ರ ನೀರು ಸಿಕ್ಕಿದೆ.

15 ದಿನಗಳಿಂದ ನಲ್ಲಿಗಳಲ್ಲಿ ನೀರು ಬಂದಿಲ್ಲ. ಬೇಸಿಗೆಯ ಅರಿವಿದ್ದರೂ ಪುರಸಭೆ ಆಡಳಿತ ನೀರಿನ ಬಗ್ಗೆ ಗಮನ ಹರಿಸಿಲ್ಲ ಎಂಬುದು ನಿವಾಸಿಗಳ ದೂರು.

ಪಟ್ಟಣದ ಬಹುತೇಕ ವಾರ್ಡ್‍ಗಳಲ್ಲಿ ನೀರಿನ ಸಮಸ್ಯೆ ತಲೆದೋರಿರುವುದರಿಂದ ಸ್ಥಳೀಯರು ನೀರು ಗಂಟಿಗಳನ್ನು ತರಾಟೆಗೆ ತೆಗೆದುಕೊಂಡಿರುವುದರಿಂದ ಹಲವು ಮಂದಿ ನೀರು ಗಂಟಿಗಳು ತಮ್ಮ ಮೊಬೈಲ್ ಸ್ವಿಚ್ ಆಫ್‌ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ತಮ್ಮ ವಾರ್ಡ್‍ಗಳಲ್ಲಿ ನೀರಿನ ಮೋಟರ್ ಸುಟ್ಟು ಹೋಗಿದೆ, ಪಂಪ್‌ ರಿಪೇರಿ ಇದೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು 16ನೇ ವಾರ್ಡ್ ನಿವಾಸಿಗಳು ಆರೋಪಿಸಿದರು. 

ಓವರ್ ಹೆಡ್ ಟ್ಯಾಂಕ್‍ಗಳು ನಿರುಪಯುಕ್ತ: ಪಟ್ಟಣದ ವ್ಯಾಪ್ತಿಯಲ್ಲಿ 5ರಿಂದ 6 ಓವರ್ ಹೆಡ್ ಟ್ಯಾಂಕ್‍ಗಳಿದ್ದು, ಯಾವೊಂದು ಟ್ಯಾಂಕ್‍ಗೂ ನೀರು ಪೂರೈಕೆಯಾಗದಿರುವುದರಿಂದ ನಿರುಪಯುಕ್ತವಾಗಿ ಬಿದ್ದಿವೆ.

ಹಲವು ವರ್ಷದ ಹಿಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದ ಟ್ಯಾಂಕ್‌ಗಳು ಇದೀಗ ಶಿಥಿಲಾವಸ್ಥೆ ತಲುಪಿವೆ.

ಅಧಿಕಾರಿಗಳ ನಿರ್ಲಕ್ಷ್ಯ

ಪಟ್ಟಣದಲ್ಲಿ ನೀರಿನ ಅಭಾವ ಮತ್ತು ಬೇಸಿಗೆಯ ಅರಿವಿದ್ದರೂ ಅಧಿಕಾರಿಗಳಿಗೆ ದೂರದೃಷ್ಟಿ ಇಲ್ಲದ ಕಾರಣ ಪಟ್ಟಣದ ವಾರ್ಡ್‍ಗಳಿಗೆ ನೀರಿನ ಸಮಸ್ಯೆ ತಲೆದೋರಿದೆ

–ಎನ್.ಕುಮಾರ್, ಪುರಸಭಾ ಸದಸ್ಯ 

ಶಾಸಕರಿಗೆ ಮನವಿ

20 ದಿನಗಳಿಗೊಮ್ಮೆ 2ನೇ ವಾರ್ಡ್ ಜಾಕೀರ್ ಹುಸೇನ್ ನಗರಕ್ಕೆ ನೀರು ಬಿಡಲಾಗುತ್ತಿದೆ. ಇರುವ ಒಂದು ಕೊಳವೆಬಾವಿಯಲ್ಲೂ ಸರಿಯಾಗಿ ನೀರು ಬಾರದಿರುವುದರಿಂದ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಈ ಬಗ್ಗೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ. ನೀರಿನ ಸಮಸ್ಯೆ ಬಗೆಹರಿಸಿಕೊಡುವಂತೆ ಶಾಸಕರಿಗೂ ಮನವಿ ಮಾಡಲಾಗಿದೆ

–ರಾಜ್‌ ಗೋಪಾಲ್, ಪುರಸಭೆ ಸದಸ್ಯ

ಟ್ಯಾಂಕರ್‌ ಮೂಲಕ ನೀರು

ಕುಡಿಯುವ ನೀರಿನ ಸಮಸ್ಯೆ ಇರುವ ವಾರ್ಡ್‍ಗಳಿಗೆ ಟ್ಯಾಂಕರ್ ಮೂಲಕ ಹಲವು ಕಡೆ ನೀರು ನೀಡಲಾಗುತ್ತಿದೆ. ಕೆಲವು ವಾರ್ಡ್‍ಗಳಲ್ಲಿ ಮೋಟರ್ ಸುಟ್ಟು ಹೋಗಿತ್ತು. ಸರಿಪಡಿಸಿ ನೀರು ಒದಗಿಸಲಾಗುತ್ತಿದೆ.

- ರಮೇಶ್, ಮುಖ್ಯಾಧಿಕಾರಿ ಗುಂಡ್ಲುಪೇಟೆ, ಪುರಸಭೆ  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು