ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನೆ ಮಳೆ ವೈಭವ: ಮುದುಡಿದ ಜನಜೀವನ

ದಿನಪೂರ್ತಿ ಜಿಟಿ ಜಿಟಿ ಹನಿಗಳ ಲೀಲೆ, ಬನ ಅಪ್ಪಿದ ಮಂಜಿನ ಮಾಲೆ
Last Updated 11 ನವೆಂಬರ್ 2022, 16:50 IST
ಅಕ್ಷರ ಗಾತ್ರ

ಚಾಮರಾಜನಗರ/ಯಳಂದೂರು: ಜಿಲ್ಲೆಯಾದ್ಯಂತ ಶುಕ್ರವಾರ ದಿನವಿಡೀ ಸೋನೆ ಮಳೆ ಸು‌ರಿದು ಜನ ಜೀವನ ಅಸ್ತವ್ಯಸ್ತಗೊಂಡಿತು.

ಮೂರ್ನಾಲ್ಕು ದಿನಗಳಿಂದ ರಾತ್ರಿ ಚಳಿಯ ವಾತಾವರಣ ಇದ್ದು ಗುರುವಾರ ರಾತ್ರಿಯೂ ಮುಂದುವರಿಯಿತು. ಶುಕ್ರವಾರ ಬೆಳಿಗ್ಗೆ ಮಂಜು ಮುಸುಕಿದ ವಾತಾವರಣ ಇತ್ತು. ಬೆಳಿಗ್ಗೆ 10 ಗಂಟೆಯಾದರೂ ಬಿಸಿಲು ಕಂಡು ಬರಲಿಲ್ಲ. 10.30ರ ನಂತರ ತುಂತುರು ಮಳೆಯಾಗುವುದಕ್ಕೆ ಆರಂಭವಾಯಿತು. 11 ಗಂಟೆಯ ನಂತರ ಮಳೆ ಕೊಂಚ ಬಿರುಸಾಗಿ, ರಾತ್ರಿ 8.30ರವರೆಗೂ ಜಿಟಿ ಜಿಟಿಯಾಗಿ ಸುರಿಯಿತು.

ಕನಕದಾಸ ಜಯಂತಿ ಅಂಗವಾಗಿ ಸರ್ಕಾರ ರಜಾ ದಿನವಾಗಿದ್ದರಿಂದ ನಗರ, ಪಟ್ಟಣ ಪ್ರದೇಶಗಳಲ್ಲಿ ಜನರ ಸಂಚಾರ ಕೊಂಚ ಕಡಿಮೆ ಇತ್ತು. ಮಳೆಯಿಂದಾಗಿ ಗ್ರಾಮೀಣ ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ನಡೆಯಲಿಲ್ಲ. ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕಿದರು.

ಚಳಿ, ಗಾಳಿ ಜೊತೆ ಮಳೆಯೂ ಸುರಿದಿದ್ದರಿಂದ ಇಡೀ ದಿನ ವಾತಾವರಣ ತಂಪಾಗಿತ್ತು.

ಗ್ರಾಮೀಣ ರಸ್ತೆಗಳು ಕೆಸರುಮಯ ಆಗಿದ್ದು, ವಾಹನಗಳಲ್ಲಿ ಸಂಚರಿಸಲು ಪ್ರಯಾಸಪಟ್ಟರು. ಮದುವೆ, ಜಯಂತ್ಯುತ್ಸವ ಹಾಗೂ ಕಚೇರಿಗಳ ಬಳಿ ತಲುಪಲು ಸಾರ್ವಜನಿಕರು ಪರಿತಪಿಸಿದರು.

ಎರಡು ದಿನಗಳಿಂದ ಹಗಲಿನಲ್ಲಿ ಉಷ್ಣಾಂಶದಲ್ಲಿ ಏರಿಕೆ ಕಂಡು ಬಂದಿತ್ತು. ಬಿಸಿಲು ಹೆಚ್ಚಾದ ಕಾರಣ ಕೃಷಿಕರು ಹಿಡುವಳಿಗಳ ನಿರ್ವಹಣೆಗೆ ಮುಂದಾಗಿದ್ದರು. ಭತ್ತದ ಕಟಾವಿಗೆ ಸಿದ್ಧತೆ ಆರಂಭಿಸಿದ್ದರು. ಆದರೆ, ನಸುಕಿನಿಂದಲೇ ಮೋಡ ಹೆಚ್ಚಾಗಿ, ಬೆಳಿಗ್ಗೆ 10ರಿಂದ ಮಳೆ ಬಿರುಸು ಪಡೆಯಿತು. ಇದರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಶ್ರಮಿಕರು ಕೆಲಸ ಸ್ಥಗಿತಗೊಳಸಿ ಮನೆಯತ್ತ ತೆರಳಬೇಕಾಯಿತು. ಒಣಗಿದ್ದ ಗ್ರಾಮೀಣ ರಸ್ತೆಗಳು ಮತ್ತೆ ಮಳೆಗೆ ಸಿಲುಕಿ ಕೆಸರಾಯಿತು. ಮೇಯಲು ತೆರಳಿದ್ದ ಜಾನುವಾರುಗಳು ಸುರಿಯುವ ಮಳೆ ನಡುವೆ ಸಂಜೆ ಮನೆಗಳಿಗೆ ವಾಪಸ್ ಆಗುತ್ತಿದ್ದ ದೃಶ್ಯ ಕಂಡುಬಂದಿತು.

‘ಭತ್ತ ತೆನೆಗಟ್ಟುವ ಸಮಯದಲ್ಲಿ ಮಳೆ ಕಾಡಿದೆ. ಮಳೆ ಮುಂದುವರಿದರೆ ಫಸಲಿಗೆ ರೋಗರುಜಿನ ಕಾಡಲಿದೆ. ಇಳುವರಿ ಕುಸಿಯಲಿದೆ. ಈ ವರ್ಷವೂ ಅತಿಯಾದ ವರ್ಷಧಾರೆ ಕೃಷಿಕರ ಪಾಡು ಹೆಚ್ಚಿಸಲಿದೆ’ ಎಂದು ಬೇಸಾಯಗಾರ ಹೊನ್ನೂರು ಮಂಜುನಾಥ್ ಹೇಳಿದರು.

ಮಂಜುಮಯ ಬಿಳಿಗಿರಿ ಕಾಂತಾರ: ಯಳಂದೂರು ತಾಲ್ಲೂಕಿನ ಪ್ರಸಿದ್ಧ ಬಿಳಿಗಿರಿಬನದ ಕಾನನ ಮುಂಜಾನೆಯಿಂದಲೇ ಮಂಜಿನಿಂದ ಆವೃತವಾಗಿತ್ತು. ಮಧ್ಯಾಹ್ನದ ಬೇಳೆ ಮಳೆಯ ಜೊತೆ ಕುಳಿರ್ಗಾಳಿಯೂ ಸೇರಿ ಚಳಿ ತುಂಬಿತು. ಭಕ್ತಾದಿಗಳು ಜರ್ಕಿನ್, ಸ್ಪೆಟರ್ ಧರಿಸಿ ರಂಗನಾಥನ ದರ್ಶನ ಪಡೆದರು. ಸಂಜೆ ದಟ್ಟ ಮಂಜಿನ ನಡುವೆ ಛತ್ರಿ ಹಿಡಿದು ದೇವಾಲಯ ದರ್ಶನ ಮಾಡಬೇಕಾಯಿತು.

‘ದೇಗುಲದಲ್ಲಿ ಕಲ್ಯಾಣೋತ್ಸವ ನೆರವೇರಿಸಲಾಯಿತು. ಆಲಯದೊಳಗೆ ಎಲ್ಲ ಪೂಜಾ ಕೈಂಕರ್ಯಗಳು ಜರುಗಿದವು. ಸ್ಥಳೀಯರು ದಿನವಿಡಿ ಕಾಡಿದ ಸೋನೆ ಮಳೆ ನಡುವೆ ಕಾಫಿ ಮತ್ತು ಮೆಣಸು ಬಳ್ಳಿಗಳ ನಿರ್ವಹಣೆಯಲ್ಲಿ ತೊಡಗಬೇಕಾಯಿತು’ ಎಂದು ದೇವಳದ ಶೇಷಾದ್ರಿ ಹೇಳಿದರು.

ಇನ್ನೂ ಎರಡು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT