ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು | ಬರಗಾಲದ ಪರಿಣಾಮ: ಬಾಯ್ತೆರೆದ ಜಲಾಶಯಗಳು

ತಳ ಸೇರಿದ ನೀರಿನ ಮಟ್ಟ, ಮಳೆ ಬಾರದಿದ್ದರೆ ಕಷ್ಟ
Published 14 ಏಪ್ರಿಲ್ 2024, 7:24 IST
Last Updated 14 ಏಪ್ರಿಲ್ 2024, 7:24 IST
ಅಕ್ಷರ ಗಾತ್ರ

ಹನೂರು: ಲಕ್ಷಾಂತರ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿ, ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸಿ, ನೂರಾರು ರೈತರಿಗೆ ಜೀವನಾಡಿಯಾಗಿದ್ದ ತಾಲ್ಲೂಕಿನ ಜಲಾಶಯಗಳು ಬರಗಾಲದ ಕಾರಣದಿಂದ ಬತ್ತುತ್ತಿವೆ. ಇವುಗಳನ್ನೇ ನಂಬಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ವನ್ಯಪ್ರಾಣಿಗಳು ನೀರು ಅರಸುತ್ತಾ ನಾಡಿನತ್ತ ಬರಲಾರಂಭಿಸಿವೆ. 

ತಾಲ್ಲೂಕಿನಲ್ಲಿರುವ ಜಲಾಶಯಗಳ ಪೈಕಿ ಗೋಪಿನಾಥಂ ಅಣೆಕಟ್ಟು ಬಿಟ್ಟು ಉಳಿದೆಲ್ಲ ಜಲಾಶಯಗಳಲ್ಲೂ ನೀರು ತಳಮುಟ್ಟಿದೆ.

ಡಿಸೆಂಬರ್ ತಿಂಗಳಲ್ಲಿ ಒಂದು ಜೋರು ಮಳೆಯಾದ ಪರಿಣಾಮ ಗೋಪಿನಾಥಂ ಜಲಾಶಯಕ್ಕೆ ನೀರು ಹರಿದು ಬಂದಿತ್ತು. ಇದರಿಂದಾಗಿ ವನ್ಯಪ್ರಾಣಿಗಳು ಹಾಗೂ ಕೃಷಿ ಜಮೀನಿಗೆ ಕೊಂಚ ಅನುಕೂಲವಾಗಿದೆ.

‘ಈಗ ಇರುವ ನೀರು ಎರಡು ತಿಂಗಳಿಗೆ ಸಾಕಾಗಬಹುದು. ಅಷ್ಟರೊಳಗೆ ಮಳೆಯಾಗದಿದ್ದರೆ ಇಲ್ಲೂ ನೀರಿನ ಸಮಸ್ಯೆ ಉದ್ಭವವಾಗಲಿದೆ’ ಎನ್ನುತ್ತಾರೆ ಸ್ಥಳೀಯರು.

ತಾಲ್ಲೂಕಿನ ಪ್ರಮುಖ ಅಣೆಕಟ್ಟೆಯಾದ ಗುಂಡಾಲ್‌ ಜಲಾಶಯ 0.89 ಟಿಎಂಸಿ ಅಡಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಎರಡು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದ ಕಾರಣ ಜಲಾಶಯ ಭರ್ತಿಯಾಗಿಲ್ಲ. 2022ರಲ್ಲಿ ಭರ್ತಿಯಾಗಿ ಕೋಡಿ ಹರಿದಿತ್ತು. ಇದಾದ ಬಳಿಕ ಜಲಾಶಯ ಬತ್ತತೊಡಗಿದೆ. ಈಗ ನೀರಿನ ಮಟ್ಟ 3 ಅಡಿಗೆ ಕುಸಿದಿದೆ.

ಉಡುತೊರೆ ಜಲಾಶಯದ ಸ್ಥಿತಿಯೂ ಭಿನ್ನವಾಗಿಲ್ಲ. 0.99 ಟಿಎಂಸಿ ಅಡಿ ಸಮಾರ್ಥ್ಯ ಹೊಂದಿರುವ ಈ ಜಲಾಶಯ ಈಗ ಸಂಪೂರ್ಣ ಬರಿದಾಗಿದೆ. ಈ ನೀರನ್ನೇ ನಂಬಿ ಬದುಕುತ್ತಿದ್ದ ರೈತರು ಈಗ ಚಿಂತೆಗೀಡಾಗಿದ್ದಾರೆ.

ಹುಬ್ಬೆಹುಣಸೆ, ರಾಮನಗುಡ್ಡೆ ಹಾಗೂ ಮೀಣ್ಯತ್ತಳ್ಳ ಜಲಾಶಯಗಳು ನೀರಿಲ್ಲದೇ ಬರಡಾಗಿವೆ. ಕೃಷಿ, ಜಾನುವಾರು ಹಾಗೂ ವನ್ಯಪ್ರಾಣಿಗಳಿಗೆ ವರದಾನವಾಗಿದ್ದ ಜಲಾಶಯಗಳು ಬಾಯ್ತೆರೆದು ನಿಂತಿರುವುದರಿಂದ ಮನುಷ್ಯರಿಗಲ್ಲದೇ ವನ್ಯಪ್ರಾಣಿಗಳ ಮೇಲೂ ಪ್ರಭಾವ ಬೀರಿದೆ.

‘ಇತ್ತೀಚಿನ ವರ್ಷಗಳಲ್ಲಿ ಜಲಾಶಯಗಳಲ್ಲಿನ ನೀರು ಇಷ್ಟು ಪ್ರಮಾಣದಲ್ಲಿ ಕಡಿಮೆಯಾದ ಉದಾಹರಣಗಳಿಲ್ಲ’ ಎಂದು ಹೇಳುತ್ತಾರೆ ತಾಲ್ಲೂಕಿನ ಹಿರಿಯರು. 

‘ಹನೂರು ಭಾಗದಲ್ಲಿ ಸಾಮಾನ್ಯವಾಗಿ ಜೂನ್ ಅಥವಾ ಜುಲೈ ತಿಂಗಳವರೆಗೂ ಜಲಾಶಯಗಳಲ್ಲಿ ನೀರು ಇರುತ್ತದೆ. ಆ ಬಳಿಕ, ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಮಳೆಯಾದರೆ ಮತ್ತೆ ನೀರು ಭರ್ತಿಯಾಗುತ್ತಾ ಹೋಗುತ್ತದೆ.  ಈ ವರ್ಷ ಏಪ್ರಿಲ್ ತಿಂಗಳಲ್ಲಿಯೇ ಬರಿದಾಗಿವೆ. ಇನ್ನು ಒಂದೆರಡು ತಿಂಗಳು ಮಳೆ ಬಾರದಿದ್ದರೆ, ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಲು ಸಾಧ್ಯವಿಲ್ಲ’ ಎಂದು ಕಾಮಗೆರೆಯ ರೈತ ಮಹದೇವಪ್ಪ ಎಂದು ಆತಂಕ ವ್ಯಕ್ತಪಡಿಸಿದರು. 

ಅಂತರ್ಜಲ ಕುಸಿತ: ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆಯೇ ಜಮೀನುಗಳಲ್ಲಿರುವ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ.

‘ಮಳೆಗಾಲಕ್ಕೆ ಎರಡು ತಿಂಗಳು ಬಾಕಿಯಿರುವಾಗಲೇ ನೀರಿನ ಮಟ್ಟ ಕಡಿಮೆಯಾದರೆ ಮುಂದೆ ನೀರಿಗೆ ಗತಿಯೇನು’ ಎಂಬ ದುಗುಡ ರೈತರನ್ನು ಕಾಡತೊಡಗಿದೆ.

ತಾಲ್ಲೂಕಿನ ಜಲಾಶಯಗಳ ನೀರಿನ ಸ್ಥಿತಿಗತಿಗಳ ಬಗ್ಗೆ ‘ಪ್ರಜಾ‌ವಾಣಿ’ಗೆ ಪ್ರತಿಕ್ರಿಯಿಸಿದ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಮಕೃಷ್ಣ, ‘ಸಾಮಾನ್ಯವಾಗಿ ಮೇ ಅಥವಾ ಜೂನ್ ತಿಂಗಳಲ್ಲಿ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿತ್ತು. ಕಳೆದ ವರ್ಷ ಮಳೆಕೊರತೆಯಾಗಿದ್ದರಿಂದ ಈಗ ಏಪ್ರಿಲ್ ತಿಂಗಳಲ್ಲೇ ನೀರಿನ ಮಟ್ಟ ಗಣನೀಯವಾಗಿ ಇಳಿದಿದೆ. ಹೀಗಾಗಿ, ಮುಂದೆ ಮಳೆಯಾಗದಿದ್ದರೆ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ’ ಎಂದರು. 

ಹನೂರು ತಾಲ್ಲೂಕಿನ ಕೆ.ಗುಂಡಾಪುರ ಬಳಿಯಿರುವ ಉಡುತೊರೆ ಜಲಾಶಯದಲ್ಲಿ ನೀರು ಬಹುತೇಕ ಖಾಲಿಯಾಗಿದೆ
ಹನೂರು ತಾಲ್ಲೂಕಿನ ಕೆ.ಗುಂಡಾಪುರ ಬಳಿಯಿರುವ ಉಡುತೊರೆ ಜಲಾಶಯದಲ್ಲಿ ನೀರು ಬಹುತೇಕ ಖಾಲಿಯಾಗಿದೆ
ಹೂಳೆತ್ತಿಸಲು ಸಕಾಲ
ಜಲಾಶಯಗಳಲ್ಲಿ ನೀರು ತಳಮಟ್ಟದವರೆಗೆ ಸಂಪೂರ್ಣವಾಗಿ ಬತ್ತಿಹೋಗಿ ನೀರಿನ ಸಮಸ್ಯೆ ತಲೆದೋರುವ ಸಂಭವ ಇದ್ದರೂ ಇದೇ ಸಮಯಲ್ಲಿ ಜಲಾಶಯಗಳಲ್ಲಿನ ಹೂಳನ್ನು ತೆರವು ಮಾಡುವುದಕ್ಕೆ ಅವಕಾಶ ಇದೆ.  ‘ನೀರಾವರಿ ಇಲಾಖೆಗಳು ಈ ಸಂದರ್ಭವನ್ನು ಬಳಸಿಕೊಂಡು ಜಲಾಶಯಗಳಲ್ಲಿ ಹೂಳೆತ್ತಿಸಿದರೆ ಜಲಾಶಯಗಳ ನೀರಿನ ಸಂಗ್ರಹಣಾ ಸಾಮಾರ್ಥ್ಯ ಹೆಚ್ಚುವುದರ ಜತೆಗೆ ಧೀರ್ಘಕಾಲ ನೀರು ಜಲಾಶಯಗಳಲ್ಲಿ ಉಳಿಸಯುವಂತೆ ಮಾಡಬಹುದು. ಇದನ್ನು ಅಧಿಕಾರಿಗಳು ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ’ ಎಂದು ತಾಲ್ಲೂಕಿನ ರೈತರು ಒತ್ತಾಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT