ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನೂರ ಮಹಾದೇವ ಯಾವ ಒತ್ತಡದಲ್ಲಿ ಹೇಳಿದ್ದಾರೋ ತಿಳಿಯದು: ಸಚಿವ ನಾಗೇಶ್‌

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ: ಲೇಖನಕ್ಕೆ ಅನುಮತಿ ನಿರಾಕರಿಸಿದ್ದಕ್ಕೆ ಶಿಕ್ಷಣ ಸಚಿವರ ಪ್ರತಿಕ್ರಿಯೆ
Last Updated 25 ಮೇ 2022, 11:26 IST
ಅಕ್ಷರ ಗಾತ್ರ

ಚಾಮರಾಜನಗರ: ‘ಶಾಲಾ ಪಠ್ಯದಲ್ಲಿ ತಮ್ಮ ಲೇಖನವನ್ನು ಪ್ರಕಟಿಸಲು ಒಪ್ಪಿಗೆ ಇಲ್ಲ ಎಂದು ಸಾಹಿತಿ ದೇವನೂರ ಮಹಾದೇವ ಅವರು ಯಾವ ಒತ್ತಡದಲ್ಲಿ ಹೇಳಿದ್ದರೋ ತಿಳಿಯದು. ಈ ಬಗ್ಗೆ ಅವರೊಂದಿಗೆ ನಾನು ಮಾತನಾಡುತ್ತೇನೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಬುಧವಾರ ಹೇಳಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ದೇವನೂರ ಮಹಾದೇವ ಅವರಬಗ್ಗೆ ನನಗೆ ಅಪಾರವಾದ ವಿಶ್ವಾಸ ಇದೆ. ಅವರ ಬುದ್ಧಿವಂತಿಕೆ, ಹೋರಾಟದ ಬಗ್ಗೆ ಕಳಕಳಿಯೂ ಇದೆ. ಪಠ್ಯ ಪರಷ್ಕರಣೆ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ. ಪುಸ್ತಕಗಳ ಮುದ್ರಣ ಬಹುತೇಕ ಮುಗಿದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮಕ್ಕಳ ಕೈಗೆ ಸಿಗಲಿದೆ ಎಂಬುದನ್ನು ಅವರಿಗೆ ತಿಳಿಸುತ್ತೇನೆ’ ಎಂದರು.

ಕಾಂಗ್ರೆಸ್‌ನಿಂದ ಗೊಂದಲ ಸೃಷ್ಟಿ: ‘ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಕಾಂಗ್ರೆಸ್‌ ಗೊಂದಲ ಸೃಷ್ಟಿಸಿದೆ. ವೈಚಾರಿಕವಾಗಿ ವಿಷಯಗಳ ಮೇಲೆ ವಾದ ಮಾಡಲು ವಿಫಲಾಗಿರುವ ಕಾಂಗ್ರೆಸ್‌ ಮುಖಂಡರು ಈಗ ಹತಾಶರಾಗಿ ಮಾತನಾಡುತ್ತಿದ್ದಾರೆ’ ಎಂದು ಅವರು ದೂರಿದರು.

‘ಹಿಜಾಬ್‌ ವಿಚಾರವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಲು ಪ್ರಯತ್ನಿಸಿ ವಿಫಲರಾದರು. ಕೋವಿಡ್‌ ಸಮಯದಲ್ಲಿ ಶಾಲೆಗಳನ್ನು ಆರಂಭಿಸಿದಾಗಲೂ ಅದರ ಬಗ್ಗೆ ಮಾತನಾಡಿ ವೈಫಲ್ಯ ಕಂಡರು. ಉತ್ತರ ಪ್ರದೇಶದ ಚುನಾವಣೆಯ ಫಲಿತಾಂಶದ ನಂತರ ಇಡೀ ದೇಶದಲ್ಲಿ ಕಾಂಗ್ರೆಸ್‌ ಎಲ್ಲಿ ಇಲ್ಲದಾಗಿ ಬಿಡುತ್ತದೆಯೋ ಎಂಬ ಭಯದಿಂದ ಹತಾಶರಾಗಿ ಸರ್ಕಾರದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ವೈಚಾರಿಕವಾಗಿ ಹೋರಾಟ ನಡೆಯಲಿ. ತಾತ್ವಿಕ ಭಿನ್ನತೆಯ ಚರ್ಚೆಗೆ ನಾವು ಸಿದ್ಧರಿದ್ದೇವೆ. ಪಠ್ಯ ಪುಸ್ತಕ ವಿಚಾರವನ್ನು ರಾಜಕೀಯಗೊಳಿಸುವುದಕ್ಕೆ, ಸುಳ್ಳು ಆರೋಪಗಳನ್ನು ಮಾಡಿ ಹಿಂದೂ ಸಮಾಜವನ್ನು ಒಡೆಯಲು ಯತ್ನಿಸಿದಾಗ ಸರ್ಕಾರವು ಚರ್ಚೆಗೆ ಪ್ರತಿಕ್ರಿಯಿಸುವ ಅನಿವಾರ್ಯತೆ ಬಂತು’ ಎಂದು ನಾಗೇಶ್‌ ಅವರು ಹೇಳಿದರು.

‘ಪಠ್ಯ ಪರಿಷ್ಕರಣೆ ಸಮಿತಿಯು ಎಂಟು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಆಗ ಮಾತನಾಡದೆ ಈಗ ಆ ಪಠ್ಯ ಕೈಬಿಟ್ಟಿದ್ದಾರೆ, ಈ ಪಠ್ಯ ಕೈ ಬಿಟ್ಟಿದ್ದಾರೆ ಎಂದು ಆರೋಪಿಸಿದರು. ಪಠ್ಯ ಪುಸ್ತಕ ಹೊರ ಬಂದಾಗ ಆರೋಪಗಳೆಲ್ಲವೂ ಸುಳ್ಳು ಎಂದಾಯಿತು. ಪಠ್ಯ ಪರಿಷ್ಕರಣೆ ಆರಂಭವಾಗುವುದಕ್ಕೂ ಮೊದಲೇ ಟಿಪ್ಪು ಪಠ್ಯ ಕೈ ಬಿಟ್ಟಿದ್ದಾರೆ ಎಂದು ಹೇಳಿದರು. ಟಿಪ್ಪು ಪಠ್ಯ ಇದೆ ಎಂದು ಗೊತ್ತಾಯಿತೋ, ಭಗತ್‌ ಸಿಂಗ್‌ ಪಠ್ಯ ಇಲ್ಲ ಎಂದರು. ಅದು ಸುಳ್ಳು ಎಂದಾದ ಮೇಲೆ ನಾರಾಯಣ ಗುರು, ಬಸವಣ್ಣ, ಕುವೆಂಪು ಅವರ ಪಠ್ಯದ ಬಗ್ಗೆ ಮಾತನಾಡಿದರು. ಈ ಆರೋಪಗಳೂ ಸುಳ್ಳಾದ ನಂತರ ಈಗ ಜಾತಿಯ ವಿಚಾರವನ್ನು ಮುಂದಿಟ್ಟುಕೊಂಡು ಆರೋಪಿಸುತ್ತಿದ್ದಾರೆ. ಕಾಂಗ್ರೆಸ್‌ ವೈಚಾರಿಕತೆಯ ಅದಃಪತನಕ್ಕೆ ಇಳಿದಿದೆ’ ಎಂದು ಸಚಿವರು ಟೀಕಿಸಿದರು.

‘ನಾವು ಏನನ್ನೂ ಮುಚ್ಚಿಟ್ಟಲ್ಲ. ಪಠ್ಯ ಪುಸ್ತಕ ಮುದ್ರಣ ಆಗಿದೆ. ಯಾರು ಬೇಕಾದರೂ ನೋಡಬಹುದು. ಹಿಂದಿನವರು ಮಹಾರಾಜರ ಪಠ್ಯ ತೆಗೆದಿರಲಿಲ್ಲವೇ? ಟಿಪ್ಪು ಪಠ್ಯ‌ವನ್ನು ಐದು ಪುಟಗಳಷ್ಟು ವಿಸ್ತರಿಸಿರಲಿಲ್ಲವೇ.. ಎಂಬುದನ್ನೂ ತಿಳಿಯಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT